ಸಿಇಟಿ ಪರೀಕ್ಷೆ ವಿವಾದ : ತಜ್ಞರ ಸಮಿತಿ ರಚಿಸಿದ ಸರಕಾರ

Update: 2024-04-22 12:05 GMT
ಸಾಂದರ್ಭಿಕ ಚಿತ್ರ

ಬೆಂಗಳೂರು : ಕರ್ನಾಟಕ ಪರೀಕ್ಷಾ ಪ್ರಾಧಿಕಾರವು(ಕೆಇಎ) ಎ.18 ಮತ್ತು ಎ.19ರಂದು ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು(ಸಿಇಟಿ) ನಡೆಸಿತ್ತು. ಪರೀಕ್ಷೆಯಲ್ಲಿ ಪಠ್ಯಕ್ರಮದಿಂದ ಹೊರತಾಗಿರುವ ಪ್ರಶ್ನೆಗಳನ್ನು ಕೇಳಲಾಗಿದ್ದು, ಈ ಬಗ್ಗೆ ಪರಿಶೀಲಿಸಲು ಸರಕಾರವು ಪ್ರತ್ಯೇಕ ತಜ್ಞರ ಸಮಿತಿಯನ್ನು ರಚಿಸಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಮತ್ತು ಜೀವಶಾಸ್ತ್ರ ಸೇರಿ 4 ವಿಷಯಗಳಿಗೆ ಸಿಇಟಿ ಪರೀಕ್ಷೆಯನ್ನು ನಡೆಸಿದೆ. ರಾಜ್ಯಾದ್ಯಂತ 3 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಪರೀಕ್ಷೆಗಳು ನಡೆದ ನಂತರ, ಪತ್ರಿಕೆಗಳ ಹಲವಾರು ಪ್ರಶ್ನೆಗಳು ಸಿಇಟಿಯ ಪಠ್ಯಕ್ರಮದ ಹೊರತಾಗಿವೆ ಎಂದು ಸುದ್ದಿ ವರದಿಗಳು ಉಲ್ಲೇಖಿಸಿವೆ. ಅನೇಕ ಪ್ರಶ್ನೆಗಳು ಪಠ್ಯಕ್ರಮದ ಹೊರತಾಗಿರುವ ಕಾರಣ ಇದು ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರಿದೆ ಎಂದು ಕೋರಿರುವ ಮನವಿಗಳೂ ಸ್ವೀಕೃತವಾಗಿದೆ.

ಆದುದರಿಂದ, ಗ್ರೇಸ್ ಅಂಕಗಳನ್ನು ಒದಗಿಸುವಂತೆ ಅಥವಾ ಪರೀಕ್ಷೆಯನ್ನು ಮರು ನಡೆಸುವಂತೆ ಬೇಡಿಕೆಗಳನ್ನೂ ಸಲ್ಲಿಸಲಾಗಿದೆ. ಪ್ರಶ್ನೆಗಳಿಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಕೆಇಎಯು ವಿದ್ಯಾರ್ಥಿಗಳಿಗೆ ಎ.27ರವರೆಗೆ ಅವಕಾಶ ನೀಡಿದೆ. ಈ ಸಂಬಂಧ ಸರಕಾರಕ್ಕೆ ವಿಸ್ತ್ರತ ವರದಿ ಸಲ್ಲಿಸುವಂತೆ ‘ಕೆಇಎ'ಗೆ ಸೂಚಿಸಲಾಗಿದೆ.

ಇದರ ನಡುವೆಯೂ ಈ ಪ್ರಕರಣದ ಬಗ್ಗೆ ಸರಕಾರವು ಪರಿಶೀಲನೆ ನಡೆಸಿದೆ ಮತ್ತು ಸಿಇಟಿಯ ಪಠ್ಯಕ್ರಮದಿಂದ ಹೊರತಾಗಿರುವ ಪ್ರಶ್ನೆಗಳ ಸಂಖ್ಯೆಗಳನ್ನು ಖಚಿತಪಡಿಸಿಕೊಳ್ಳಲು ಪ್ರತಿ ವಿಷಯಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ತಜ್ಞರ ಸಮಿತಿಯನ್ನು ರಚಿಸಿದೆ. ತಜ್ಞರ ಸಮಿತಿಯು ತನ್ನ ವರದಿಯನ್ನು ತಕ್ಷಣವೇ ನೀಡುವಂತೆ ಆದೇಶಿಸಲಾಗಿದೆ.

ಸಿಇಟಿ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ‘ಕೆಇಎ'ಯು ಕಾರ್ಯನಿರ್ವಹಿಸಲಿದೆ. ತಜ್ಞರ ಸಮಿತಿಯ ವರದಿಯನ್ನು ಆಧರಿಸಿ ಈ ಬಗ್ಗೆ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು. ವಿದ್ಯಾರ್ಥಿಗಳ ಹಿತಾಸಕ್ತಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಮತ್ತು ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಉನ್ನತ ಶಿಕ್ಷಣ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿ ಶ್ರೀಕರ್ ಎಂ.ಎಸ್. ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News