ಬಸ್ಸಿನಲ್ಲಿ ಬಲವಂತವಾಗಿ ಟೋಪಿ ತೆಗೆಸಿದ ಪ್ರಕರಣ: ಬಿಎಂಟಿಸಿ ನಿರ್ವಾಹಕ ಆಸಿಫ್ ರನ್ನು ಭೇಟಿಯಾದ ಮಾಜಿ ಶಾಸಕಿ ಸೌಮ್ಯಾ ರೆಡ್ಡಿ

Update: 2023-07-18 13:13 GMT

ಬೆಂಗಳೂರು:  ಇತ್ತೀಚೆಗೆ ಸಾಮಾಜಿಕ ತಾಣದಲ್ಲಿ ವೈರಲ್‌ ಆಗಿರುವ ವೀಡಿಯೋದಲ್ಲಿ ಟೋಪಿ ಧರಿಸಿದ್ದ ಕಂಡಕ್ಟರ್‌ ಓರ್ವರಿಗೆ ಮಹಿಳೆಯೋರ್ವರು ಅವರ ಧಿರಿಸಿನ ಕುರಿತು ವಾಗ್ವಾದ ನಡೆಸಿದ್ದು ದಾಖಲಾಗಿತ್ತು. ಈ ಕುರಿತು ಸಾಮಾಜಿಕ ತಾಣದಲ್ಲೆಡೆ ಆಕ್ರೋಶ ವ್ಯಕ್ತವಾಗಿತ್ತು. ಮಹಿಳೆಯ ನಡೆಯ ಬಗ್ಗೆ ಹಲವು ಮಂದಿ ಆಕ್ಷೇಪ ವ್ಯಕ್ತಪಡಿಸಿದ್ದರು.

ಇದೀಗ ಟೋಪಿ ಧರಿಸಿದ್ದ ಕಂಡಕ್ಟರ್‌ ಆಸಿಫ್ ಅವರನ್ನು ಭೇಟಿಯಾಗಿರುವ ಮಾಜಿ ಶಾಸಕಿ ಸೌಮ್ಯಾ ರೆಡ್ಡಿ ನಿರ್ವಾಹಕರಿಗೆ ಧೈರ್ಯ ತುಂಬಿದ್ದಾರೆ.  

ಈ ಕುರಿತು ಟ್ವಿಟರ್ ನಲ್ಲಿ ನಿರ್ವಾಹಕ ಆಸಿಫ್ ಜೊತೆಗಿನ ಫೋಟೊ ಹಂಚಿಕೊಂಡಿರುವ ಅವರು,  ಘಟನೆಯ ಬಗ್ಗೆ ನಮಗೆ ಬೇಸರವಾಗಿದ್ದನ್ನು ಆಸೀಫ್ ಅವರಿಗೆ ತಿಳಿಸಿದೆವು. ಸಾರಿಗೆ ಸಚಿವರಾದ ರಾಮಲಿಂಗಾ ರೆಡ್ಡಿ ಅವರು ಸಹ ಆಸಿಫ್ ಅವರೊಂದಿಗೆ ಫೋನ್'ನಲ್ಲಿ ಮಾತನಾಡಿದರು. ಈ ವಿಚಾರದಲ್ಲಿ ಮೊದಲಿನಿಂದಲೂ ಒಗ್ಗಟ್ಟು ಪ್ರದರ್ಶಿಸಿದ ಇತರ ಬಸ್ ನಿರ್ವಾಹಕರು, ಚಾಲಕರು ಮತ್ತು ಡಿಪೋ ಮ್ಯಾನೇಜರ್ ಶ್ರೀ ಕಾಂತರಾಜ್ ಅವರೊಂದಿಗೆ ಸಹ ಮಾತುಕತೆ ನಡೆಸಿರುವುದಾಗಿ ತಿಳಿಸಿದ್ದಾರೆ.

''ಕುಂಕುಮ, ಸಿಂಧೂರ ಮತ್ತು ಬಿಂದಿ ನಮ್ಮ ಸಾಂಸ್ಕೃತಿಕ ಆಸ್ಮಿತೆಯಾಗಿದ್ದು ಇದನ್ನು ಇಟ್ಟುಕೊಳ್ಳಲು ನಮಗೆ ಎಷ್ಟು ಹಕ್ಕಿದೆಯೋ, ಅದರಂತೆಯೇ ಸಿಖ್ ಪೇಟವನ್ನು, ಕ್ರಿಶ್ಚಿಯನ್ ಶಿಲುಬೆಯನ್ನು ಸೇರಿದಂತೆ ಪ್ರತಿಯೊಬ್ಬರೂ ತಮ್ಮ ಧರ್ಮವನ್ನು ಇತರರಿಗೆ ತೊಂದರೆಯಾಗದ ರೀತಿಯಲ್ಲಿ ಪಾಲಿಸಲು ನಮ್ಮ ದೇಶದಲ್ಲಿ ಸಮಾನ ಅವಕಾಶವಿದೆ. ‘ನಾವು ಬೇರೆ ಅವರು ಬೇರೆ’ ಎಂಬ ಮನೋಭಾವನೆಯಿಂದ ಮುಕ್ತರಾಗಿ ಹೃದಯವೈಶಾಲ್ಯ ಬೆಳೆಸಿಕೊಂಡು ಬದುಕಿದರೆ ಮಾತ್ರ 'ವಸುದೈವ ಕುಟುಂಬಕಂ' ಎಂಬ ನಮ್ಮ ಹಿರಿಯರ ಸಂದೇಶಕ್ಕೆ ಒಂದು ಸರಿಯಾದ ಅರ್ಥ ಸಿಗುತ್ತದೆ'' ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News