ಚಾಮರಾಜನಗರ: ಶಾಲಾ ಕೊಠಡಿಗೆ ಕರಡಿ ದಾಳಿ; ಪೀಠೋಪಕರಣಗಳಿಗೆ ಹಾನಿ
ಚಾಮರಾಜನಗರ: ಶಿಕ್ಷಕರ ವಿಶ್ರಾಂತಿ ಕೊಠಡಿಯ ಬಾಗಿಲನ್ನು ಮುರಿದು ಒಳನುಗ್ಗಿರುವ ಕರಡಿಯೊಂದು ಆಹಾರ ಪದಾರ್ಥಗಳನ್ನು ತಿಂದು ಜತೆಗೆ ಪೀಠೋಪಕರಗಳನ್ನು ಮುರಿದು ಹಾಕಿರುವ ಘಟನೆ ಹನೂರು ತಾಲೂಕಿನ ಸಂದನಪಾಳ್ಯದ ಸಂತ ಅಂಥೋಣಿ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಗುರುವಾರ ಮಧ್ಯರಾತ್ರಿ ನಡೆದಿದೆ.
ರಾತ್ರಿ 1 ಗಂಟೆ ಸಮಯದಲ್ಲಿ ಕರಡಿ ಬೀರು ಬಾಗಿಲನ್ನು ಮುರಿದು ಅದರೊಳಗಿದ್ದ ಅಡುಗೆ ಎಣ್ಣೆ, ಬೆಲ್ಲ ಮುಂತಾದ ಪದಾರ್ಥಗಳನ್ನು ತಿಂದಿದ್ದು, ಕರಡಿ ಬಾಗಿಲು ಮುರಿದು ಒಳನುಗ್ಗುತ್ತಿರುವ ದೃಶ್ಯ ಶಾಲಾ ಆವರಣದಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಶುಕ್ರವಾರ ಬೆಳಿಗ್ಗೆ ಮುಖ್ಯಶಿಕ್ಷಕ ಲೂಯಿಸ್ ನೇಸನ್ ಅವರು ಶಾಲೆಗೆ ಬರುತ್ತಿದ್ದಂತೆ ಶಿಕ್ಷಕರ ಕೊಠಡಿಯ ಬಾಗಿಲು ಮುರಿದಿರುವುದು ಕಂಡು ಬಂದಿದೆ. ಬಳಿಕ ಒಳಗೆ ಹೋಗಿ ಪರಿಶೀಲಿಸಿದಾಗ ಪುಸ್ತಕ, ಆಹಾರ ಸಾಮಗ್ರಿಗಳೆಲ್ಲ ಚೆಲ್ಲಾಪಿಲ್ಲಿಯಾಗಿರುವುದನ್ನು ಕಂಡು ಸಿಸಿ ಕ್ಯಾಮೆರಾ ನೋಡಿದಾಗ ಕರಡಿ ಒಳನುಗ್ಗಿರುವುದು ಗೊತ್ತಾಗಿದೆ.
ಸ್ಥಳೀಯ ಫಾದರ್ ಟೆನ್ನಿ ಕುರಿಯನ್ ಅವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಕೆಲ ದಿನದ ಹಿಂದೆ ತಾಲ್ಲೂಕಿನ ಅಜ್ಜಿಪುರ ಗ್ರಾಮದ ಅಂಗಡಿಗೆ ರಾತ್ರಿ ವೇಳೆ ಕರಡಿಯೊಂದು ನುಗ್ಗಿ ಮೊಟ್ಟೆಯನ್ನು ತಿಂದು ಹಾಳು ಮಾಡಿತ್ತು. ಬಳಿಕ ಕರಡಿಯನ್ನು ಸೆರೆ ಹಿಡಿದಿದ್ದ ಅರಣ್ಯ ಇಲಾಖೆ ಅಧಿಕಾರಿಗಳು ಕಾಡಿಗೆ ಬಿಟ್ಟಿದ್ದರು.
ಚಾಮರಾಜನಗರ: ಕರಡಿಯೊಂದು ಆಹಾರ ಪದಾರ್ಥಗಳನ್ನು ತಿಂದು ಜತೆಗೆ ಪೀಠೋಪಕರಗಳನ್ನು ಮುರಿದು ಹಾಕಿರುವ ಘಟನೆ ಹನೂರು ತಾಲೂಕಿನ ಸಂದನಪಾಳ್ಯದ ಸಂತ ಅಂಥೋಣಿ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಗುರುವಾರ ಮಧ್ಯರಾತ್ರಿ ನಡೆದಿದೆ.
— Jafar Swadiq (@JafarSwadiq3) December 15, 2023
ಕರಡಿ ಬಾಗಿಲು ಮುರಿದು ಒಳನುಗ್ಗುತ್ತಿರುವ ದೃಶ್ಯ ಶಾಲಾ ಆವರಣದಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. pic.twitter.com/CwY9FLpoEg