ದೇವೇಗೌಡರ ಭೇಟಿ ಹಿಂದೆ ರಾಜಕೀಯ ಪ್ರಸ್ತಾಪವಿಲ್ಲ : ಸತೀಶ್ ಜಾರಕಿಹೊಳಿ
ಬೆಂಗಳೂರು : ‘ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಭೇಟಿಯ ಹಿಂದೆ ಯಾವುದೇ ರಾಜಕೀಯ ಪ್ರಸ್ತಾಪವಿಲ್ಲ. ಕೇವಲ ಅಭಿವೃದ್ಧಿ ವಿಚಾರಗಳಷ್ಟೇ ಚರ್ಚೆಯಾಗಿವೆ’ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಚ್.ಡಿ.ಕುಮಾರಸ್ವಾಮಿ, ವಿ.ಸೋಮಣ್ಣ ಸೇರಿದಂತೆ ಕೇಂದ್ರ ಸಚಿವರ ಭೇಟಿ ಪೂರ್ವ ನಿಗದಿಯಾಗಿತ್ತು. ಮಾಜಿ ಪ್ರಧಾನಿ ದೇವೇಗೌಡರ ಭೇಟಿ ಆಕಸ್ಮಿಕ. ಸಂಸತ್‍ಗೆ ತೆರಳುವ ಮಾರ್ಗದಲ್ಲಿ ಅವರ ಕಚೇರಿಯಿದ್ದು, ಅಲ್ಲಿ ಅವರನ್ನು ಭೇಟಿ ಮಾಡಿದೆ ಎಂದು ವಿವರಣೆ ನೀಡಿದರು.
ಹಾಸನದ ಹೆದ್ದಾರಿ ವಿಚಾರವಾಗಿ ಎಚ್.ಡಿ.ರೇವಣ್ಣ ಅವರ ಜೊತೆಯೂ ಚರ್ಚೆ ನಡೆಸಬೇಕಿತ್ತು. ಆದರೆ, ಆ ವೇಳೆಗೆ ಅವರು ಕೇಂದ್ರ ಹೆದ್ದಾರಿ ಮತ್ತು ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರ ಜೊತೆ ಚರ್ಚಿಸಲು ತೆರಳಿದ್ದರು. ಹೀಗಾಗಿ ಅವರ ಭೇಟಿ ಸಾಧ್ಯವಾಗಲಿಲ್ಲ ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು.
ಹೊಸದಿಲ್ಲಿ ಭೇಟಿಯ ವೇಳೆ ಹನಿಟ್ರ್ಯಾಪ್‍ಗೆ ಸಂಬಂಧಪಟ್ಟಂತೆ ಯಾವುದೇ ಚರ್ಚೆಗಳಾಗಿಲ್ಲ. ಹೊಸದಿಲ್ಲಿಗೆ ಹೋಗಿ ರಾಜಕೀಯದ ದೂರುಗಳನ್ನು ನೀಡುವ ಅಗತ್ಯ ನಮಗಿಲ್ಲ ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ಕಾಂಗ್ರೆಸ್ ಪಕ್ಷಕ್ಕೆ ಈಗಾಗಲೇ 138 ಮಂದಿ ಶಾಸಕರಿದ್ದಾರೆ. ಜೆಡಿಎಸ್‍ನ ಎಚ್.ಡಿ.ಕುಮಾರಸ್ವಾಮಿಯವರ ಸಹಕಾರದ ಪ್ರಶ್ನೆ ಉದ್ಭವಿಸುವುದಿಲ್ಲ. ಎಚ್.ಡಿ.ಕುಮಾರಸ್ವಾಮಿ, ಸೋಮಣ್ಣ ಅವರಂತೆ ಪ್ರಹ್ಲಾದ್ ಜೋಷಿ ಅವರನ್ನೂ ಭೇಟಿ ಮಾಡಿದ್ದಾನೆ. ಬೆಳಗಾವಿ ವಿಮಾನ ನಿಲ್ದಾಣದ ಕಾಮಗಾರಿ ಸ್ಥಗಿತಗೊಂಡಿದೆ. ಅವುಗಳನ್ನು ಚುರುