ರಾಜ್ಯದಲ್ಲಿ ಬಂಡವಾಳ ಹೂಡಿಕೆ : ದಕ್ಷಿಣ ಕೊರಿಯಾ ಪ್ರತಿನಿಧಿಗಳ ಜೊತೆ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಸಭೆ

Update: 2024-06-13 16:01 GMT

ಬೆಂಗಳೂರು‌ : ರಾಜ್ಯದಲ್ಲಿ ಬಂಡವಾಳ ಹೂಡಿಕೆ ಸಾಧ್ಯತೆಗಳನ್ನು ಚರ್ಚಿಸಲು ದಕ್ಷಿಣ ಕೊರಿಯಾದ ನಿಯೋಗವು ಇಂದು ಇಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರನ್ನು ಭೇಟಿಯಾಗಿತ್ತು.

ಗರಿಷ್ಠ ನಿಖರತೆಯ ಮತ್ತು ಹೆಚ್ಚಿನ ಮೌಲ್ಯದ ಕಂಪ್ಯೂಟರೈಸ್ಡ್‌ ನ್ಯುಮೆರಿಕಲ್‌ ಕಂಟ್ರೋಲ್‌ (ಸಿಎನ್‌ಸಿ) ಯಂತ್ರೋಪಕರಣಗಳನ್ನು ತಯಾರಿಸುವ ಜಾಗತಿಕ ಪ್ರಮುಖ ತಯಾರಿಕಾ ಕಂಪನಿಯಾಗಿರುವ ದಕ್ಷಿಣ ಕೊರಿಯಾದ ಡಿಎನ್ ಸೊಲುಷನ್ಸ್‌ನ ಪ್ರತಿನಿಧಿಗಳು ಈ ಸಭೆಯಲ್ಲಿ ಭಾಗವಹಿಸಿದ್ದರು. ರಾಜ್ಯ ಸರ್ಕಾರ ಮತ್ತು ಡಿ.ಎನ್‌. ಸೊಲುಷನ್ಸ್‌ ನಡುವಣ ಪಾಲುದಾರಿಕೆಯ ಒಪ್ಪಂದಗಳನ್ನು ಕಾರ್ಯಗತಗೊಳ್ಳಲು ಸ್ಯಾವೆಲ್ಸ್‌ ಇಂಡಿಯಾ ನೆರವಾಗುತ್ತಿದ್ದು, ಅದರ ಪ್ರತಿನಿಧಿಗಳೂ ಸಭೆಯಲ್ಲಿ ಉಪಸ್ಥಿತರಿದ್ದರು.

ಡಿಎನ್‌ ಸೊಲ್ಯೂಷನ್ಸ್, ದಕ್ಷಿಣ ಕೊರಿಯಾದ ಯಂತ್ರೋಪಕರಣ ತಯಾರಿಸುವ ಅತಿದೊಡ್ಡ ಮತ್ತು ಲೋಹ-ಕತ್ತರಿಸುವ ಯಂತ್ರ ತಯಾರಿಸುವ ವಿಶ್ವದ ಮೂರನೇ ಅತಿದೊಡ್ಡ ಕಂಪನಿಯಾಗಿದೆ. ವಾಹನ ತಯಾರಿಕೆ, ಸೆಮಿಕಂಡಕ್ಟರ್‌, ಐಟಿ, ವಿಮಾನಯಾನ, ವೈದ್ಯಕೀಯ ಸೇವೆಗಳು ಮತ್ತಿತರ ಉದ್ಯಮಗಳಿಗೆ 400 ಕ್ಕೂ ಹೆಚ್ಚು ಬಗೆಯ ವೈವಿಧ್ಯಮಯ ಉತ್ಪನ್ನಗಳನ್ನು ಈ ಕಂಪನಿಯೇ ವಿನ್ಯಾಸಗೊಳಿಸುತ್ತಿದೆ.

ಕಂಪನಿಯ ಭಾರತದ ನಿರ್ದೇಶಕ ಯಂಗ್‌ಸಮ್ ಕಿಮ್ ಮತ್ತು ಯೋಜನಾ ನಿರ್ದೇಶಕ ಜೊಂಘಿ ಯುನ್ ಅವರು ನಿಯೋಗದ ನೇತೃತ್ವವಹಿಸಿದ್ದರು. ಸಭೆಯಲ್ಲಿ ಸ್ಯಾವಿಲ್ಸ್‌ ಇಂಡಿಯಾದ ಕೈಗಾರಿಕಾ ಮತ್ತು ಸರಕುಸಾಗಣೆ ವಿಭಾಗದ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ್ ಎನ್. ಅವರೂ ಭಾಗವಹಿಸಿದ್ದರು.

ಜುಲೈನಲ್ಲಿ ಸೋಲ್‌ಗೆ ರಾಜ್ಯದ ನಿಯೋಗ:

ದ್ವಿಪಕ್ಷೀಯ ಬಂಡವಾಳ ಹೂಡಿಕೆ ಸಂಬಂಧಗಳನ್ನು ಬಲಪಡಿಸಲು ರಾಜ್ಯ ಸರ್ಕಾರದ ಉನ್ನತ ಮಟ್ಟದ ನಿಯೋಗವು ಜುಲೈನಲ್ಲಿ ದಕ್ಷಿಣ ಕೊರಿಯಾಕ್ಕೆ ತೆರಳಲಿದೆ. ಈ ಸಂದರ್ಭದಲ್ಲಿ ನಿಯೋಗವು ಸೋಲ್‌ನಲ್ಲಿ ಡಿಎನ್ ಸೊಲ್ಯೂಷನ್ಸ್‌ನ ಅಧ್ಯಕ್ಷರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಲಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News