ಗುತ್ತಿಗೆದಾರರ ಬಾಕಿ ಹಣ ಶೀಘ್ರ ಬಿಡುಗಡೆ ಬಗ್ಗೆ ಸಿಎಂ ಭರವಸೆ ನೀಡಿದ್ದಾರೆ: ಡಿ ಕೆಂಪಣ್ಣ
ಬೆಂಗಳೂರು, ಅ.14: ಶೀಘ್ರದಲ್ಲೇ ಗುತ್ತಿಗೆದಾರರ ಬಾಕಿ ಹಣ ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಒಂದು ವೇಳೆ ತಮ್ಮ ಸಮಸ್ಯೆ ಬಗೆಹರಿಯದೆ ಇದ್ದಲ್ಲಿ ಹೋರಾಟ ಅನಿವಾರ್ಯ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಹೇಳಿದ್ದಾರೆ.
ಶನಿವಾರ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಗುತ್ತಿಗೆದಾರರ ಸಂಘದ ನಿಯೋಗ, ರಾಜ್ಯ ಸರಕಾರದಿಂದ 20 ಸಾವಿರ ಕೋಟಿ ರೂ. ಬಾಕಿ ಬರಬೇಕಿದೆ. ಇದನ್ನು ಕೂಡಲೇ ಬಿಡುಗಡೆಗೊಳಿಸುವಂತೆ ಮನವಿ ಸಲ್ಲಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು ಪರಿಶೀಲಿಸಿ ಹಂತ ಹಂತವಾಗಿ ಶೀಘ್ರದಲ್ಲಿಯೇ ಹಣ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂದು ಹೇಳಿದರು.
ಬಿಬಿಎಂಪಿ ಮುಖ್ಯ ಆಯುಕ್ತ ಹಾಗೂ ಮುಖ್ಯ ಇಂಜಿನಿಯರ್ ಗುತ್ತಿಗೆದಾರರಿಗೆ ಹಿಂಸೆ ಕೊಡುತ್ತಿದ್ದಾರೆ ಎಂದು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ. ಇನ್ನೂ, ರಾಜ್ಯದ ಹಣಕಾಸು ಸ್ಥಿತಿ ಉತ್ತಮವಾಗಿಲ್ಲ. ಆದರೂ, ಆದಷ್ಟು ಶೀಘ್ರದಲ್ಲಿ ಬಾಕಿ ಹಣ ಬಿಡುಗಡೆ ಮಾಡುತ್ತೇವೆ ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಒಂದು ತಿಂಗಳಿನಲ್ಲಿ ಎಲ್ಲ ಅಧಿಕಾರಿಗಳ ಜೊತೆ ಸಭೆ ನಡೆಸಿ, ಗುತ್ತಿಗೆದಾರರ ಸಮಸ್ಯೆಗಳ ಬಗ್ಗೆ ಚರ್ಚಿಸಿ ಬಗೆಹರಿಸಲು ಕ್ರಮ ಕೈಗೊಳ್ಳುತ್ತೇವೆ. ಬಾಕಿ ಬಿಲ್ ಈ ವರ್ಷದಲ್ಲಿ ಪಾವತಿ ಮಾಡುತ್ತೇವೆ ಎಂದೂ ಉಲ್ಲೇಖಿಸಿದ್ದಾರೆ ಎಂದು ಕೆಂಪಣ್ಣ ಮಾಹಿತಿ ನೀಡಿದರು.
ಎಲ್ಲ ಇಲಾಖೆಗಳಿಂದ ಸುಮಾರು 20,000 ಕೋಟಿ ರೂ. ಗುತ್ತಿಗೆದಾರರ ಬಾಕಿ ಬಿಲ್ ಇದ್ದು, ಇದರಲ್ಲಿ ಶೇ.50ರಷ್ಟದರೂ ಪಾವತಿ ಮಾಡಬೇಕು. ಗುತ್ತಿಗೆದಾರರ ಸಮಸ್ಯೆ ಬಿಗಡಾಯಿಸಿ ಭಾರೀ ಸಂಕಷ್ಟದಲ್ಲಿದ್ದಾರೆ. ಸಾಲ ತೀರಿಸಲಾಗದೆ ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಹೀಗಾಗಿ ಆದಷ್ಟು ಬೇಗ ಬಾಕಿ ಬಿಲ್ ಪಾವತಿ ಮಾಡಿ ಎಂದು ಕೋರಲಾಗಿದೆ ಎಂದರು.
ಅಂಬಿಕಾಪತಿ ವಜಾ..!
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ರಾಜಕೀಯವಾಗಿ ಬಹಳ ಮಾತನಾಡುತ್ತಾರೆ. ಅವರ ರಾಜಕೀಯವನ್ನು ನಾವು ಒಪ್ಪಬಹುದು ಅಥವಾ ಒಪ್ಪದೇ ಇರಬಹುದು. ಐಟಿ ದಾಳಿ ಆದ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಅಂಬಿಕಾಪತಿ ಅವರಿಗೆ ಬೇರೆ ವಹಿವಾಟು ಇದೆ. ಕ್ವಾರಿ ಉದ್ಯಮವೂ ಇದ್ದು, ಕಾನೂನು ಅದರದ್ದೇ ಆದ ಕ್ರಮ ಕೈಗೊಳ್ಳುತ್ತದೆ. ತಪ್ಪು ಸಾಬೀತಾದರೆ ಸಂಘದಿಂದ ಅವರನ್ನು ವಜಾ ಮಾಡುತ್ತೇವೆ ಎಂದು ಕೆಂಪಣ್ಣ ಹೇಳಿದರು.