ʻಒಂದು ದೇಶ-ಒಂದು ಚುನಾವಣೆʻಯಿಂದ ಹಣ ಉಳಿತಾಯವಾಗುತ್ತದೆ ಎಂಬ ಸಮರ್ಥನೆ ಹಾಸ್ಯಾಸ್ಪದ: ಚಿಂತಕ ಶಿವಸುಂದರ್

Update: 2023-09-16 15:53 GMT

ಬೆಂಗಳೂರು, ಸೆ.16: ‘ಒಂದು ದೇಶ-ಒಂದು ಚುನಾವಣೆ’ ನಡೆದರೆ ಹಣ ಉಳಿತಾಯವಾಗುತ್ತದೆ ಎಂಬ ಸಮರ್ಥನೆ ಮಾತು ಕೇವಲ ಹಾಸ್ಯಾಸ್ಪದವಾಗಿದೆ. ಏಕೆಂದರೆ ಚುನಾವಣೆಗಾಗಿ ಇಡೀ ವಿಶ್ವದಲ್ಲಿಯೇ ಅತಿ ಹೆಚ್ಚು ಹಣ ಖರ್ಚು ಮಾಡಿರುವ ಪಕ್ಷ ಬಿಜೆಪಿ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ’ ಎಂದು ಹಿರಿಯ ಚಿಂತಕ ಶಿವಸುಂದರ್ ತಿಳಿಸಿದ್ದಾರೆ.

ಶನಿವಾರ ನಗರದ ರೇಸ್‍ಕೋರ್ಸ್ ರಸ್ತೆಯ ಭಾರತೀಯ ವಿದ್ಯಾಭವನ ಕೆ.ಆರ್.ವಿ.ಸಭಾಂಗಣದಲ್ಲಿ ಚಿಂತನ ಕರ್ನಾಟಕ ವೇದಿಕೆಯ ವತಿಯಿಂದ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಇತರೆ ಪಕ್ಷಗಳು ಬೆಳೆಯಬಾರದು ಎಂಬ ಕಾರಣಕ್ಕಾಗಿ ಒಂದು ದೇಶ ಒಂದು ಚುನಾವಣೆಯನ್ನು ಬಿಜೆಪಿ ಮುಂದಿಟ್ಟಿದೆ’ ಎಂದು ದೂರಿದರು.

‘ಬಿಜೆಪಿ ನಾಳೆಗಾಗಿ ಎಂದಿಗೂ ಮಾತಾಡುವುದಿಲ್ಲ, ಅವರಿಗೆ ನೂರು ವರ್ಷಗಳ ಅಜೆಂಡಾವಿದೆ. ಒಂದು ದೇಶ ಒಂದು ಚುನಾವಣೆ ಕೇವಲ ರಾಜಕೀಯ ಉದ್ದೇಶ ಮಾತ್ರವಲ್ಲ, ಸೈದ್ಧಾಂತಿಕ ಉದ್ದೇಶವಿದೆ’ ಎಂದು ಶಿವಸುಂದರ್ ವಿವರಿಸಿದರು.

ಸಿಪಿಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಡಾ.ಕೆ.ಪ್ರಕಾಶ್ ಮಾತನಾಡಿ, ‘ಒಂದು ದೇಶ-ಒಂದು ಚುನಾವಣೆಯು ಒಕ್ಕೂಟ ವ್ಯವಸ್ಥೆಯ ಮೇಲಿನ ಇನ್ನೊಂದು ದಾಳಿಯಾಗಿದೆ. ಈ ಆಲೋಚನೆ ಆರೆಸ್ಸೆಸ್ ಸಿದ್ದಾಂತದ ಗುರಿಯನ್ನು ಇದು ಹೊಂದಿದೆ. ಪ್ರಾದೇಶಿಕ ಆಶಯಗಳನ್ನು ಇದು ನಾಶ ಮಾಡುತ್ತದೆ ಹಾಗೂ ಏಕ ದೇಶ ಏಕ ಸಂಸ್ಕೃತಿಗೆ ಪೂರಕವಾಗಿ ಇದನ್ನು ಮಾಡುತ್ತಿದ್ದಾರೆ’ ಎಂದು ಟೀಕಿಸಿದರು.

ಚಿಂತಕ ಎ.ನಾರಾಯಣ ಮಾತನಾಡಿ, ‘ಇದು ಜನರ ಗಮನ ಬೇರೆಡೆ ಸೆಳೆಯುವ ಪ್ರಯತ್ನದ ಭಾಗವಾಗಿದೆ. ಇದು ಹತ್ತು ವರ್ಷಗಳಿಂದ ದೇಶದ ಸರಕಾರದ ವೈಫಲ್ಯ ಮತ್ತು ದ್ವೇಷವನ್ನು ಒಡೆದಾಳಿದ ಕತೆಯಾಗಿದೆ. ಇದು ದೇಶದ ಭದ್ರತೆಯನ್ನು ನಾಶ ಮಾಡುವ ಒಂದು ಪ್ರಸ್ಥಾಪವಾಗಿದೆ. ನಾವು ವಿರೋಧಿಸುವುದು ಕೇವಲ ಮೋದಿ ಮತ್ತು ಬಿಜೆಪಿಯನ್ನು ವಿರೋಧಿಸುವುದಕ್ಕೆ ಮಾತ್ರವಲ್ಲ, ದೇಶವನ್ನು ಅತ್ಯಂತ ಹೆಚ್ಚು ಪ್ರೀತಿಸುವುದಕ್ಕಾಗಿದೆ ಎಂಬುದನ್ನು ದೇಶದ ಜನರಿಗೆ ಸಾರಿ ಸಾರಿ ಹೇಳಬೇಕಾಗಿದೆ’ ಎಂದರು.

