ಚಿಕ್ಕಮಗಳೂರು | ಮಹಿಷ ದಸರಾ ಕಾರ್ಯಕ್ರಮಕ್ಕೆ ಬೆದರಿಕೆ ಆರೋಪ; ಭದ್ರತೆ ಒದಗಿಸಲು ಆಗ್ರಹ

Update: 2023-10-17 16:45 GMT

ಚಿಕ್ಕಮಗಳೂರು, ಅ.17: ನಗರದಲ್ಲಿ ಅ.20ರಂದು ಮಹಿಷ ದಸರಾ ಆಚರಣಾ ಸಮಿತಿ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಹಯೋಗದೊಂದಿಗೆ ಮಹಿಷ ದಸರಾ ಕಾರ್ಯಕ್ರಮ ಆಯೋಜಿಸಿದ್ದು, ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸುತ್ತಿರುವ ಪ್ರೊ.ಭಗವಾನ್ ಅವರಿಗೆ ಕೆಲ ಸಂಘಟನೆಗಳ ಮುಖಂಡರು ಬೆದರಿಕೆಯೊಡ್ಡಿ, ಕಾರ್ಯಕ್ರಮಕ್ಕೆ ಅಡ್ಡಿಪಡಿಸುವುದಾಗಿ ಹೇಳಿಕೆ ನೀಡಿವೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಇಲಾಖೆ ಅಂತಹ ಸಂಘಟನೆ ಮುಖಂಡರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಶಾಂತಿಯುತವಾಗಿ ಮಹಿಷ ದಸರಾ ಆಚರಣೆಗೆ ಅನುವು ಮಾಡಿಕೊಡಬೇಕು ಎಂದು ಮಹಿಷ ದಸರಾ ಆಚರಣಾ ಸಮಿತಿ ಸಂಚಾಲಕ ದಂಟರಮಕ್ಕಿ ಶ್ರೀನಿವಾಸ್ ಒತ್ತಾಯಿಸಿದ್ದಾರೆ.

ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಷ ದಸರಾ ಅಂಗವಾಗಿ ಅಂದು ಬೆಳಗ್ಗೆ ನಗರದ ಹನುಮಂತಪ್ಪವೃತ್ತದಿಂದ ಆಝಾದ್ಪಾರ್ಕ್ ವೃತ್ತದವರೆಗೂ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಆಝಾದ್ ಪಾರ್ಕ್ ವೃತ್ತದಲ್ಲಿ ಬಹಿರಂಗ ಸಭೆ ನಡೆಯಲಿದೆ. ಸಭೆಯಲ್ಲಿ ಪ್ರಗತಿಪರ ಚಿಂತಕ ಪ್ರೊ.ಕೆ.ಎಸ್.ಭಗವಾನ್ ಮತ್ತು ಪ್ರೊ.ಮಹೇಶ್ಚಂದ್ರ ಗುರು ಉಪನ್ಯಾಸ ನೀಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ಸಂಘಪರಿವಾರದ ಕೆಲ ಮುಖಂಡರು ಬೆದರಿಕೆಯೊಡ್ಡಿರುವುದು ಖಂಡನೀಯ. ಇಂತಹ ಬೆದರಿಕೆಗಳನ್ನು ಎದುರಿಸಲು ಸಂಘಟನೆ ಸಿದ್ಧವಿದ್ದು, ಅಹಿತಕರ ಘಟನೆಗಳು ನಡೆಯದಂತೆ ಜಿಲ್ಲಾಡಳಿತ ರಕ್ಷಣೆ ನೀಡಬೇಕು. ತಪ್ಪಿದಲ್ಲಿ ಆಗುವ ಅನಾಹುತಗಳಿಗೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯೇ ಹೊಣೆ ಎಂದು ಎಚ್ಚರಿಸಿದರು.

