ಕಾವೇರಿ ವಿಚಾರಣೆ ಮುಂದೂಡಿಕೆ: ರೈತರಿಂದ ದಿಢೀರ್ ರಸ್ತೆತಡೆ
ಮಂಡ್ಯ, ಸೆ.6: ಕಾವೇರಿ ನದಿ ನೀರಿನ ವಿಚಾರಕ್ಕೆ ಸಂಬಂಧಿಸಿದ ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್ ಮುಂದೂಡಿದ ಹಿನ್ನೆಲೆಯಲ್ಲಿ ಕಾವೇರಿ ಹೋರಾಟಗಾರರು ದಿಢೀರ್ ರಸ್ತೆತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ವಿಚಾರಣೆ ಮುಂದೂಡಿದ ವಿಷಯ ತಿಳಿಯುತ್ತಿದ್ದಂತೆ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಧರಣಿ ನಡೆಸುತ್ತಿದ್ದ ರೈತರು, ಕನ್ನಡಪರ ಮತ್ತು ಪ್ರಗತಿಪರ ಸಂಘಟನೆಗಳ ಸದಸ್ಯರು ಬೆಂಗಳೂರು ಮೈಸೂರು ಹೆದ್ದಾರಿಗಿಳಿದು ರಸ್ತೆತಡೆ ನಡೆಸಿದರು.
ನ್ಯಾಯಾಲಯ ವಿಚಾರಣೆಯನ್ನು ಈಗಾಗಲೇ ಮೂರು ಬಾರಿ ಮುಂದೂಡಿದೆ. ಆ ಮೂಲಕ ರಾಜ್ಯದಿಂದ ತಮಿಳುನಾಡಿಗೆ ನಿತ್ಯ ನೀರನ್ನು ಹರಿಸುವ ತಂತ್ರವಾಗಿದೆ. ಇದೇ ರೀತಿ ಮುಂದುವರಿದರೆ ಕೆಲವೇ ದಿನಗಳಲ್ಲಿ ಕೆಆರ್‍ಎಸ್ ಜಲಾಶಯ ಸಂಪೂರ್ಣ ಖಾಲಿಯಾಗಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ರಾಜ್ಯ ಸರಕಾರ ಈವರೆಗೆ ತಮಿಳುನಾಡಿಗೆ ನೀರುಹರಿಸಿ ರೈತರಿಗೆ ದ್ರೋಹ ಮಾಡಿದ್ದು ಸಾಕು. ಇನ್ನಾದರೂ ರೈತರ ಹಿತ ರಕ್ಷಣೆಗೆ ಮುಂದಾಗಬೇಕು. ಸಿಎಂ, ಡಿಸಿಎಂ ಅವರು ಈ ಕೂಡಲೇ ತಮಿಳುನಾಡಿಗೆ ನೀರು ಸ್ಥಗಿತಗೊಳಿಸಬೇಕು ಎಂದು ಅವರು ಆಗ್ರಹಿಸಿದರು.
ಕೇಂದ್ರ ಸರಕಾರ ತನ್ನ ಮೌನ ಮುರಿಯಬೇಕು. ತಕ್ಷಣ ಮಧ್ಯಪ್ರವೇಶ ಮಾಡಿ ರಾಜ್ಯದ ರೈತರಿಗೆ ನ್ಯಾಯ ಕೊಡಿಸಬೇಕು. ರಾಜ್ಯದ ಸಂಸದರು ಕೇಂದ್ರ ಸರಕಾರದ ಮೇಲೆ ಒತ್ತಡ ಹಾಕಿ ರಾಜ್ಯದ ರೈತರ ಹಿತಕಾಯಬೇಕು ಎಂದೂ ಅವರು ತಾಕೀತು ಮಾಡಿದರು.
ರೈತ ನಾಯಕಿ ಸುನಂದಾ ಜಯರಾಂ ಮಾತನಾಡಿ, ನ್ಯಾಯಾಧೀಶರ ಅನಾರೋಗ್ಯದ ನೆಪಮಾಡಿ ಸುಪ್ರೀಂಕೋರ್ಟ್ ವಿಚಾರಣೆಯನ್ನು ಮುಂದೂಡಿರುವುದು ಬೇಸರದ ವಿಷಯ. ರಾಜ್ಯ ಸರಕಾರ ನೀರು ನಿಲುಗಡೆ ತೀರ್ಮಾನ ಕೈಗೊಳ್ಳದಿದ್ದರೆ ಹೋರಾಟವನ್ನು ನಿರ್ಣಾಯಕ ಹಂತಕ್ಕೆ ತೆಗೆದುಕೊಂಡು ಹೋಗಲಾಗುವುದು ಎಂದು ಎಚ್ಚರಿಸಿದರು.
ಮಾಜಿ ಶಾಸಕ ಜಿ.ಬಿ.ಶಿವಕುಮಾರ್, ರೈತಸಂಘದ ಕೆ.ಬೋರಯ್ಯ, ಇಂಡುವಾಳು ಚಂದ್ರಶೇಖರ್, ಬಸವರಾಜ್, ಸೊ.ಸಿ.ಪ್ರಕಾಶ್, ಮುದ್ದೇಗೌಡ, ಪಣ್ಣೆದೊಡ್ಡಿ ರಮೇಶ್, ದಸಂಸ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು, ಎಂ.ವಿ.ಕೃಷ್ಣ, ಜಿಪಂ ಮಾಜಿ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್, ಕರವೇ ಮಾ.ಸೋ.ಚಿದಂಬರ್, ಶಂಕರೇಗೌಡ, ಕನ್ನಡ ಸೇನೆ ಎಚ್.ಸಿ.ಮಂಜುನಾಥ್, ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.