ಚಿಕ್ಕಮಗಳೂರು: ಯುವಕನಿಗೆ ಕಾರು ಢಿಕ್ಕಿ ಹೊಡೆದ ಪ್ರಕರಣಕ್ಕೆ ಹೊಸ ತಿರುವು
ಚಿಕ್ಕಮಗಳೂರು, ಆ.19: ನಗರದ ಬೈಪಾಸ್ ರಸ್ತೆಯಲ್ಲಿ ಇತ್ತೀಚೆಗೆ ನಡೆದ ಕಾರು-ಭೈಕ್ ನಡುವಿನ ಅಪಘಾತದ ಹಿಂದೆ ಹತ್ಯೆಗೆ ಸಂಚು ರೂಪಿಸಿದ್ದ ವಿಚಾರ ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿದೆ.
ಅಪಘಾತದಲ್ಲಿ ಬೈಕ್ ಕಾರಿನ ಅಡಿಗೆ ಸಿಲುಕಿ ಬೆಂಕಿ ಬರುತ್ತಿದ್ದರೂ ಕಾರು ನಿಲ್ಲಿಸದೆ ಚಾಲಕ ಹೋಗುತ್ತಿದ್ದ ವೇಳೆ ಸ್ಥಳೀಯರು ನೋಡಿ ಕೂಗಿದರೂ ಕಾರಿನೊಂದಿಗೆ ಚಾಲಕ ಪರಾರಿಯಾಗಿದ್ದ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಪ್ರಕರಣದ ಹಿಂದೆ ಬಿದ್ದ ಪೊಲೀಸರಿಗೆ ಈ ಅಪಘಾತದಿಂದ ಹಿಂದೆ ಬೇರೆಯೇ ಕಾರಣ ಇದೆ ಎಂದು ಗೊತ್ತಾಗಿದೆ.
ಚಿಕ್ಕಮಗಳೂರು ನಗರದ ಕಲ್ಯಾಣ ನಗರದ ಅಂಕಿತ್ ಮತ್ತು ನಕುಲ್ ಸ್ನೇಹಿತರಾಗಿದ್ದು, ಹುಡುಗಿಯ ವಿಚಾರಕ್ಕೆ ಇಬ್ಬರ ನಡುವೆ ವೈಷಮ್ಯ ಬೆಳೆದಿತ್ತು ಎನ್ನಲಾಗಿದೆ. ಆ.14ರ ಮಧ್ಯರಾತ್ರಿ ನಕುಲ್‍ನನ್ನು ಮಾತನಾಡಬೇಕೆಂದು ನರಿಗುಡ್ಡೆನಹಳ್ಳಿ ಸರ್ಕ್‍ಲ್‍ಗೆ ಅಂಕಿತ್ ಕರೆಸಿಕೊಂಡಿದ್ದ. ನಕುಲ್ ಬರುತ್ತಿದ್ದಂತೆ ಆತನ ಬೈಕ್‍ಗೆ ಕಾರು ಗುದ್ದಿಸಿದ್ದಾನೆ. ಬೈಕ್ ಕಾರಿನ ಅಡಿಯಲ್ಲಿ ಸಿಲುಕಿದ್ದು, ಕಾರನ್ನು ವೇಗವಾಗಿ ಚಲಾಯಿಸಿಕೊಂಡು ಹೋಗಿದ್ದರಿಂದ ಬೈಕ್‍ಗೆ ಬೆಂಕಿ ಹತ್ತಿಕೊಂಡಿದೆ. ಇದನ್ನು ಗಮನಿಸಿದ ಸ್ಥಳೀಯರು ಕೂಗುತ್ತಿದ್ದಂತೆ ಕಾರನ್ನು ನಿಲ್ಲಿಸಿದಂತೆ ಮಾಡಿ ಮತ್ತೊಂದು ಮಗ್ಗುಲಲ್ಲಿ ಕಾರು ತಿರುಗಿಸಿಕೊಂಡು ಅಂಕಿತ್ ತಪ್ಪಿಸಿಕೊಂಡು ಹೋಗಿದ್ದಾನೆ .
ಅಪಘಾತದ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಬಾರೀ ವೈರಲ್ ಆಗಿತ್ತು. ಬೈಕ್‍ನಲ್ಲಿದ್ದ ನಕುಲ್‍ಗೆ ಗಂಭೀರ ಗಾಯಗಳಾಗಿದ್ದು, ಮಲ್ಲೇಗೌಡ ಸರಕಾರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಹಿಂದೆ ಬಿದ್ದ ಪೊಲೀಸರು ಕಾರು ಚಾಲನೆ ಮಾಡತ್ತಿದ್ದ ಅಂಕಿತ್‍ನನ್ನು ವಿಚಾರಣೆಗೆ ಒಳಪಡಿಸಿದಾಗ ಪ್ರಕರಣದ ಹಿಂದೆ ಕೊಲೆಗೆ ಸಂಚು ರೂಪಿಸಿದ್ದ ವಿಷಯ ಬೆಳಕಿಗೆ ಬಂದಿದೆ.
ಹುಡುಗಿಯ ವಿಚಾರವಾಗಿ ಇಬ್ಬರು ಸ್ನೇಹಿತರ ನಡುವೆ ಕಳೆದ ಕೆಲವು ತಿಂಗಳ ಹಿಂದೆ ಜಗಳವಾಗಿತ್ತು. ಇದೇ ಜಿದ್ದು ಇಟ್ಟುಕೊಂಡಿದ್ದ ಅಂಕಿತ್ ಸ್ನೇಹಿತ ನಕುಲ್ ಬೈಕ್‍ಗೆ ಕಾರು ಗುದ್ದಿಸಿ ಕೊಲೆ ಮಾಡುವ ಉದ್ದೇಶದಿಂದ ಕೃತ್ಯ ನಡೆಸಿದ್ದಾನೆ ಎಂಬುದು ತನಿಖೆಯಿಂದ ತಿಳಿದು ಬಂದಿದೆ.
ಪ್ರಕರಣ ಸಂಬಂಧ ನಗರ ಪೊಲೀಸ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಅಂಕಿತ್‍ನನ್ನು ಬಂಧಿಸಲಾಗಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ನಕುಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.