ಸಿ.ಎಂ. ಇಬ್ರಾಹಿಂ ಅವರನ್ನು ಮತ್ತೆ ಕಾಂಗ್ರೆಸ್‌ಗೆ ಸೇರಿಸಿಕೊಳ್ಳಬೇಡಿ: ಶಾಸಕ ಕೊತ್ತೂರು ಮಂಜುನಾಥ್

Update: 2023-10-02 16:05 GMT

ಕೋಲಾರ .ಅ.02 : ಜೆಡಿಎಸ್‌ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಅವರನ್ನು ಯಾವುದೇ ಕಾರಣಕ್ಕೂ ಕಾಂಗ್ರೆಸ್‌ಗೆ ಸೇರಿಸಿಕೊಳ್ಳಬಾರದು ಎಂದು ಕಾಂಗ್ರೆಸ್‌ ಶಾಸಕ ಕೊತ್ತೂರು ಮಂಜುನಾಥ್ ಹೇಳಿದ್ದಾರೆ.

ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʼʼಈ ಹಿಂದೆ ಕಾಂಗ್ರೆಸ್‌ನಲ್ಲಿ ಅಧಿಕಾರ ಅನುಭವಿಸಿ ಅಧಿಕಾರಕ್ಕಾಗಿ ಪಕ್ಷ ತೊರೆದಿದ್ದ ಸಿ.ಎಂ.ಇಬ್ರಾಹೀಂ ಈಗ ಬದಲಾದ ಜೆಡಿಎಸ್ ರಾಜಕೀಯ ಸನ್ನಿವೇಶದಲ್ಲಿ ಮತ್ತೆ ಕಾಂಗ್ರೆಸ್‌ ಬರಲು ಮುಂದಾದರೆ ಸೇರಿಸಿಕೊಳ್ಳಬಾರದುʼʼ ಎಂದು ಕಾಂಗ್ರೆಸ್ ಹೈಕಮಾಂಡ್ ಅನ್ನು ಆಗ್ರಹಿಸಿದ್ದಾರೆ.

ʼʼಈಗಾಗಲೇ ಕಾಂಗ್ರೆಸ್ ಪಕ್ಷದಲ್ಲಿ ಝಮೀರ್‌ ಅಹ್ಮದ್‌ ಖಾನ್‌, ರಹೀಂ ಖಾನ್‌, ತನ್ವೀರ್‌ ಸೇಠ್‌, ನಸೀರ್‌ ಅಹ್ಮದ್‌ ಮೊದಲಾದ ಮುಸ್ಲಿಂ ನಾಯಕರು ಇಲ್ಲವೇ? ಅಧಿಕ್ಕಾರಕ್ಕಾಗಿ ಆಸೆಪಡುವವರನ್ನು ಪಕ್ಷಕ್ಕೆ ತರುವುದು ಬೇಡʼʼ ಎಂದು ಹೇಳಿದರು.

ಇದೇ ವೇಳೆ ಲಿಂಗಾಯಿತರಿಗೆ ಸೂಕ್ತ ಸ್ಥಾನಮಾನ ದೊರೆಯುತ್ತಿಲ್ಲ ಎಂದಿರುವ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ʼʼಕೆಲವರು ತಲೆ ಕೆಟ್ಟು ಮುಖ್ಯಮಂತ್ರಿ ಸ್ಥಾನದ ಕುರಿತು ಹೇಳಿಕೆ ನೀಡುತ್ತಿದ್ದಾರೆ. ಈ ಬಗ್ಗೆ ತೆಲೆಕೆಡಿಸಿಕೊಳ್ಳುವ ಅಗತ್ಯ ಇಲ್ಲ. ಕಾಂಗ್ರೆಸ್​ ಜನರ ಆಶೀರ್ವಾದದಿಂದ 136 ಸ್ಥಾ‌ನಗಳನ್ನು ಗೆದ್ದಿದೆ. ಸರ್ಕಾರವೂ ಸಹ ಸುಭಿಕ್ಷವಾಗಿ ನಡೆದುಕೊಂಡು ಹೋಗುತ್ತಿದೆʼʼ ಎಂದರು .

ʼʼಯಾರೇ ಶಾಸಕರು ಏನಾದರೂ ಮಾತನಾಡಲೇಬೇಕು ಎಂದಿದ್ದರೆ, ಅವರ ಕ್ಷೇತ್ರಗಳ ಸಮಸ್ಯೆಗಳು ಮತ್ತು ಅಭಿವೃದ್ಧಿಯ ಬಗ್ಗೆ ಮಾತನಾಡಲಿ. ಕ್ಷೇತ್ರಕ್ಕಾಗಿ ಕೆಲಸ ಮಾಡಲಿ. ತಮ್ಮ ಕ್ಷೇತ್ರದ ಅಗತ್ಯಗಳ ಬಗ್ಗೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಿ ಆದರೆ,ಅನಗತ್ಯವಾಗಿ ಮಾತನಾಡುವವರನ್ನು ಪಕ್ಷದಿಂದ ದೂರ ಇಡಬೇಕುʼʼ ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News