ಹಗರಣಗಳನ್ನು ಮರೆಮಾಚಲು ʼಜಾತಿಗಣತಿʼ ವರದಿ ಪ್ರಸ್ತಾಪ : ಆರ್‌.ಅಶೋಕ್

Update: 2024-10-09 11:19 GMT

ಬೆಂಗಳೂರು : "ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಮುಡಾ ಹಗರಣವನ್ನು ಮರೆ ಮಾಚಲು ಜಾತಿಗಣತಿ ವರದಿ ಬಿಡುಗಡೆಯ ಪ್ರಸ್ತಾಪ ಮಾಡುತ್ತಿದ್ದಾರೆ" ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ದೂರಿದರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʼಜಾತಿ ಗಣತಿ ವಿಚಾರದಲ್ಲಿ ಕಾಂಗ್ರೆಸ್‌ ನಾಯಕರು ಬಿಜೆಪಿಯ ಮೇಲೆ ಆರೋಪ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ವರದಿಯಲ್ಲಿ ಏನಿರಬೇಕೆಂದು ಹೇಳಿ ಬರೆಸಿದ್ದಾರೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ. ಯಾರೂ ಮನೆಗೆ ಬಂದೇ ಇಲ್ಲ ಎಂದು ಲಿಂಗಾಯತ, ಒಕ್ಕಲಿಗ ಮೊದಲಾದ ಸಮುದಾಯದವರು ಹೇಳಿದ್ದಾರೆ. ಕೆಲವೇ ಜಾತಿಗಳ ವೈಭವೀಕರಣ, ಇನ್ನೂ ಕೆಲವು ಜಾತಿಗಳ ಮೇಲೆ ದ್ವೇಷ ಹಾಗೂ ಅವೈಜ್ಞಾನಿಕತೆ ಇದರಲ್ಲಿ ಕಂಡುಬಂದಿದೆʼ ಎಂದರು.

ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಸಿದ್ದರಾಮಯ್ಯನವರು ಈ ವರದಿ ಬಗ್ಗೆ ಬಾಯಿ ಬಿಡಲಿಲ್ಲ. ಒಂದು ಕಡೆ ಮುಡಾ, ಮತ್ತೊಂದು ಕಡೆ ಜಾರಿ ನಿರ್ದೇಶನಾಲಯದ ತನಿಖೆ,‌ ಮತ್ತೊಂದು ಕಡೆ ಲೋಕಾಯುಕ್ತ‌ ತನಿಖೆ ನಡೆಯುತ್ತಿದೆ. ಇವೆಲ್ಲವನ್ನೂ ಮುಚ್ಚಿಹಾಕಲು ಈಗ ವರದಿಯನ್ನು ಹೊರತೆಗೆಯಲಾಗಿದೆ ಎಂದರು.

ಸಿಎಂ ಬದಲಾವಣೆ :

ಮುಖ್ಯಮಂತ್ರಿ ‌ಬದಲಾವಣೆ ಬಗ್ಗೆ ಈಗ ಚರ್ಚೆ ನಡೆಯುತ್ತಿದೆ. ಬೆಳಗಾವಿಯ ಸಚಿವರು ಪ್ರತಿ ಜಿಲ್ಲೆಗೂ ಭೇಟಿ ನೀಡಿ ರೋಡ್ ಶೋ ನಡೆಸುತ್ತಿದ್ದಾರೆ. ಡಾ.ಜಿ.ಪರಮೇಶ್ವರ್ ಮತ್ತಿತರರು ಕೂಡ ಸಿಎಂ‌ ಆಗಲು ಯತ್ನಿಸುತ್ತಿದ್ದಾರೆ. ಪಕ್ಷದ ವಿರುದ್ಧ ಮಾತಾಡಿದರೆ ನೋಟಿಸ್ ನೀಡುತ್ತೇನೆ ಎಂದು ಡಿ.ಕೆ.ಶಿವಕುಮಾರ್ ಎಚ್ಚರಿಕೆ ನೀಡಿದ್ದು, ಅದಕ್ಕೆ ಯಾರೂ ಕ್ಯಾರೇ ಎನ್ನುತ್ತಿಲ್ಲ. ಕುರ್ಚಿ ಭದ್ರಪಡಿಸಿಕೊಳ್ಳಲು ಜಾತಿ ಗಣತಿ ವರದಿಯನ್ನು ಮುನ್ನೆಲೆಗೆ ತಂದಿದ್ದಾರೆ ಎಂದರು.

ಒಳ ಮೀಸಲಾತಿ ತರಲಿ :

ಒಳ ಮೀಸಲಾತಿ ಕುರಿತು ಸುಪ್ರೀಂ ಕೋರ್ಟ್‌ ಆದೇಶ ಮಾಡಿದೆ. ಹಿಂದಿನ ಬಿಜೆಪಿ ಸರ್ಕಾರ ಈ ಕುರಿತು ಪ್ರಯತ್ನ ಮಾಡಿತ್ತು. ಮೀಸಲು ಪ್ರಮಾಣವನ್ನು ಪರಿಶಿಷ್ಟ ಜಾತಿಗೆ ಶೇ.3 ರಿಂದ ಶೇ.7 ಕ್ಕೆ ಏರಿಸಲಾಗಿತ್ತು. ಮೀಸಲಾತಿ ಹೆಚ್ಚಿಸಿ ಸಾಮಾಜಿಕ ನ್ಯಾಯ ನೀಡಿದ್ದೇ ಬಿಜೆಪಿ. ದಲಿತರು, ಹಿಂದುಳಿದವರ ಚಾಂಪಿಯನ್‌ ಎಂದು ಹೇಳಿಕೊಳ್ಳುವ ಕಾಂಗ್ರೆಸ್‌ ಹರ್ಯಾಣ ಚುನಾವಣೆಯಲ್ಲಿ ಸೋತಿದೆ. ಬಿಜೆಪಿ ಎಂದಿಗೂ ಮೀಸಲು ವಿಚಾರದಲ್ಲಿ ಹಿಂದುಳಿದಿಲ್ಲ. ದಲಿತರ ಅಭಿವೃದ್ಧಿಗೆ ಬಿಜೆಪಿ ಸದಾ ಶ್ರಮಿಸಿದೆ. ದಲಿತರ ಪರವಾಗಿ ಕಾಂಗ್ರೆಸ್‌ ಕೆಲಸ ಮಾಡುತ್ತಿದೆ ಎನ್ನುವುದಾದರೆ ಒಳ ಮೀಸಲಾತಿ ತರಲಿ ಎಂದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News