ವಕ್ಫ್ ಆಸ್ತಿ | ರೈತರಿಗೆ ನೀಡಿದ್ದ ನೋಟಿಸ್ ಹಿಂಪಡೆಯಲು ಡಿ.ಸಿ.ಗಳಿಗೆ ಸಿಎಂ ಸೂಚನೆ : ಗೃಹ ಸಚಿವ ಜಿ.ಪರಮೇಶ್ವರ್
ಬೆಂಗಳೂರು: "ವಕ್ಫ್ ಬೋರ್ಡ್ ಆಸ್ತಿ ವಿಚಾರವಾಗಿ ರೈತರಿಗೆ ಯಾವುದೇ ನೋಟಿಸ್ ಕೊಡಬೇಡಿ ಎಂದು ಸಿಎಂ ಸಿದ್ದರಾಮಯ್ಯನವರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಈಗಾಗಲೇ ಕೊಟ್ಟಿರುವ ನೋಟಿಸನ್ನು ವಾಪಸ್ ಪಡೆಯಿರಿ ಎಂದಿದ್ದಾರೆ" ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದರು.
ಶನಿವಾರ ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ʼಕಂದಾಯ ಇಲಾಖೆಯಲ್ಲಿನ ದಾಖಲಾತಿ ಹಾಗೂ ವಕ್ಫ್ ದಾಖಲಾತಿಯಲ್ಲಿ ಒಂದೇ ಇದ್ದರೆ ಯಾವುದೇ ಗೊಂದಲ ಆಗುವುದಿಲ್ಲ. ಅಂತಿಮವಾಗಿ ಕಂದಾಯ ದಾಖಲಾತಿ ಮುಖ್ಯ. ಅದರಲ್ಲಿ ಏನಿದೆಯೋ ಅದರಂತೆ ದಾಖಲಾಗಲಿದೆ. ಸರಕಾರ ಯಾವುದೇ ಕ್ರಮ ಕೈಗೊಳ್ಳುವ ಕೆಲಸ ಮಾಡುವುದಿಲ್ಲ. ವಕ್ಫ್ ಮಂಡಳಿ ಆಸ್ತಿ ವಿಚಾರ ಸದ್ಯ ಮುಗಿದು ಹೋದ ಅಧ್ಯಾಯʼ ಎಂದು ಹೇಳಿದರು.
5 ಗ್ಯಾರಂಟಿಗಳಲ್ಲಿ ಒಂದಾದ ‘ಶಕ್ತಿ’ ಯೋಜನೆ ಪರಿಷ್ಕರಣೆ ಕುರಿತು ಡಿಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ನಮ್ಮ ಗ್ಯಾರಂಟಿ ಯೋಜನೆಗಳಲ್ಲಿ ಯಾವುದೇ ಗೊಂದಲ ಇಲ್ಲ, ಅನುಷ್ಠಾನ ಆಗುತ್ತಿದೆ. ಆ ಕುರಿತು ಏನೇ ಚರ್ಚೆ ಆದರೂ ಸಚಿವ ಸಂಪುಟಕ್ಕೆ ಬರಬೇಕು’ ಎಂದು ತಿಳಿಸಿದರು.
ಸಿಎಂ ಸಿದ್ದರಾಮಯ್ಯ ಅವರು ಪ್ರಧಾನಿ ಮೋದಿಗೆ ರಾಜಕೀಯ ಪುಡಾರಿ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ‘ರಾಜಕೀಯ ಪುಡಾರಿ ಅಂದಿದ್ದು ಗೊತ್ತಿಲ್ಲ. ಪುಡಾರಿ ಅನ್ನೋದು ಸರಿನಾ? ತಪ್ಪಾ ಎಂದೂ ನನಗೆ ಗೊತ್ತಿಲ್ಲʼ ಎಂದರು.