ಚಾಮರಾಜನಗರ: ಮಿತಿ ಮೀರಿದ ಹಂದಿಗಳ ಹಾವಳಿ; ಸಾಂಕ್ರಾಮಿಕ ರೋಗದ ಭೀತಿಯಲ್ಲಿ ನಾಗರಿಕರು

Update: 2023-11-30 09:11 GMT

ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದ ಹಲವು ಬಡಾವಣೆಗಳಲ್ಲಿ ಮಿತಿ ಮೀರಿದ ಹಂದಿಗಳ ಹಾವಳಿಯಿಂದ ನಾಗರಿಕರು ನೆಮ್ಮದಿಯಿಂದ ಜೀವನ ನಡೆಸಲು ಅಸಾಧ್ಯವಾಗಿದ್ದು, ಹಂದಿ ಹಾವಳಿಗೆ ಬ್ರೇಕ್‌ ಹಾಕುವಲ್ಲಿ ಪುರಸಭೆ ಸಂಪೂರ್ಣ ವಿಫ‌ಲವಾಗಿದೆ ಎಂದು ಆರೋಪಿಸಲಾಗಿದೆ.

ಗುಂಡ್ಲುಪೇಟೆ ಪಟ್ಟಣದ ಬಹುತೇಕ ಬಡಾವಣೆಗಳಲ್ಲಿ ಕಸದ ತೊಟ್ಟಿಗಳು ತುಂಬಿ ತುಳುಕುತ್ತಿದ್ದು ಅಶುಚಿತ್ವ ತಾಂಡವವಾಡುತ್ತಿದೆ. ಪ್ರಮುಖ ಬಡಾವಣೆಗಳಾದ ಕೆ.ಎಸ್‌.ನಾಗರತ್ನಮ್ಮ ಬಡಾವಣೆ, ದ.ರಾ.ಬೇಂದ್ರೆ ನಗರ, ಅಶ್ವಿ‌ನಿ ಬಡಾವಣೆ, ವೆಂಕಟೇಶ್ವರ ಚಿತ್ರಮಂದಿರ, ಹಳೇ ಆಸ್ಪತ್ರೆ ರಸ್ತೆ, ಪೊಲೀಸ್‌ ಠಾಣೆ ರಸ್ತೆಗಳಲ್ಲಿ ಹಂದಿಗಳ ಹಾವಳಿ ಮಿತಿ ಮೀರಿದ್ದು, ಪಾದಾಚಾರಿಗಳು ಮತ್ತು ವಾಹನ ಸವಾರರಿಗೆ ತೊಂದರೆಯಾಗುತ್ತಿದೆ.

ಪ್ರತಿ ನಿತ್ಯ ಮುಂಜಾನೆಯಿಂದಲೇ ರಸ್ತೆಗಿಳಿಯುವ ಹಂದಿಗಳು ಎಲ್ಲೆಂದರಲ್ಲಿ ರಾಜಾರೋಷವಾಗಿ ಓಡಾಡಿಕೊಂಡು ಸಾರ್ವಜನಿಕರ ನೆಮ್ಮದಿಗೆ ಭಂಗ ತರುತ್ತಿದೆ. ಪ್ರಮುಖವಾಗಿ ಕುರುಬಗೇರಿಯ ಶಾಲೆಯ ಮುಂಭಾಗದ ರಸ್ತೆ, ಕೆ.ಎಸ್‌.ನಾಗರತ್ನಮ್ಮ ಬಡಾವಣೆಯ ಅಡ್ಡರಸ್ತೆಗಳು ಮತ್ತು ಪೊಲೀಸ್‌ಠಾಣೆಯ ಮುಂಭಾಗದ ರಸ್ತೆ ಸೇರಿದಂತೆ ದ.ರಾ.ಬೇಂದ್ರೆ ನಗರದಲ್ಲಿ ಹಂದಿಗಳ ಹಾವಳಿ ಮಿತಿ ಮೀರಿದೆ.

ಎಲ್ಲೆಂದರಲ್ಲಿ ಕೊಳಕು ಮಾಡುತ್ತಾ ಓಡಾಡುವ ಹಂದಿಗಳಿಂದ ಸಾಂಕ್ರಾಮಿಕ ರೋಗಗಳು ಹರಡುವ ಭಯ ಜನರಲ್ಲಿ ಮೂಡಿದೆ. ಪ್ರತಿನಿತ್ಯ ಶಾಲಾಮಕ್ಕಳು ಮತ್ತು ಪಾದಾಚಾರಿಗಳು ಭಯದಿಂದಲೇ ಓಡಾಡ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು ಪುರಸಭೆಯು ಕಠಿಣ ಕ್ರಮ ಕೈಗೊಳ್ಳಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News