ಚನ್ನಪಟ್ಟಣ ಉಪ ಚುನಾವಣೆ | ಸರಕಾರದಿಂದ ವಿರೋಧ ಪಕ್ಷಗಳ ಮೇಲೆ ದಬ್ಬಾಳಿಕೆ : ಕುಮಾರಸ್ವಾಮಿ

Update: 2024-10-26 11:35 GMT

ಬೆಂಗಳೂರು : "ಚನ್ನಪಟ್ಟಣ ವಿಧಾನಸಭೆ ಉಪ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷ ವಿರೋಧ ಪಕ್ಷಗಳ ಮೇಲೆ ದಬ್ಬಾಳಿಕೆ ನಡೆಸುತ್ತಿದೆ" ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಗಂಭೀರ ಆರೋಪ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ʼಚನ್ನಪಟ್ಟಣದಲ್ಲಿ ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರು ನಾಮಪತ್ರ ಸಲ್ಲಿಸಿದ್ದಾರೆ. ಆ ಸಂದರ್ಭದಲ್ಲಿ ಕ್ಷೇತ್ರದ ಕಾರ್ಯಕರ್ತರು, ಸಾರ್ವಜನಿಕರು ಸೇರಿದ್ದರು. ಎನ್ ಡಿಎ ಮೈತ್ರಿಕೂಟದ ನಾಯಕರು ದೊಡ್ಡ ಪ್ರಮಾಣದಲ್ಲಿ ಸೇರಿದ್ದರು. ಇದು ಐತಿಹಾಸಿಕ ಸಭೆ ಆಗಿತ್ತು. ಇದು ಕಾಂಗ್ರೆಸ್ ನಾಯಕರ ಕಣ್ಣು ಕುಕ್ಕಿದೆʼ ಎಂದು ಅವರು ದೂರಿದರು.

ಈ ಸರಕಾರ ದಬ್ಬಾಳಿಕೆ ನಡೆಸುತ್ತಿದೆ. ಜನ ಕಾರ್ಯಕ್ರಮಕ್ಕೆ ಬರಬಾರದಾ? ಶುಕ್ರವಾರ ನಾಮಪತ್ರ ಸಲ್ಲಿಕೆಯ ನಂತರ ಒಂದು ನೊಟೀಸ್ ಕೊಟ್ಟಿದ್ದಾರೆ. ಬರುವವರ ಮೇಲೆಲ್ಲಾ ಕೇಸ್ ಹಾಕಿಕೊಂಡು ಚುನಾವಣೆ ನಡೆಸಲು ಹೊರಟಿದ್ದಾರೆ ಇವರು. ಶುಕ್ರವಾರ ನಮ್ಮ ಪಕ್ಷದ ಅಧ್ಯಕ್ಷರಿಗೆ ನೊಟೀಸ್ ಕೊಟ್ಟಿದ್ದಾರೆ. ಇದಕ್ಕೆಲ್ಲಾ ನಾವು ಹೆದರುವ ಪ್ರಶ್ನೆಯೇ ಇಲ್ಲ. ಜನರ ಬಳಿ ನಾವು ಮತ ಕೇಳುತ್ತೇವೆ. ಅವರೇ ತೀರ್ಪು ಕೊಡುತ್ತಾರೆ ಎಂದು ಹೇಳಿದರು.

ಚನ್ನಪಟ್ಟಣ, ಸಂಡೂರು, ಶಿಗ್ಗಾಂವಿ ಸೇರಿದಂತೆ ಮೂರೂ ಕ್ಷೇತ್ರಗಳಲ್ಲೂ ನಮ್ಮ ಅಭ್ಯರ್ಥಿಗಳು ದೊಡ್ಡ ಅಂತರದಲ್ಲಿ ಗೆಲುವು ಸಾಧಿಸುತ್ತಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ನಾನು ಇಡೀ ದೇಶಕ್ಕೆ ಕೆಲಸ ಮಾಡುತ್ತಿದ್ದೇನೆ :

ಕುಮಾರಸ್ವಾಮಿ ಮಂಡ್ಯಕ್ಕೆ ಮಾತ್ರ ಸೀಮಿತಾರಾಗಿದ್ದಾರೆ ಎಂಬ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನನ್ನ ಇಲಾಖೆಗೆ ಸಂಬಂಧಿಸಿ ಹಲವು ರಾಜ್ಯಗಳಿಗೆ ಹೋಗಿದ್ದೇನೆ. ನಾಗಾಲ್ಯಾಂಡ್, ಅರುಣಾಚಲ ಪ್ರದೇಶ, ಅಸ್ಸಾಂ, ಛತ್ತೀಸಗಢ, ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡಿಗೆ ಹೋಗಿ ಬಂದಿದ್ದೇನೆ. ನಾನು ಎಷ್ಟು ರಾಜ್ಯಗಳಿಗೆ ಹೋಗಿದ್ದೀನಿ ಗೊತ್ತಿದೆಯಾ ಅವರಿಗೆ? ದೆಹಲಿಯಲ್ಲಿ ಸಮಯ ವ್ಯರ್ಥ ಮಾಡದೇ ಕೆಲಸ ಮಾಡುತ್ತಿದ್ದೇನೆ. ಇವರಿಂದ ನಾನು ಸರ್ಟಿಫಿಕೇಟ್ ತೆಗೆದುಕೊಳ್ಳುವ ಅಗತ್ಯ ಇಲ್ಲ. ಹಾಗಾದರೆ, ಕರ್ನಾಟಕಕ್ಕೆ ಬರಲೇಬಾರದಾ ನಾನು? ನನ್ನನ್ನು ಗೆಲ್ಲಿಸಿದ ಜನರ ಕಷ್ಟ ಕೇಳಲು ಬರಲೇಬಾರದಾ? ನಾನು ಕರ್ನಾಟಕಕ್ಕೆ ಬಂದರೆ ಇವರು ನಿದ್ದೆಗೆಡುತ್ತಾರೆ ಎಂದು ಅವರು ಕಿಡಿಕಾರಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News