ಚಿಕ್ಕಮಗಳೂರು: ಕಾಡಾನೆಗಳ ದಾಳಿಯಿಂದ ಕಾಫಿ, ಅಡಿಕೆ ತೋಟಗಳನ್ನು ರಕ್ಷಿಸಿಕೊಳ್ಳಲು ಬಾಳೆ ತೋಟ ನಾಶ ಮಾಡಿದ ರೈತರು
ಚಿಕ್ಕಮಗಳೂರು, ಸೆ.8: ಕಾಫಿನಾಡಿನಲ್ಲಿ ಕಾಡಾನೆಗಳ ಹಾವಳಿ ಮುಂದುವರಿದಿದ್ದು, ಶುಕ್ರವಾರ ರಾತ್ರಿ ತಾಲೂಕಿನ ಆಲ್ದೂರು ಹೋಬಳಿ ವ್ಯಾಪ್ತಿಯ ಅರೇನೂರು ಗ್ರಾಮದಲ್ಲಿ ರೈತರಿಬ್ಬರ ಜಮೀನುಗಳುಗೆ ನುಗ್ಗಿದ ಕಾಡಾನೆಗಳು ಕಾಫಿ, ಅಡಿಕೆ, ತೆಂಗಿನಮರ, ಬಾಳೆ ತೋಟಗಳನ್ನು ನಾಶ ಮಾಡಿವೆ. ಕಾಡಾನೆಗಳ ಗುಂಪು ಬಾಳೆ ಹಣ್ಣಿಗಾಗಿ ಕಾಫಿ, ಅಡಿಕೆ ತೋಟಗಳಿಗೆ ಹೆಚ್ಚಾಗಿ ದಾಳಿ ಮಾಡುತ್ತಿದ್ದು, ಇದರಿಂದ ಬೇಸತ್ತ ರೈತರು ಕಾಡಾನೆಗಳ ದಾಳಿಯಿಂದ ಕಾಫಿ, ಅಡಿಕೆ ತೋಟಗಳನ್ನು ರಕ್ಷಿಸಿಕೊಳ್ಳಲು ಬಾಳೆ ತೋಟಗಳನ್ನೇ ನಾಶ ಮಾಡುತ್ತಿದ್ದಾರೆ.
ತಾಲೂಕಿನ ಆಲ್ದೂರು ಹೋಬಳಿ ವ್ಯಾಪ್ತಿಯ ಕಂಚಿಕಲ್ಲು ದುರ್ಗಾ ಗ್ರಾಮದಲ್ಲಿ ಇತ್ತೀಚೆಗೆ ಕಾಡಾನೆಯೊಂದು ಕೂಲಿ ಕಾರ್ಮಿಕನ ಮೇಲೆ ದಾಳಿ ಮಾಡಿ ಕೊಂದು ಹಾಕಿತ್ತು. ಈ ಘಟನೆ ಬಳಿಕ ಕಾಡಾನೆಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಕಾಡುಗಳಿಗೆ ಓಡಿಸಿದ್ದರು. ಆದರೆ ಇದೇ ಗ್ರಾಮದ ಸಮೀಪದಲ್ಲಿರುವ ಆರೇನೂರು ಗ್ರಾಮದ ಹಲವು ತೋಟಗಳಿಗೆ ಶುಕ್ರವಾರ ರಾತ್ರಿ ದಾಳಿ ಮಾಡಿರುವ ಕಾಡಾನೆಗಳು ಅಪಾರ ಪ್ರಮಾಣದಲ್ಲಿ ಕಾಫಿ, ಅಡಿಕೆ, ಬಾಳೆ, ತೆಂಗು ಬೆಳೆಯನ್ನು ನಾಶ ಮಾಡಿವೆ. ಗ್ರಾಮದ ಮಲ್ಲೇಶ್‍ಗೌಡ, ಮಹೇಂದ್ರ ಎಂಬವರ ತೋಟಗಳಿಗೆ ನುಗ್ಗಿರುವ ಕಾಡಾನೆಗಳು 30 ತೆಂಗಿನ ಮರಗಳನ್ನು ಉರುಳಿಸಿ ನಾಶ ಮಾಡಿದ್ದು, ನೂರಾರು ಅಡಿಕೆ, ಕಾಫಿ ಗಿಡಗಳನ್ನು ಮುರಿದು ಹಾಕಿವೆ. ಅಲ್ಲದೇ ಬಾಳೆ ತೋಟಗಳನ್ನೂ ನಾಶ ಮಾಡಿವೆ.
