ಚಾಮರಾಜನಗರ | ಮಹಿಳೆಗೆ ನೀಡಿದ ಚಿಕಿತ್ಸೆಯಲ್ಲಿ ಲೋಪ; 9.24 ಲಕ್ಷ ರೂ. ಪರಿಹಾರ ನೀಡಲು ದಂತ ವೈದ್ಯರಿಗೆ ಸೂಚನೆ
ಚಾಮರಾಜನಗರ: ಹಲ್ಲು ನೋವಿಗೆ ಚಿಕಿತ್ಸೆ ಪಡೆಯಲು ಹೋದ ಮಹಿಳೆಯೊಬ್ಬರಿಗೆ ದಂತ ವೈದ್ಯರು ನೀಡಿದ ಅರಿವಳಿಕೆ ಚುಚ್ಚುಮದ್ದಿನಿಂದ ಆಕೆ ಪಾಶ್ರ್ವವಾಯುವಿಗೆ ತುತ್ತಾದ ಪ್ರಕರಣದಲ್ಲಿ, ಚಾಮರಾಜನಗರ ಜಿಲ್ಲಾ ಗ್ರಾಹಕರ ಪರಿಹಾರ ವೇದಿಕೆಯು ಮಹಿಳೆಗೆ 9,24,605 ಪರಿಹಾರ ನೀಡುವಂತೆ ದಂತ ವೈದ್ಯರಿಗೆ ಆದೇಶಿಸಿದೆ.
‘ಆಗಸ್ಟ್ 29ರಂದೇ ಈ ಆದೇಶ ಬಂದಿದೆ. 30 ದಿನಗಳ ಒಳಗಾಗಿ ಪರಿಹಾರ ಮೊತ್ತ ನೀಡಬೇಕು ಎಂದು ಆದೇಶ ಇದ್ದರೂ, ನಮಗಿನ್ನೂ ಪರಿಹಾರ ತಲುಪಿಲ್ಲ’ ಎಂದು ಮಹಿಳೆಯ ಕುಟುಂಬದವರು ದೂರಿದ್ದಾರೆ.
ಚಾಮರಾಜನಗರದ ನಿವಾಸಿ ಸುಕನ್ಯಾ ಅವರು ಹಲ್ಲು ನೋವಿಗೆ ಚಿಕಿತ್ಸೆ ಪಡೆಯಲು 2021ರ ಫೆ.3ರಂದು ನಗರದ ಗಿರಿಜಾ ಡೆಂಟಲ್ ಕೇರ್‍ನ ವೈದ್ಯ ಮಂಜುನಾಥ್ ಬಳಿಗೆ ಹೋಗಿದ್ದರು. ಮಂಜುನಾಥ್ ಅವರು ದವಡೆಗೆ ಅರಿವಳಿಕೆ ಚುಚ್ಚುಮದ್ದು ನೀಡಿದ ನಂತರ ಸುಕನ್ಯಾ ಕುಸಿದು ಬಿದ್ದಿದ್ದರು. ಅವರನ್ನು ಮರಿಯಾಲದ ಬಸವರಾಜೇಂದ್ರ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಕರೆದುಕೊಂಡು ಹೋಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆದ ನಂತರ ಸುಕನ್ಯಾ ಬದುಕುಳಿದಿದ್ದರು. ಆದರೆ ಪಾಶ್ರ್ವವಾಯು ಆಗಿದ್ದರಿಂದ ಅವರು ಎಡ ಕಾಲು, ಕೈ ಸ್ವಾಧೀನ ಕಳೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.
ಸುಕನ್ಯಾ ಕುಟುಂಬದವರು ಡಾ.ಮಂಜುನಾಥ್ ರವರಲ್ಲಿ ಘಟನೆ ವಿವರಿಸಿ, ಖರ್ಚಾಗಿರುವ ಹಣ ಕೇಳಿದಾಗ ಅವರು ನೀಡಲು ಒಪ್ಪಲಿಲ್ಲ. ಇದರಿಂದ ಬೇಸತ್ತ ಸುಕನ್ಯಾ ರವರ ಮಗ ರವಿಕುಮಾರ್, ಜಿಲ್ಲಾ ಆರೋಗ್ಯ ಅಧಿಕಾರಿ, ಪೊಲೀಸ್ ಠಾಣೆಗೆ ಲಿಖಿತ ದೂರು ನೀಡಿದರೂ ಪ್ರಯೋಜನವಾಗಿರಲಿಲ್ಲ. ಕೊನೆಗೆ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯಲ್ಲಿ 2022ರ ಮಾರ್ಚ್ 29ರಂದು ದೂರು ನೀಡಿದ್ದರು.
ಗ್ರಾಹಕರ ವೇದಿಕೆಯಲ್ಲಿ ವಿಚಾರಣೆ ನಡೆಸಿದ ವೇದಿಕೆಯ ಅಧ್ಯಕ್ಷೆ ಎಂ.ವಿ.ಭಾರತಿ ಹಾಗೂ ಸದಸ್ಯ ಕೆ.ಎಸ್. ರಾಜು ರವರ ಪೀಠ, ಗಿರಿಜಾ ಡೆಂಟಲ್ ಕೇರ್ ನ ಡಾ.ಮಂಜುನಾಥ್ ಅವರ ಲೋಪವನ್ನು ಎತ್ತಿ ಹಿಡಿದು, ಸುಕನ್ಯಾ ಅವರ ವೈದ್ಯಕೀಯ ವೆಚ್ಚ 6,14,605, 3 ಲಕ್ಷ ಪರಿಹಾರ ಮತ್ತು 10 ಸಾವಿರ ದಂಡ ಪಾವತಿ ಮಾಡುವಂತೆ ಆದೇಶಿಸಿದ್ದಾರೆ.
ಅರ್ಜಿದಾರರ ಪರವಾಗಿ ಧಾರವಾಡದ ವಕೀಲ ಬಸವಪ್ರಭು ಹೊಸಕೇರಿ ಅವರು ವಾದ ಮಾಡಿದ್ದರು.
‘ನನ್ನ ತಾಯಿಗೆ ಚಿಕಿತ್ಸೆ ನೀಡುವಾಗ ಲೋಪವಾಗಿದೆ. ಕುಸಿದು ಬಿದ್ದ ನಂತರವೂ ಅವರಿಗೆ ತಕ್ಷಣಕ್ಕೆ ಚಿಕಿತ್ಸೆ ದೊರೆಯಲಿಲ್ಲ. ನ್ಯಾಯಕ್ಕಾಗಿ ಆರೋಗ್ಯ ಇಲಾಖೆಗೆ ತುಂಬಾ ಓಡಾಡಿದೆ. ಪ್ರಯೋಜನವಾಗಲಿಲ್ಲ. ಕೊನೆಗೆ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಗೆ ಅರ್ಜಿ ಹಾಕಿದೆ. ಅದರಲ್ಲಿ ನ್ಯಾಯಸಿಕ್ಕಿದೆ. ಪರಿಹಾರದ ಮೊತ್ತ ಇನ್ನೂ ಬಂದಿಲ್ಲ’
- ರವಿಕುಮಾರ್, ಸುಕನ್ಯಾ ರವರ ಮಗ