ಮೈಕ್ರೋ ಫೈನಾನ್ಸ್ ದಂಧೆಗೆ ಸರಕಾರದ ಕುಮ್ಮಕ್ಕು: ಛಲವಾದಿ ನಾರಾಯಣಸ್ವಾಮಿ ಆರೋಪ

Update: 2025-01-25 18:57 IST
Photo of Chalavadi Narayanaswamy

ಛಲವಾದಿ ನಾರಾಯಣಸ್ವಾಮಿ

  • whatsapp icon

ಬೆಂಗಳೂರು : ರಾಜ್ಯದಲ್ಲಿನ ಮೈಕ್ರೋ ಫೈನಾನ್ಸ್ ದಂಧೆಗೆ ಸರಕಾರದ ಕುಮ್ಮಕ್ಕೂ ಇದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

ಶನಿವಾರ ಇಲ್ಲಿನ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾತನಾಡಿದ ಅವರು, ಸರಕಾರದ ಕುಮ್ಮಕ್ಕು ಇಲ್ಲದಿದ್ದರೆ ಇದು ಇಲ್ಲಿಯ ವರೆಗೆ ಮುಂದುವರೆಯುತ್ತಿರಲಿಲ್ಲ, ಎರಡೂ ಕಡೆಯಿಂದ ವಸೂಲಿ ಮಾಡಲು ಪೊಲೀಸರಿಗೆ ಇದು ದಂಧೆಯಾಗಿತ್ತು ಎಂದು ಆಕ್ಷೇಪಿಸಿದರು.

ಅನೇಕರ ಮಾರಣಹೋಮ ಆದ ಬಳಿಕ ಸರಕಾರವು ಎಚ್ಚತ್ತು, ಸಭೆ ಕರೆದು ಮೈಕ್ರೋ ಫೈನಾನ್ಸ್ ವಿಚಾರದಲ್ಲಿ ಚರ್ಚೆ ನಡೆಸಿದೆ. ಹೊಸ ಕಾನೂನು ತರುವ ಮತ್ತು ಅವರನ್ನು ಹದ್ದುಬಸ್ತಿನಲ್ಲಿಡುವ ಕೆಲಸ ಮಾಡುವುದಾಗಿ ತಿಳಿಸಿದೆ. ಸಾಲ ವಸೂಲಿಗೆ ತೊಂದರೆ ಕೊಟ್ಟರೆ, ಗೂಂಡಾಗಳನ್ನು ಕಳುಹಿಸಿದರೆ ಅವರನ್ನು ಬಂಧಿಸುವುದಾಗಿ ಹೇಳಿದ್ದಾರೆ. ಜನರ ಹಿತದೃಷ್ಟಿಯಿಂದ ಇದು ಸ್ವಾಗತಾರ್ಹ ಎಂದರು.

ಆನ್‍ಲೈನ್ ಗೇಮ್ಸ್ ಕಂಪೆನಿ: ಮೈಕ್ರೋ ಫೈನಾನ್ಸ್‌ ನಲ್ಲಿ ಆಗುವ ಅನಾಹುತಕ್ಕಿಂತ ಹೆಚ್ಚು ಅನಾಹುತಗಳು ಆನ್‍ಲೈನ್ ಗೇಮ್ಸ್ ಮೂಲಕ ಆಗುತ್ತಿದೆ. ಸರಕಾರದ ಕೆಲವು ಮಂತ್ರಿಗಳು, ಶಾಸಕರು ಆನ್‍ಲೈನ್ ಗೇಮ್ಸ್ ಕಂಪೆನಿಗಳನ್ನು ಮಾಡಿಕೊಂಡು ಜನರಿಂದ ಸುಲಿಗೆ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಆನ್‍ಲೈನ್ ರಮ್ಮಿ ಆಟದ ಮೂಲಕ ಸುಲಭದಲ್ಲಿ ಹಣ ಬರುವ ಸಾಮಾಜಿಕ ಜಾಲತಾಣದ ಜಾಹೀರಾತುಗಳನ್ನು ನಂಬಿ ಜನರ ಪ್ರಾಣ ಹಿಂಡುವ ಕೆಲಸ ಮಾಡುತ್ತಿದ್ದಾರೆ. ಎಷ್ಟೋ ಜನರು ಗೇಮ್‍ನಲ್ಲಿ ಹಣ ಸೋತ ಬಳಿಕ ಕಳ್ಳತನ ಮಾಡಿ ಆ ದುಡ್ಡು ಕಟ್ಟುತ್ತಾರೆ. ದರೋಡೆ, ಕಳ್ಳತನಗಳು ಇದೇ ಕಾರಣಕ್ಕಾಗಿ ಹೆಚ್ಚಾಗುತ್ತಿವೆ ಎಂದು ತಿಳಿಸಿದರು.

ಹಗೆತನದ ರಾಜಕೀಯ: ಯದುವೀರ್ ಒಡೆಯರ್ ಬಿಜೆಪಿ ಸಂಸದರಾಗಿದ್ದು, ಅವರ ಆಸ್ತಿಗಳ ಮೇಲೆ ಕಾಂಗ್ರೆಸ್ ಸರಕಾರ ಕಣ್ಣು ಹಾಕಿದೆ. ಒಂದು ಕಡೆ ಚಾಮುಂಡೇಶ್ವರಿ ಬೆಟ್ಟಕ್ಕೆ, ಅಲ್ಲಿನ ಆಸ್ತಿಗಳ ಮೇಲೆ ಕಣ್ಣು ಹಾಕಿದ್ದಾರೆ. ಇನ್ನೊಂದು ಕಡೆ ಬೆಂಗಳೂರಿನ ಅರಮನೆ ಮೇಲೆ ಕಣ್ಣು ಹಾಕಿದ್ದಾರೆ. ಇದು ಹಗೆತನದ ರಾಜಕಾರಣವಲ್ಲವೇ? ಎಂದು ಕೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News