ಸಿಇಟಿ ಪರೀಕ್ಷೆ : ಮೊದಲ ದಿನದಂದು ಶೇ.80ರಷ್ಟು ವಿದ್ಯಾರ್ಥಿಗಳು ಹಾಜರು
ಬೆಂಗಳೂರು: ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‍ಗಳ ಪ್ರವೇಶಕ್ಕೆ ರಾಜ್ಯದಲ್ಲಿ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಯ(ಸಿಇಟಿ) ಮೊದಲ ದಿನವಾದ ಗುರುವಾರದಂದು ಶೇ.80ರಷ್ಟು ವಿದ್ಯಾರ್ಥಿಗಳು ಹಾಜರಾಗಿದ್ದಾರೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ಮಾಹಿತಿ ನೀಡಿದ್ದಾರೆ.
ಈ ಕುರಿತು ಪ್ರಕಟನೆ ಹೊರಡಿಸಿರುವ ಅವರು, ಒಟ್ಟು 3,49,637 ಅಭ್ಯರ್ಥಿಗಳು ಪರೀಕ್ಷೆ ತೆಗೆದುಕೊಳ್ಳಲು ಪ್ರವೇಶ ಪತ್ರ ಡೌನ್ ಲೋಡ್ ಮಾಡಿಕೊಂಡಿದ್ದು, ಅದರಲ್ಲಿ ಪ್ರಾಥಮಿಕ ಹಂತದ ಮಾಹಿತಿ ಪ್ರಕಾರ ಶೇ.80ರಷ್ಟು ಮಂದಿ ಹಾಜರಾಗಿದ್ದಾರೆ. ಹಾಜರಾತಿಯ ನಿಖರ ಮಾಹಿತಿ ಶನಿವಾರ ಗೊತ್ತಾಗಲಿದೆ ಎಂದಿದ್ದಾರೆ.
ರಾಜ್ಯದ 737 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿದ್ದು, ಅಕ್ರಮಕ್ಕೆ ಆಸ್ಪದವಾಗದಂತೆ ಕಟ್ಟೆಚ್ಚರವಹಿಸಲಾಗಿತ್ತು. ಬೆಳಗಿನ ಅವಧಿಯಲ್ಲಿ ಜೀವಶಾಸ್ತ್ರ ಮಧ್ಯಾಹ್ನದ ನಂತರ ಗಣಿತ ಪತ್ರಿಕೆಗಳ ಪರೀಕ್ಷೆಗಳು ನಡೆದಿವೆ. ಭೌತವಿಜ್ಞಾನ ಮತ್ತು ರಸಾಯನವಿಜ್ಞಾನ ಪತ್ರಿಕೆಗಳ ಪರೀಕ್ಷೆ ಶುಕ್ರವಾರ ನಡೆಯಲಿದ್ದು ಅದಕ್ಕೂ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಅವರು ವಿವರಿಸಿದ್ದಾರೆ.
ಕೇಂದ್ರಗಳಿಗೆ ಭೇಟಿ: ನಗರದ ಮಲ್ಲೇಶ್ವರ 18ನೇ ಅಡ್ಡರಸ್ತೆಯ ಸರಕಾರಿ ಪಿಯು ಕಾಲೇಜಿಗೆ ಭೇಟಿ ನೀಡಿದ ರಮ್ಯಾ ಅವರು ಖುದ್ದು ಪರೀಕ್ಷಾ ವ್ಯವಸ್ಥೆಯನ್ನು ವೀಕ್ಷಿಸಿದರು. ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ವಿದ್ಯಾರ್ಥಿಗಳಿಗೆ ಒದಗಿಸಿದ್ದ ಇತರ ಮೂಲಸೌಲಭ್ಯಗಳ ಬಗ್ಗೆಯೂ ಮಾಹಿತಿ ಪಡೆದುಕೊಂಡರು.
ತಜ್ಞರ ಸಮಿತಿ ಪರಿಶೀಲಿಸಲಿದೆ: ಜೀವವಿಜ್ಞಾನ ಮತ್ತು ಗಣಿತ ಪ್ರಶ್ನೆ ಪತ್ರಿಕೆಗಳಲ್ಲಿ ಪಠ್ಯ ವ್ಯಾಪ್ತಿಯ ಹೊರಗಿನ ಪ್ರಶ್ನೆಗಳನ್ನು ಕೇಳಲಾಗಿದೆ ಎನ್ನುವ ದೂರುಗಳ ಬಗ್ಗೆ ಪ್ರತಿಕ್ರಿಯಿಸಿರುವ ಅವರು ‘ಅಂತಹ ಅನುಮಾನಗಳು ಇದ್ದಲ್ಲಿ ಆಕ್ಷೇಪಣೆಗಳನ್ನು ಸಲ್ಲಿಸಬಹುದು. ನಂತರ ಅದನ್ನು ವಿಷಯ ತಜ್ಞರ ತಂಡ ಪರಿಶೀಲಿಸಿ ಸೂಕ್ತವಾದ ಸಲಹೆಯನ್ನು ನೀಡಲಿದೆ. ಆ ನಂತರ ಕೆಇಎ ಸ್ಪಷ್ಟವಾದ ತೀರ್ಮಾನ ಮಾಡಲಿದೆ' ಎಂದು ಹೇಳಿದರು.
ಪ್ರಶ್ನೆ ಪತ್ರಿಕೆಯನ್ನು ಸಿದ್ಧಪಡಿಸಲು ಕೆಲವೊಂದು ನಿಯಮಗಳಿದ್ದು, ಆ ಪ್ರಕಾರವೇ ಮಾಡಲಾಗಿರುತ್ತದೆ. ಇದರ ನಡುವೆಯೂ ಆಕ್ಷೇಪಣೆ ಸಲ್ಲಿಸಲು ಅವಕಾಶ ಇರುತ್ತದೆ. ಈ ವಿಷಯದಲ್ಲಿ ಆತಂಕಪಡುವ ಅಗತ್ಯ ಏನೂ ಇಲ್ಲ ಎಂದರು.
ಈ ಸಂಬಂಧ ಆಕ್ಷೇಪಣೆ ಸಲ್ಲಿಸಲು ಶನಿವಾರ ಕೆಇಎ ವೆಬ್‍ಸೈಟ್‍ನಲ್ಲಿ ಲಿಂಕ್ ಬಿಡುಗಡೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.