ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾಗಿ ಸಿ.ಕೆ.ನಾಣು ಆಯ್ಕೆ: ಸಿಎಂ ಇಬ್ರಾಹಿಂ
ಬೆಂಗಳೂರು: ಉಚ್ಚಾಟಿತ ಜೆಡಿಎಸ್ ಅಧ್ಯಕ್ಷ ಸಿಎಂ ಇಬ್ರಾಹಿಂ ನೇತೃತ್ವದಲ್ಲಿ ಕಾಡುಕೊಂಡನಹಳ್ಳಿಯ ಖಾಸಗಿ ಸಭಾಭವನದಲ್ಲಿ ನಡೆದ ಜೆಡಿಎಸ್ ರಾಷ್ಟ್ರೀಯ ಸಭೆ ಯಲ್ಲಿ ಸಿ.ಕೆ.ನಾಣು ಅವರನ್ನು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾಗಿ ಸರ್ವಾನುಮತದಿಂದ ಅಂಗೀಕಾರ ಮಾಡಲಾಗಿದೆ.
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಇಬ್ರಾಹಿಂ ಅವರು, ಜೆಡಿಎಸ್ ನೂತನ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಸಿಕೆ ನಾಣು ಅವರನ್ನು ನೇಮಕ ಮಾಡಲಾಗಿದೆ. ಇದು ರಾಷ್ಟ್ರೀಯ ಕೌನ್ಸಿಲ್ ನಿರ್ಣಯ. ನಿತೀಶ್ ಕುಮಾರ್, ಲಾಲು ಪ್ರಸಾದ್ ಭೇಟಿಗೆ ಹೋಗುತ್ತಿದ್ದೇವೆ. ಜನವರಿಯಲ್ಲಿ ಹುಬ್ಬಳ್ಳಿಯಲ್ಲಿ ನಡೆಯಲಿರುವ ಬೃಹತ್ ಸಮಾವೇಶಕ್ಕೆ ಅಖಿಲೇಶ್, ನಿತೀಶ್, ರಾಹುಲ್ ಗಾಂಧಿಗೆ ಆಹ್ವಾನ ನೀಡಲಾಗುವುದು ಎಂದರು.
ಪಕ್ಷದಲ್ಲಿನ ಇತರರ ಅಭಿಪ್ರಾಯಕ್ಕೆ ಮನ್ನಣೆ ಕೊಡದೇ ಬಿಜೆಪಿಯೊಂದಿಗೆ ಹೆಜ್ಜೆ ಹಾಕಿದರೆ ಇದನ್ನು ಪ್ರಶ್ನಿಸುವ ಅಧಿಕಾರ ನಾನೂ ಸೇರಿದಂತೆ ಇತರರಿಗೂ ಇದೆ. ಗಾಂಧೀಜಿಯವರ ತತ್ವಗಳನ್ನು ಬಲಿಕೊಟ್ಟು ಬರೀ ಚುನಾವಣೆಯ ಗೆಲುವಿಗಾಗಿ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡ ಎಚ್.ಡಿ.ದೇವೇಗೌಡರ ವರ್ತನೆಯನ್ನು ಇಂದಿನ ಸಭೆಯಲ್ಲಿ ನಾವು ಖಂಡಿಸುತ್ತೇವೆ ಎಂದು ಇಬ್ರಾಹಿಂ ತಿಳಿಸಿದ್ದಾರೆ.
ಡಿಸೆಂಬರ್ 9ರಂದು ಜೆಡಿಎಸ್ ಕಚೇರಿ ಜೆ.ಪಿ.ಭವನದಲ್ಲಿ ನಡೆದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಸಿ.ಎಂ.ಇಬ್ರಾಹಿಂ ಹಾಗೂ ಪಕ್ಷದ ಜೆಡಿಎಸ್ ರಾಷ್ಟ್ರೀಯ ಉಪಾಧ್ಯಕ್ಷ ಸಿಕೆ ನಾಣು ಅವರನ್ನು ಕೂಡ ಉಚ್ಚಾಟನೆ ಮಾಡಲಾಗಿತ್ತು. ಆದರೆ ಇದೀಗ ಉಚ್ಛಾಟಿತ ನಾಯಕರೇ ಪರ್ಯಾಯವಾಗಿ ಪದಾಧಿಕಾರಿಗಳ ನೇಮಕ ಪ್ರಕ್ರಿಯೆ ನಡೆಸಿದ್ದಾರೆ. ಜೆಡಿಎಸ್ ಸಹ ಈಗ ಇಬ್ಭಾಗವಾಗಿದೆ. ಮುಂದೆ ಪಕ್ಷದ ಚಿಹ್ನೆ ಹಾಗೂ ಪಕ್ಷದ ಅಸ್ತಿತ್ವಕ್ಕಾಗಿ ಕಾನೂನು ಹೋರಾಟಗಳು ನಡೆಯುವ ಲಕ್ಷಣಗಳು ಕಾಣುತ್ತಿವೆ.