ಮೋಸ ಮಾಡಿರುವ ಚೈತ್ರಾ ಕುಂದಾಪುರಗೆ ಶಿಕ್ಷೆ ಆಗಬೇಕು: ಶೋಭಾ ಕರಂದ್ಲಾಜೆ

Update: 2023-09-15 09:40 GMT

ಉಡುಪಿ, ಸೆ.15: "ನಾವು ಯಾರೂ ಕೂಡ ಚೈತ್ರಾ ಕುಂದಾಪುರಳ ಬೆಂಬಲಕ್ಕೆ ನಿಂತಿಲ್ಲ, ಆಕೆಯನ್ನು ರಕ್ಷಣೆ ಮಾಡಿಲ್ಲ ಮತ್ತು ಈ ಪ್ರಕರಣದಲ್ಲಿ ಯಾವುದೇ ಪ್ರಭಾವ ಬೀರಿಲ್ಲ. ಈ ರೀತಿ ಯಾರೇ ಮೋಸ ಮಾಡಿದರೂ ಅಂಥವರಿಗೆ ಶಿಕ್ಷೆ ಆಗಲೇಬೇಕು. ಉಪ್ಪು ತಿಂದವರು ನೀರು ಕುಡಿಯುತ್ತಾರೆ ಮತ್ತು ತಪ್ಪು ಮಾಡಿದವರು ಶಿಕ್ಷೆ ಅನುಭವಿಸುತ್ತಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಚೈತ್ರಾ ಕುಂದಾಪುರ ಜೊತೆಗೆ ನನಗೆ ಯಾವುದೇ ರೀತಿಯ ನೇರ ಆಗಲಿ, ವೈಯಕ್ತಿಕವಾಗಲೀ ಸಂಪರ್ಕ ಇರಲಿಲ್ಲ. ನನ್ನ ಜೊತೆ ನೂರಾರು ಮಂದಿ ಫೋಟೋ ತೆಗೆದುಕೊಳ್ಳುತ್ತಾರೆ. ಅದೇ ರೀತಿ ಚೈತ್ರಾ ಕೂಡ ಫೋಟೋ ತೆಗೆದುಕೊಂಡಿರಬಹುದು. ಆದರೆ ಆಕೆ ಈವರೆಗೆ ನನಗೆ ಫೋನ್ ಮಾಡಿಲ್ಲ ಮತ್ತು ನಾನು ಕೂಡ ಅವಳಿಗೆ ಫೋನ್ ಮಾಡಿಲ್ಲ ಎಂದರು.

ರಾಜಕೀಯ, ಸಾಮಾಜಿಕ ಜೀವನದಲ್ಲಿ ಯಾರೇ ತಪ್ಪುಮಾಡಿದರು ಶಿಕ್ಷೆ ಆಗಬೇಕು. ಈ ಪ್ರಕರಣದ ಕುರಿತು ತನಿಖೆ ನಡೆಯುತ್ತಿದ್ದು, ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು. ತಪ್ಪುಮಾಡಿದರೆ ಅವರಿಗೆ ಶಿಕ್ಷೆ ಆಗಬೇಕು. ತಪ್ಪು ಮಾಡದೆ ಇದ್ದರೆ ಅನಾವಶ್ಯಕವಾಗಿ ತೊಂದರೆ ಕೊಡಬಾರದು. ಪ್ರಕರಣದ ಬಗ್ಗೆ ಪೊಲೀಸರು ಮಾಹಿತಿಗಳನ್ನು ಸಂಗ್ರಹ ಮಾಡುತ್ತಿದ್ದಾರೆ. ಈ ಪ್ರಕರಣದ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಅವರು ರಾಜ್ಯ ಸರಕಾರವನ್ನು ಆಗ್ರಹಿಸಿದರು.

ಬಿಜೆಪಿಯ ರಾಜ್ಯ ಹಾಗೂ ಕೇಂದ್ರ ನಾಯಕರ ಹೆಸರನ್ನು ಚೈತ್ರಾ ದುರುಪಯೋಗ ಮಾಡಿದ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಸಚಿವೆ, "ನನ್ನ ಹೆಸರನ್ನು ಚೈತ್ರಾ ದುರುಪಯೋಗ ಮಾಡಿಕೊಂಡರೆ ಸೂಕ್ತ ಕ್ರಮ ಕೈಗೊಳ್ಳಬೇಕು. ಯಾರು ದಿಲ್ಲಿ, ರಾಜ್ಯ ನಾಯಕರ ಹೆಸರು ಹಾಗೂ ಪಕ್ಷವನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಮತ್ತು ಆ ಲಿಂಕ್ ಬಗ್ಗೆ ತನಿಖೆ ಆಗಬೇಕು. ಅದೇ ರೀತಿ ಅದಕ್ಕೆ ಕುಮ್ಮಕ್ಕು ನೀಡಿದವರ ಬಗ್ಗೆಯೂ ತನಿಖೆಯಾಗಬೇಕು" ಎಂದು ಆಗ್ರಹಿಸಿದರು.

ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ನನಗೆ ಟಿಕೆಟ್ ಸಿಗುತ್ತದೆ ಎಂದು ಚೈತ್ರಾ ಹೇಳಿಕೊಳ್ಳುತ್ತಿದ್ದಳೆಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಶೋಭಾ ಕರಂದ್ಲಾಜೆ, ಯಾರಿಗೆ ಟಿಕೆಟ್ ಕೊಡಬೇಕು ಹಾಗೂ ಎಲ್ಲಿ ಟಿಕೆಟ್ ಕೊಡಬೇಕು ಎಂಬುದನ್ನು ಪಕ್ಷದ ವರಿಷ್ಠರು ತೀರ್ಮಾನ ಮಾಡುತ್ತಾರೆ. ಬಿಜೆಪಿಗೆ ಗಟ್ಟಿಮುಟ್ಟಾದ ನೇತೃತ್ವ ಇದೆ. ನರೇಂದ್ರ ಮೋದಿ, ಅಮಿತ್ ಶಾ, ನಡ್ಡಾ ಲೋಕಸಭೆಗೆ ಯಾರಿಗೆ ಟಿಕೆಟ್ ನೀಡಬೇಕು ಎಂದು ತೀರ್ಮಾನ ಮಾಡುತ್ತಾರೆ. ಸ್ಪರ್ಧೆ ಮಾಡುತ್ತೇನೆ, ಇಲ್ಲಿ ಟಿಕೆಟ್ ಸಿಗುತ್ತದೆ ಎಂದು ಯಾರು ಹೇಳಿಕೊಂಡರೂ ಅದಕ್ಕೆ ಬೆಲೆ ಇರುವುದಿಲ್ಲ ಎಂದು ತಿಳಿಸಿದರು.

ಬಿಜೆಪಿಯಲ್ಲಿ ಹಣ ತೆಗೆದುಕೊಂಡು ಟಿಕೆಟ್ ನೀಡುವ ಸ್ಥಿತಿ ಇಲ್ಲ. ಮುಂದೆ ಕೂಡ ಅಂತ ಸ್ಥಿತಿ ಬರುವುದೂ ಇಲ್ಲ. ಅಂತಹ ಪಕ್ಷ ಕೂಡ ಬಿಜೆಪಿ ಅಲ್ಲ ಎಂದು ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News