ಜಾತಿ ನಿಂದನೆ: ನಟ ಉಪೇಂದ್ರ ಬಳಿಕ ಇದೀಗ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಸರದಿ!
ಬೆಂಗಳೂರು: ‘ಊರು ಅಂದ್ಮೇಲೆ ಹೊಲೆಗೇರಿ ಇರುತ್ತೆ’ ಎಂದು ಫೇಸ್ಬುಕ್ ಲೈವ್ ವಿಡಿಯೋದಲ್ಲಿ ಹೇಳಿಕೆ ನೀಡಿದ್ದ ನಟ ಹಾಗೂ ಪ್ರಜಾಕೀಯ ಪಕ್ಷದ ಸಂಸ್ಥಾಪಕ ಉಪೇಂದ್ರ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಪ್ರಕರಣ ದಾಖಲಾಗಿತ್ತು. ಬಳಿಕ ಅವರ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಇದೀಗ ಉಪೇಂದ್ರ ಅವರ ಹೇಳಿಕೆ ಬಳಿಕ ತೋಟಗಾರಿಕಾ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರ ಹಳೆಯ ವೀಡಿಯೊ ಒಂದು ಹರಿದಾಡುತ್ತಿದೆ.
ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಎಸ್.ಎಸ್.ಮಲ್ಲಿಕಾರ್ಜುನ್ ಅವರನ್ನು ಅವರ ಪತ್ನಿ ಡಾ. ಪ್ರಭಾ ಮಲ್ಲಿಕಾರ್ಜುನ್ ಸಂದರ್ಶನ ನಡೆಸಿದ್ದು, ಈ ಸಂದರ್ಶನದ ವೀಡಿಯೊವನ್ನು ನಮ್ಮ ಮಲ್ಲಣ್ಣ @NammaMallanna ಎಂಬ ಯೂಟ್ಯೂಬ್ ಚಾನೆಲ್ ಮೇ 9ರಂದು ಅಪ್ಲೋಡ್ ಮಾಡಿದೆ. ಅದರಲ್ಲಿ ಸಚಿವರು ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತವಾಗಿದೆ.
ಮಲ್ಲಿಕಾರ್ಜುನ್ ಅವರು ಹೇಳಿದ್ದೇನು?
ಸಂದರ್ಶನದಲ್ಲಿ ಮಲ್ಲಿಕಾರ್ಜಿನ್ ಅವರ ಪತ್ನಿ ಪ್ರಭಾ ಮಲ್ಲಿಕಾರ್ಜುನ್, ದಾವಣಗೆರೆ ನಗರದ ಅಶೋಕ್ ಥಿಯೇಟರ್ ಬಳಿ ನಿರ್ಮಾಣಗೊಂಡಿರುವ ಅಂಡರ್ ಪಾಸ್ ಬಗ್ಗೆ ಅಭಿಪ್ರಾಯ ಕೇಳಿದಾಗ, ಇದನ್ನು ನೀವು ಆ ಸೀದ್ದೇಶ್ವರ್ (ಸಂಸದರು) ಅವರಲ್ಲಿ ಕೇಳಬೇಕು. ಅದು ಅಸಮರ್ಪಕವಾಗಿದೆ. ಈ ಬಗ್ಗೆ ಹಲವು ಬಾರಿ ನಾನು ಪ್ರಶ್ನೆ ಮಾಡಿದ್ದೆ, ಸಂಬಂಧಪಟ್ಟ ಇಂಜಿನಿಯರ್ ಗಳನ್ನು ತರಾಟೆಗೆ ತೆಗೆದುಕೊಂಡಿದ್ದೆ. ʼʼಊರನ್ನು ಹೊಲೆಗೇರಿ ಮಾಡಬೇಡಿʼʼ ಅಂತ ಹೇಳಿದ್ದೆ ಎಂದು ಮಲ್ಲಿಕಾರ್ಜುನ್ ಅವರು ಹೇಳಿರುವುದು ಈಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ʼʼಉಪೇಂದ್ರ ವಿರುದ್ಧ ಕೋರ್ಟ್ ಮೆಟ್ಟಿಲು ಹತ್ತಿರೋ ಜನರು ಎಸ್.ಎಸ್.ಮಲ್ಲಿಕಾರ್ಜುನ್ ವಿರುದ್ಧ ಯಾವಾಗ ಎಫ್ ಐ ಆರ್ ದಾಖಲು ಮಾಡ್ತಿರಾ?ʼʼ ಎಂದು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆ ಮಾಡಿದ್ದಾರೆ.