ವಂಚನೆ ಪ್ರಕರಣ: 10 ದಿನಗಳ ಕಾಲ ಸಿಸಿಬಿ ಕಸ್ಟಡಿಗೆ ಅಭಿನವ ಹಾಲಶ್ರೀ ಸ್ವಾಮೀಜಿ

Update: 2023-09-20 13:31 GMT

ಬೆಂಗಳೂರು, ಸೆ.20: ‘ಬಿಜೆಪಿ ಟಿಕೆಟ್ ವಂಚನೆ ಪ್ರಕರಣ’ದಲ್ಲಿ ಬಂಧನಕ್ಕೆ ಒಳಗಾಗಿರುವ ಅಭಿನವ ಹಾಲಶ್ರೀ ಸ್ವಾಮೀಜಿಯನ್ನು ಬೆಂಗಳೂರಿನ ಎಸಿಎಂಎಂ ನ್ಯಾಯಾಲಯವು ಹತ್ತು (10) ದಿನಗಳ ಕಾಲ ಸಿಸಿಬಿ ಪೊಲೀಸರ ವಶಕ್ಕೆ ನೀಡಿ ಬುಧವಾರ ಆದೇಶಿಸಿದೆ.

ಒಡಿಶಾದ ಕಟಕ್‍ನಲ್ಲಿ ಬಂಧಿಸಿ ಕರೆತಂದಿದ್ದ ಹಾಲಶ್ರೀಯನ್ನು ನಗರದ 1ನೆ ಎಸಿಎಂಎಂ ಕೋರ್ಟ್‍ನ ನ್ಯಾಯಾಧೀಶ ಆನಂದ್ ಎಸ್. ಕರಿಯಮ್ಮನವರ್ ಅವರ ಮುಂದೆ ಸಿಸಿಬಿ ಪೊಲೀಸರು ಬುಧವಾರ ಹಾಜರುಪಡಿಸಿದ್ದರು.

ಪ್ರಕರಣದ ಕುರಿತು ಮಾಹಿತಿ ಪಡೆದ ಮ್ಯಾಜಿಸ್ಟ್ರೇಟ್ ಅವರು ಆರೋಪಿ ಹಾಲಶ್ರೀಯನ್ನು ಸೆ.29ರ ವರೆಗೆ (10 ದಿನ) ವಿಚಾರಣೆಗಾಗಿ ಸಿಸಿಬಿ ವಶಕ್ಕೆ ನೀಡಿದರು. ಉದ್ಯಮಿ ಗೋವಿಂದಬಾಬು ಪೂಜಾರಿ ಅವರಿಗೆ ಬೈಂದೂರು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ 1.50ಕೋಟಿ ರೂಪಾಯಿ ಪಡೆದು ವಂಚಿಸಿದ ಆರೋಪ ಹಾಲಶ್ರೀ ಮೇಲಿದೆ.

ಇದೇ ಪ್ರಕರಣದಲ್ಲಿ 5 ಕೋಟಿ ರೂಪಾಯಿ ಪಡೆದ ಆರೋಪಕ್ಕೆ ಸಂಬಂಧಿಸಿದಂತೆ ಸಂಘ ಪರಿವಾರದಲ್ಲಿ ಗುರುತಿಸಿಕೊಂಡಿರುವ ಚೈತ್ರಾ ಕುಂದಾಪುರ, ಶ್ರೀಕಾಂತ್, ರಮೇಶ್, ಗಗನ್, ಪ್ರಜ್ವಲ್ ಹಾಗೂ ಧನರಾಜ್ ಅವರನ್ನು ಸಿಸಿಬಿ ಪೆÇಲೀಸರು ಬಂಧಿಸಿದ್ದರು. ಈ ಆರೋಪಿಗಳು ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಮೈಸೂರಿನಲ್ಲಿ ಮಹಜರು?: ಕೋರ್ಟ್‍ಗೆ ಮನವಿ ಸಲ್ಲಿಸಿ ಹಾಲಶ್ರೀ ಸ್ವಾಮೀಜಿಯವರನ್ನು ತಮ್ಮ ವಶಕ್ಕೆ ಪಡೆದಿರುವ ಸಿಸಿಬಿ ಪೊಲೀಸರು, ಶ್ರೀಗಳನ್ನು ಮೈಸೂರಿಗೆ ಕರೆದೊಯ್ಯಬಹುದು ಎನ್ನಲಾಗಿದೆ. ಚೈತ್ರಾ ಕುಂದಾಪುರ ಪ್ರಕರಣ ಹೊರಬಿದ್ದ ಕೂಡಲೇ ಹೊಸಪೇಟೆ ತಾಲೂಕಿನ ಹಿರೇಹಡಗಲಿಯಲ್ಲಿರುವ ತಮ್ಮ ಮಠದಿಂದ ಚಾಲಕನೊಂದಿಗೆ ನೇರವಾಗಿ ಮೈಸೂರಿಗೆ ಹೋಗಿದ್ದ ಹಾಲಶ್ರೀ, ಅಲ್ಲಿನ ಪ್ರಭಾವಿ ರಾಜಕಾರಣಿಯೊಬ್ಬರ ಮೂಲಕ ತಮ್ಮ ಹೆಸರು ಪ್ರಕರಣದಲ್ಲಿ ಬಾರದಂತೆ ಪ್ರಯತ್ನಿಸಿದ್ದರು ಎನ್ನಲಾಗಿದೆ.

ಎದುರು-ಬದರು ಕೂಡಿಸಿ ವಿಚಾರಣೆ?: ತಮ್ಮ ಮುಂದಿನ ವಿಚಾರಣೆಯಲ್ಲಿ ಸಿಸಿಬಿ ಪೆÇಲೀಸರು, ಪ್ರಕರಣದ ಪ್ರಮುಖ ಆರೋಪಿ ಚೈತ್ರಾ ಕುಂದಾಪುರ ಹಾಗೂ ಅಭಿನವ ಹಾಲಶ್ರೀ ಸ್ವಾಮೀಜಿಯವರನ್ನು ಎದುರುಬದರಾಗಿ ಕೂಡಿಸಿ, ಅವರನ್ನು ವಿಚಾರಣೆಗೊಳಪಡಿಸಲು ನಿರ್ಧರಿಸಿದ್ದಾರೆನ್ನಲಾಗಿದೆ. ಅದಕ್ಕಾಗಿ ಪ್ರತ್ಯೇಕವಾದಂಥ ಪ್ರಶ್ನಾವಳಿಯನ್ನೂ ಸಿದ್ಧಪಡಿಸಿಕೊಂಡಿರುವುದಾಗಿ ಮೂಲಗಳು ತಿಳಿಸಿವೆ.

ಈ ಪ್ರಕರಣದ ಇಡೀ ಸೂತ್ರಧಾರ ಹಾಲಶ್ರೀಗಳಿರಬಹುದೇ ಎಂಬ ಗುಮಾನಿ ಪೊಲೀಸರಿಗೆ ಇದೆ. ಆದರೆ, ಈವರೆಗೆ ಮಾಡಿರುವ ತನಿಖೆಗೆ ಅನುಸಾರವಾಗಿ ಚೈತ್ರಾ ಕುಂದಾಪುರ ಅವರನ್ನು ಪ್ರಮುಖ ಆರೋಪಿ ಎಂದು ಪೊಲೀಸರು ಹೆಸರಿಸಿದ್ದಾರೆ. ಆದರೆ, ಹಾಲಶ್ರೀಯವರ ಪಾತ್ರವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News