ಕಾವೇರಿ ಬಿಕ್ಕಟ್ಟು | ಪ್ರಧಾನಿ ಮೋದಿ ಮಧ್ಯಪ್ರವೇಶಕ್ಕೆ ಎಚ್.ಡಿ.ದೇವೇಗೌಡ ಒತ್ತಾಯ
ಬೆಂಗಳೂರು, ಸೆ. 25: ‘ಕಾವೇರಿ ನದಿ ನೀರಿನ ವಿಷಯದಲ್ಲಿ ಪ್ರಧಾನಿ ಮೋದಿ ತಕ್ಷಣವೇ ಮಧ್ಯಪ್ರವೇಶ ಮಾಡಬೇಕು ಹಾಗೂ ಎರಡೂ ರಾಜ್ಯಗಳ ವಾಸ್ತವ ಸ್ಥಿತಿಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಸುಪ್ರೀಂ ಕೋರ್ಟಿಗೆ ಪರಿಶೀಲನಾ ಅರ್ಜಿ ಸಲ್ಲಿಸಲು ಜಲಶಕ್ತಿ ಸಚಿವಾಲಯಕ್ಕೆ ಆದೇಶ ಮಾಡಬೇಕು’ ಎಂದು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಒತ್ತಾಯಿಸಿದ್ದಾರೆ.
ಸೋಮವಾರ ಜೆಡಿಎಸ್ ಕಚೇರಿಯಲ್ಲಿ ಮಾತನಾಡಿದ ಅವರು, ಕಾವೇರಿ ನೀರಿನ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದೇನೆಂದು ಆ ಪತ್ರವನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದರು. ಎರಡು ರಾಜ್ಯಗಳಿಗೆ ಸಂಬಂಧವಿಲ್ಲದ, ತಟಸ್ಥವಾದ ಒಂದು ಸಮಿತಿಯನ್ನು ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಿಗೆ ಕಳುಹಿಸಿ ವಸ್ತುನಿಷ್ಠ ಮಾಹಿತಿ ಪಡೆದುಕೊಳ್ಳಬೇಕೆಂದು ಮೋದಿಯವರನ್ನು ಮನವಿ ಮಾಡುತ್ತೇನೆ ಎಂದರು.
ವಾಸ್ತವಾಂಶ ಆಧಾರದ ಮೇಲೆ ಕೇಂದ್ರ ಜಲ ಶಕ್ತಿ ಇಲಾಖೆಯಿಂದ ಸುಪ್ರೀಂ ಕೋರ್ಟ್‍ಗೆ ಅರ್ಜಿ ಹಾಕಬೇಕು. ಮಳೆ ಇಲ್ಲದೆ ಕಂಗಾಲಾಗಿರುವ ರಾಜ್ಯದ ರೈತರ ನೆರವಿಗೆ ಧಾವಿಸಬೇಕು. ಮಳೆ ಕೊರತೆ ಕಾರಣದಿಂದ ರೈತರು ಪರದಾಡುತ್ತಿದ್ದಾರೆ. ಕಾವೇರಿ ಕೊಳ್ಳದ ಜಲಾಶಯಗಳಿಗೆ ನೀರು ಹರಿದು ಬಂದಿಲ್ಲ. ವಸ್ತುಸ್ಥಿತಿ ಹೀಗಿದ್ದರೂ ಕಾವೇರಿ ನದಿ ನೀರು ಪ್ರಾಧಿಕಾರ ಹಾಗೂ ಸುಪ್ರೀಂ ಕೋರ್ಟ್ ತಮಿಳುನಾಡಿಗೆ ನೀರು ಹರಿಸುವಂತೆ ಆದೇಶಿಸಿವೆ. ಇದು ರಾಜ್ಯದ ಸಂಕಷ್ಟ ತಂದಿದೆ. ಕಾವೇರಿ ಭಾಗದ ಜನ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಅವರು ತಿಳಿಸಿದರು.
