ಕಾವೇರಿ ವಿವಾದ | ಕೇಂದ್ರದಿಂದ ಅಸಾಧ್ಯ, ಸೋನಿಯಾ ಗಾಂಧಿಯೇ ಸಮಸ್ಯೆ ಬಗೆಹರಿಸಲಿ: ಬಸವರಾಜ ಬೊಮ್ಮಾಯಿ

Update: 2023-09-23 14:12 GMT

ಬೆಂಗಳೂರು, ಸೆ.23:  ʼʼಕೇಂದ್ರ ಸರಕಾರವು ಕಾವೇರಿ ನದಿ ನೀರು ಹಂಚಿಕೆ ವಿವಾದ ಬಗೆಹರಿಸಲು ಸಾಧ್ಯವಿಲ್ಲ. ಆದರೆ, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಪರಿಹಾರ ಒದಗಿಸಬಹುದುʼʼ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಶನಿವಾರ ಇಲ್ಲಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಅವರು, ʼʼಕಾವೇರಿ ವಿಚಾರ ಸುಪ್ರೀಂ ಕೋರ್ಟಿನ ಮುಂದಿರುವಾಗ ಕೇಂದ್ರ ಸರಕಾರದ ಮಧ್ಯಪ್ರವೇಶ ಮಾಡಲು ಅಸಾಧ್ಯ. ಹೀಗಾಗಿ, ಕಾಂಗ್ರೆಸ್ಸಿನ ಸೋನಿಯಾ ಗಾಂಧಿ ಮಧ್ಯಪ್ರವೇಶಕ್ಕೆ ಅವಕಾಶವಿದ್ದು, ರಾಜಕೀಯವಾಗಿ ಇದನ್ನು ಬಗೆಹರಿಸಬಹುದುʼʼ ಎಂದು ತಿಳಿಸಿದರು.

ಅಲ್ಲದೆ, ತಮಿಳುನಾಡು ವ್ಯವಸಾಯಕ್ಕೆ ಅಕ್ರಮವಾಗಿ ನೀರು ಬಳಸುತ್ತಿದ್ದು, 32 ಟಿಎಂಸಿ ಬದಲಾಗಿ 67 ಟಿಎಂಸಿ ನೀರು ಪಡೆದಿದ್ದಾರೆ. ಅಲ್ಲಿನ ರೈತರ ಹಿತ ಕಾಪಾಡಲು ಇಲ್ಲಿನ ಸರಕಾರ ಮುಂದಾಗಿದೆ. ಇದು ಅತ್ಯಂತ ಬೇಜವಾಬ್ದಾರಿಯ ಸರಕಾರ. ಅಷ್ಟೇ ಮಾತ್ರವಲ್ಲದೆ, ಲಕ್ಷಾಂತರ ಜನರಿಗೆ ಉದ್ಯೋಗ ಕೊಟ್ಟು ಆರ್ಥಿಕವಾಗಿ ಮುಖ್ಯ ನಗರ ಬೆಂಗಳೂರಿಗೆ ನೀರಿನ ಸಮಸ್ಯೆ ಆಗಲಿದೆ ಎಂದು ಸುಪ್ರೀಂ ಕೋರ್ಟಿನ ಗಮನಕ್ಕೆ ತರುವಲ್ಲಿ ಸರಕಾರ ವಿಫಲವಾಗಿದೆ. ಬ್ರ್ಯಾಂಡ್ ಬೆಂಗಳೂರಿಗೆ ಕನಿಷ್ಠ ನೀರಿಲ್ಲದ ದುಸ್ಥಿತಿ ಬರಲಿದೆ ಎಂದು ಎಚ್ಚರಿಸಿದರು.

 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News