ಅರೇನೂರು ಗ್ರಾಮದ ಸಮೀಪದಲ್ಲಿರುವ ಕಾಡುಗಳಲ್ಲಿ ಸುಮಾರು 8 ಕಾಡಾನೆಗಳು ಬೀಡು ಬಿಟ್ಟಿದ್ದು, ಹಗಲಿನ ವೇಳೆ ನಾಪತ್ತೆಯಾಗುವ ಕಾಡಾನೆಗಳು, ರಾತ್ರಿ ವೇಳೆ ಕಾಡಂಚಿನ ಗ್ರಾಮಗಳಿಗೆ ದಾಳಿ ಮಾಡಿ ಬೆಳೆ ನಾಶ ಮಾಡುತ್ತಿವೆ. ಕಾಡಾನೆಗಳ ಹಾವಳಿಯಿಂದ ಗ್ರಾಮಸ್ಥರು ನೆಮ್ಮದಿ ಕಳೆದುಕೊಂಡಿದ್ದು, ಪ್ರಾಣಭೀತಿಯಲ್ಲಿ ಬದುಕುವಂತಾಗಿದೆ. ರಾತ್ರಿ ವೇಳೆ ಹಾಗೂ ಹಗಲಿನಲ್ಲಿ ಎಲ್ಲೆಂದರಲ್ಲಿ ತಿರುಗಲು ಸಾಧ್ಯವಾಗದಂತಾಗಿದ್ದು, ತೋಟಗಳಿಗೆ ಹೋಗಿ ನಿರ್ವಹಣೆ ಮಾಡಲು ಅಂಜುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮೀಣ ಭಾಗದ ಶಾಲಾ ಕಾಲೇಜು ಮಕ್ಕಳು ಕಾಡು ದಾರಿಯಲ್ಲಿ ನಡೆದುಕೊಂಡು ಬರಲೂ ಸಾಧ್ಯವಾಗದಂತಾಗಿದೆ. ಗ್ರಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಕಾಡಾನೆಗಳ ಹಾವಳಿ ಎಷ್ಟೇ ಪ್ರಯತ್ನಪಟ್ಟರೂ ಕಾಡಾನೆಗಳ ಹಾವಳಿ ಮಾತ್ರ ನಿಯಂತ್ರಣಕ್ಕೆ ಬಾರದಂತಾಗಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಳ್ಳುತ್ತಿದ್ದಾರೆ.
ಬಾಳೆ ತೋಟ ನಾಶ ಮಾಡುತ್ತಿರುವ ರೈತರು: ಆಲ್ದೂರು, ಮೂಡಿಗೆರೆ ಭಾಗದಲ್ಲಿ ಕಾಫಿ, ಅಡಿಕೆ ತೋಟಗಳ ಮಧ್ಯೆ ಉಪಬೆಳೆಯಾಗಿ ಬಾಳೆ ಕೃಷಿಯನ್ನು ರೈತರು ಹೆಚ್ಚಾಗಿ ಮಾಡುತ್ತಿದ್ದು, ಬಾಳೆಕಾಯಿ, ಹಣ್ಣುಗಳನ್ನು ತಿನ್ನಲು ಕಾಡಾನೆಗಳು ತೋಟಗಳಿಗೆ ರಾತ್ರಿ ವೇಳೆ ದಾಳಿ ಮಾಡುತ್ತಿವೆ. ಬಾಳೆ ಗಿಡಗಳನ್ನ ತಿನ್ನಲು ಬರುವ ಕಾಡಾನೆಗಳು ಕಾಫಿ, ಅಡಿಕೆ ಗಿಡ, ಮರಗಳನ್ನು ತುಳಿದು ನಾಶ ಮಾಡುತ್ತಿವೆ. ಈ ಹಿನ್ನೆಲೆಯಲ್ಲಿ ಕಾಫಿ, ಅಡಿಕೆ ತೋಟಗಳ ಮಧ್ಯೆ ಬಾಳೆ ಬೆಳೆದ ರೈತರು ಬಾಳೆ ಗಿಡಗಳನ್ನು ಕಡಿದು ಹಾಕಿ ಕಾಫಿ, ಅಡಿಕೆ ತೋಟಗಳನ್ನು ಕಾಡಾನೆಗಳಿಂದ ರಕ್ಷಣೆ ಮಾಡಲು ಮುಂದಾಗಿದ್ದಾರೆ.
ಶನಿವಾರ ಅರೆನೂರು ಗ್ರಾಮ ಸಮೀಪದ ಹಕ್ಕಿಮಕ್ಕಿ ಗ್ರಾಮದ ರೈತ ಸಾಗರ್ ಎಂಬವರು ತನ್ನ ಕಾಫಿ ತೋಟದಲ್ಲಿ ಬೆಳೆದಿದ್ದ ನೂರಾರು ಬಾಳೆ ಗಿಡಗಳನ್ನು ಕಡಿದು ನಾಶ ಮಾಡಿದ ಘಟನೆ ನಡೆದಿದೆ. ಕಾಡಾನೆಗಳ ನಿರಂತರ ದಾಳಿಗೆ ಬೇಸತ್ತಿರುವ ಈ ಭಾಗದ ಹಲವು ರೈತರು ತಮ್ಮ ತೋಟಗಳನ್ನು ರಕ್ಷಣೆ ಮಾಡಿಕೊಳ್ಳುವ ಉದ್ದೇಶದಿಂದ ಬಾಳೆ ತೋಟಗಳನ್ನೇ ನಾಶ ಮಾಡಲಾರಂಭಿಸಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಈ ಭಾಗದಲ್ಲಿರುವ ಕಾಡಾನೆಗಳನ್ನು ಸೆರೆ ಹಿಡಿದು ಸ್ಥಳಾಂತರ ಮಾಡಬೇಕೆಂದು ರೈತ ಸಾಗರ್ ಮನವಿ ಮಾಡಿದ್ದಾರೆ.