ಸುಪ್ರೀಂ ಕೋರ್ಟ್ ಆದೇಶದ ಬಗ್ಗೆ ನಾನು ಮಾತನಾಡುವುದಿಲ್ಲ. ಆದರೆ, ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿದೆ. ಈ ಬಗ್ಗೆ ಕುಮಾರಸ್ವಾಮಿ ಸ್ಥಳ ಪರಿಶೀಲನೆ ಮಾಡಬೇಕಿತ್ತಾ? ಯಾಕೆ ಸರಕಾರಕ್ಕೆ ಸಾಧ್ಯವಿಲ್ಲವೇ? ನಮ್ಮ ಜಲ ಸಂಪನ್ಮೂಲ ಇಲಾಖೆಗೆ ಏನಾಗಿದೆ? ಕುಮಾರಸ್ವಾಮಿ ಕೆಆರ್‍ಎಸ್‍ಗೆ ಹೋಗಿ ಬಂದ ಒಂದು ಗಂಟೆಯೊಳಗೆ ಅಂದೇ ಈ ಮಾಹಿತಿ ಕೊಟ್ಟಿದ್ದೇನೆ’ ಎಂದು ಅವರು ಟೀಕಿಸಿದರು.
ಕಾಂಗ್ರೆಸ್ ಅನ್ಯಾಯ ಮಾಡಿದೆ: ಕುಮಾರಸ್ವಾಮಿ ಮಾತಿಗೆ ಸರಕಾರ ಎಷ್ಟು ಮಾನ್ಯತೆ ಕೊಟ್ಟಿದೆ? ಕಾಂಗ್ರೆಸ್‍ಗೆ ಮೊದಲಿನಿಂದಲೂ ಕಾವೇರಿ ಬಗ್ಗೆ ಕರ್ನಾಟಕದ ಪರ ನಿಲುವು ಇಲ್ಲ. ಕುಮಾರಸ್ವಾಮಿ ರಾಜ್ಯದ ಎಲ್ಲ ನೀರನ್ನು ಸದ್ಬಳಕೆ ಮಾಡಿಕೊಂಡು ಇಡೀ ರಾಜ್ಯಕ್ಕೆ ನೀರು ಕೊಡಬೇಕೆಂದು ಜಲಧಾರೆ ಕಾರ್ಯಕ್ರಮ ಮಾಡಿದರು. ಹಾಗಾದರೆ, ಈ ಸರಕಾರ ಮಾಡುತ್ತಿರುವುದು ಏನು ಕಾರ್ಯಕ್ರಮ? ಕೇವಲ ತಮಿಳುನಾಡಿಗೆ ನೀರು ಹರಿಸುವುದೆ? ಎಂದು ದೇವೇಗೌಡ ಪ್ರಶ್ನಿಸಿದರು.
ಕುಮಾರಸ್ವಾಮಿ, ಕೆಆರ್‍ಎಸ್‍ಗೆ ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಅವರು ಎಲ್ಲ ಮಾಹಿತಿ ಸಂಗ್ರಹ ಮಾಡಿದ್ದಾರೆ. ಹೀಗಾಗಿ ಕಾವೇರಿ ವಿಷಯ ಹೊರತುಪಡಿಸಿ ಯಾವುದೇ ಕಾರಣಕ್ಕೂ ರಾಜಕೀಯದ ಬಗ್ಗೆ ಮಾತನಾಡುವುದಿಲ್ಲ ಎನ್ನುತ್ತಲೇ, ಕಾವೇರಿ ವಿಷಯವನ್ನು ನಿರ್ವಹಣೆ ಮಾಡುವಲ್ಲಿ ಕಾಂಗ್ರೆಸ್ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪ ಮಾಡಿದರು.