ಮಹಿಷಾಸುರ ಪರಿಶಿಷ್ಟರ ಅಸ್ಮಿತೆ. ಇತಿಹಾಸದಲ್ಲಿ ಮೂಲ ನಿವಾಸಿಗಳ ಆಳ್ವಿಕೆಯ ಕಾಲಘಟ್ಟದಲ್ಲಿ ಮಹಿಷಾಸುರನ ಆಳ್ವಿಕೆಯೂ ಪ್ರಸಿದ್ಧಿ ಹೊಂದಿದೆ. ಮಹಿಷರಾಜನ ಕುರಿತು ಯುವ ಜನತೆಗೆ ಸತ್ಯ ತಿಳಿಸುವ ಉದ್ದೇಶದಿಂದ ಮಹಿಷ ದಸರಾ ಆಯೋಜಿಸಲಾಗಿದೆ. ಈ ಕಾರ್ಯಕ್ರಮ ಮೂಲ ನಿವಾಸಿಗಳ ಇತಿಹಾಸ ಅರಿತು ಬೆಳಕು ಚೆಲ್ಲುವ ಕಾರ್ಯಕ್ರಮವೇ ಹೊರತು, ಯಾವುದೇ ಧರ್ಮವನ್ನು ಅವಹೇಳನ ಮಾಡುವ ಕಾರ್ಯಕ್ರಮವಲ್ಲ ಎಂದು ಸ್ಪಷ್ಟಪಡಿಸಿದರು.

ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಕಾರ್ಯಕ್ರಮಕ್ಕೆ ಅಡ್ಡಿಪಡಿಸುವ ಸಂಚು ಮಾಡಿರುವ ಸಂಘಟನೆಗಳ ಮುಖಂಡರು ಮತ್ತು ಕಾರ್ಯಕರ್ತರನ್ನು ಬಂಧಿಸಿ ಕಾನೂನು ಕ್ರಮಕ್ಕೆ ಮುಂದಾಗಬೇಕು. ಕಾರ್ಯಕ್ರಮಕ್ಕೆ ಆಗಮಿಸುವ ಅಥಿತಿಗಳಿಗೆ ಸೂಕ್ತ ಭದ್ರತೆ ನೀಡಬೇಕು. ಕಾರ್ಯಕ್ರಮ ಶಾಂತಿಯುತವಾಗಿ ನಡೆಸಲು ಸಹಕರಿಸಬೇಕೆಂದು ಶ್ರೀನಿವಾಸ್ ಮನವಿ ಮಾಡಿದರು.

ದಲಿತ ಸಂಘರ್ಷ ಸಮಿತಿಯ ಮರ್ಲೆ ಅಣ್ಣಯ್ಯ ಮಾತನಾಡಿ, ಚಿಕ್ಕಮಗಳೂರಿನಲ್ಲಿ ದಲಿತ ಸಂಘರ್ಷ ಸಮಿತಿಗೆ 50ವರ್ಷಗಳ ಇತಿಹಾಸವಿದೆ. ಅನೇಕ ಜನಪರ ಹೋರಾಟಗಳನ್ನು ದಸಂಸ ಮಾಡಿರುವ ಇತಿಹಾಸ ಹೊಂದಿದೆ. ದಲಿತ ಸಂಘರ್ಷ ಸಮಿತಿ ಜಿಲ್ಲೆಯಲ್ಲಿ ಶಾಂತಿ ಕದಡುವ ಕೆಲಸವನ್ನು ಎಂದಿಗೂ ಮಾಡಿಲ್ಲ. ಮಹಿಷ ದಸರಾಕ್ಕೆ ಯಾರೂ ಅಡ್ಡಿಪಡಿಸಲು ಮುಂದಾಗಬಾರದು, ಒಂದು ವೇಳೆ ಮುಂದಾದರೇ ಅದಕ್ಕೆ ತಕ್ಕಪಾಠ ಕಲಿಸಬೇಕಾಗುತ್ತದೆ. ಅಶಾಂತಿ ಉಂಟಾದಲ್ಲಿ ಅದರ ಹೊಣೆಯನ್ನು ಜಿಲ್ಲಾಡಳಿತ ಹೊರಬೇಕಾಗುತ್ತದೆ ಎಂದು ಎಚ್ಚರಿಸಿದರು.

ವಕೀಲ ಹಾಗೂ ಬಿಎಸ್ಪಿ ರಾಜ್ಯ ಕಾರ್ಯದರ್ಶಿ ಪಿ.ಪರಮೇಶ್ವರ್ ಮಾತನಾಡಿದರು. ಸುದ್ದಿಗೋಷ್ಠಿಯಲ್ಲಿ ನಗರಸಭೆ ಮಾಜಿ ಸದಸ್ಯ ದೇವಿಪ್ರಸಾದ್, ವಿವಿಧ ಸಂಘಟನೆಗಳ ಮುಖಂಡರಾದ ಹರೀಶ್ ಮಿತ್ರ, ಜಗದೀಶ್, ಚಿದಾನಂದ, ರಾಜಣ್ಣ, ಸುರೇಶ್, ವಿನೀತ್, ಭರತ್, ಸಂತೋಷ್ ಮತ್ತಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News