ಜೆಡಿಎಸ್ ವಕ್ತಾರ ಸಿ.ಎಂ.ಫೈಜ್ ಮಾತನಾಡಿ, ‘ಒಂದು ದೇಶ ಒಂದು ಚುನಾವಣೆ, ಆಧುನಿಕ ಹಿಟ್ಲರ್ ಪಡೆಗಳು ತಂದಿರುವ ಒಂದು ಪ್ರಸ್ತಾಪವಾಗಿದೆ. ಸಂವಿಧಾನದ ಹಲವು ವಿಧಿಗಳನ್ನು ತಿದ್ದುಪಡಿ ಮಾಡಬೇಕಾಗುತ್ತದೆ. ಖರ್ಚು ಉಳಿತಾಯ ಎಂಬುವುದು ದೊಡ್ಡ ಸುಳ್ಳು. ಪದೇ ಪದೇ ಚುನಾವಣೆ ನಡೆದರೆ ಸಮಯ ಹಾಳು ಎಂದು ಹೇಳುವವರ ಮುಂದೊಂದು ದಿನ 15 ವರ್ಷಗಳಿಗೊಮ್ಮೆ ನಡೆಸುವ ಬಗ್ಗೆ ಕೂಡಾ ಸಮಿತಿ ರಚಿಸಲು ಮುಂದಾಗುತ್ತಾರೆ’ ಎಂದು ಕಳವಳ ವ್ಯಕ್ತಪಡಿಸಿದರು.

ಎಎಪಿಯ ಪೃಥ್ವಿ ರೆಡ್ಡಿ ಮಾತನಾಡಿ, ‘ಬಿಜೆಪಿಯ ಅಜೆಂಡಾ ಇರುವುದೇ ಒಂದು ನಾಯಕ, ಒಂದು ಪಕ್ಷ ಎಂಬುದಾಗಿದೆ. ರಾಷ್ಟ್ರೀಯ, ರಾಜ್ಯ, ಮುನ್ಸಿಪಲ್, ಹಾಗೂ ಪಂಚಾಯತ್ ಚುನಾವಣೆಗಳ ವಿಷಯಗಳೇ ಬೇರೆ ಬೇರೆಯಾಗಿದೆ. ಆದರೆ ಬಿಜೆಪಿಗೆ ಯಾವುದೇ ವಿಷಯ ಮತ್ತು ನಾಯಕನಿಲ್ಲದ ಕಾರಣ ಈ ರೀತಿಯಾಗಿ ಗೊಂದಲ ಸೃಷ್ಠಿಸಲು ಮುಂದಾಗಿದೆ’ ಎಂದರು.

ಸಿಪಿಐಎಂಎಲ್ ರಾಜ್ಯ ಕಾರ್ಯದರ್ಶಿ ಕ್ಲಿಫ್ಟನ್ ಡಿ.ರೊಸಾರಿಯೊ ಮಾತನಾಡಿ, ‘ಒಂದು ದೇಶ ಒಂದು ಚುನಾವಣೆ, ತಮಗೆ ಬೇಕಾದ ವರದಿ ಬರೆದುಕೊಡಲು ಹೊಸ ಸಮಿತಿ ರಚನೆ ಮಾಡಿದ್ದಾರೆ. ಸಂಪೂರ್ಣವಾಗಿ ಸಂವಿಧಾನದ ಆಶಯಗಳನ್ನು ಬದಿಗಿಟ್ಟು ಸರ್ಜರಿ ಮಾಡಲಾಗುತ್ತಿದೆ. ಸಂವಿಧಾನ ಒಪ್ಪದ ಆರೆಸ್ಸೆಸ್ ನಾಯಕ ಗೋಲ್ವಾಕರ್ ಅವರ ಆಶಯದಂತೆ ರಾಜಕೀಯ ಯಜಮಾನಿಕೆಗಾಗಿ ಇದನ್ನು ಮಾಡುತ್ತಿದ್ದಾರೆ ಎಂದರು.

ಸಂವಾದದಲ್ಲಿ ರಂಗಭೂಮಿ ಕಲಾವಿದೆ ಸುಷ್ಮಾ ವೀರ್, ಸರ್ವೋದಯ ಕರ್ನಾಟದ ಪ್ರಧಾನ ಕಾರ್ಯದರ್ಶಿ ಪ್ರಸನ್ನ ಎನ್, ಕೆಪಿಸಿಸಿ ವಕ್ತಾರ ಮಂಜುನಾಥ್ ಅದ್ದೆ, ಎಸ್‍ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಭಾಸ್ಕರ ಪ್ರಸಾದ್, ಕರ್ನಾಟಕ ರಕ್ಷಣಾ ವೇದಿಕೆಯ ಮುಖಂಡ ಚೇತನ್ ಜೀರಾಳ್ ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News