ಚಿತ್ರಗಳ ಪ್ರದರ್ಶನ: ರಾಜ್ಯದಲ್ಲಿ ಜಲ ಸಂಕಷ್ಟ ಉಂಟಾಗಿದೆ. ಜಲಾಶಯಗಳಲ್ಲಿ ನೀರಿಲ್ಲ. ಆದರೂ ತಮಿಳುನಾಡಿಗೆ ನೀರು ಬಿಡಿ ಎಂದು ಆದೇಶಗಳು ಬರುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದ ಮಾಜಿ ಪ್ರಧಾನಿಗಳು, ಸುದ್ದಿಗೋಷ್ಟಿಯಲ್ಲಿ ಬರಿದಾದ ಕೆಆರ್ ಎಸ್ ಜಲಾಶಯದ ಚಿತ್ರಗಳನ್ನು ಪ್ರದರ್ಶಿಸಿದರು. ಈ ಫೆÇೀಟೋಗಳನ್ನು ಪ್ರಧಾನಿಯವರಿಗೂ ಕಳಿಸುತ್ತೇವೆ. ಅವರೇ ಗಮನಿಸಲಿ’ ಎಂದು ದೇವೇಗೌಡ ನುಡಿದರು.
ಎರಡೂ ರಾಜ್ಯಗಳಿಗೆ ಸಂಬಂಧ ಇಲ್ಲದಿರುವ ಐವರ ತಂಡವನ್ನು ಕಳುಹಿಸಕೊಡಿ, ವಾಸ್ತವ ಪರಿಸ್ಥಿತಿ ನೋಡಲಿ ಅಂತ ರಾಜ್ಯಸಭೆಯಲ್ಲಿ ಹೇಳಿದ್ದೇನೆ. ಬೇರೆ ರಾಜ್ಯದವರನ್ನು ಕಳುಹಿಸಿ ಸ್ಥಳ ಪರಿಶೀಲನೆ ಮಾಡಲಿ ಅಂತ ಹೇಳಿದೆ. ಯಾವ ಪರಿಸ್ಥಿತಿ ಇದೆ ಎಂದು ತಿಳಿಸಲಿ ಅಂತ ಉಪರಾಷ್ಟ್ರಪತಿಯವರಿಗೆ ಹೇಳಿದ್ದೇನೆ. ಅದನ್ನೇ ಪ್ರಧಾನಿಯಾರಿಗೂ ಮನವಿ ಮಾಡಿದ್ದೇನೆ ಎಂದು ಅವರು ತಿಳಿಸಿದರು.
ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ, ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ, ಪರಿಷತ್ ಸದಸ್ಯರಾದ ಬಿ.ಎಂ.ಫಾರೂಖ್, ಕೆ.ಎ.ತಿಪ್ಪೇಸ್ವಾಮಿ, ಮಾಜಿ ಸಂಸದ ಕುಪೇಂದ್ರ ರೆಡ್ಡಿ, ನಗರ ಘಟಕದ ಅಧ್ಯಕ್ಷ ಎಚ್.ಎಂ.ರಮೇಶ್ ಗೌಡ ಸೇರಿದಂತೆ ಇನ್ನಿತರರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು. ಬಾಕ್ಸ್...
ಬಂದ್ ಶಾಂತಿಯುತವಾಗಿ ನಡೆಯಲಿ: ‘ನಮಗೆ ಅನ್ಯಾಯ ಆಗಿದೆ, ನಿಜ. ಹಾಗಂತ ಕಾನೂನನ್ನು ಕೈಗೆ ಎತ್ತಿಕೊಳ್ಳುವುದು ಬೇಡ. ಶಾಂತಿಯುತವಾಗಿ ಬಂದ್ ನಡೆಯಲಿ. ಬಂದ್‍ಗೆ ಕುಮಾರಸ್ವಾಮಿ ಬೆಂಬಲ ಕೊಟ್ಟಿದ್ದಾರೆ. ಎಲ್ಲರೂ ಶಾಂತಿಯುತ ಹೋರಾಟ ಮಾಡಿ. ಅಹಿತಕರ ಘಟನೆ ನಡೆಯಬಾರದು. ನೆಲ, ಜಲ, ಭಾಷೆ ವಿಷಯ ಬಂದಾಗ ತಮಿಳರಲ್ಲಿ ಕಂಡು ಬರುವ ಐಕ್ಯತೆ ನಮ್ಮಲ್ಲಿ ಇಲ್ಲ. ಅದನ್ನು ನಾವು ಅರ್ಥ ಮಾಡಿಕೊಳ್ಳಬೇಕು’
-ಎಚ್.ಡಿ.ದೇವೇಗೌಡ ಮಾಜಿ ಪ್ರಧಾನಿ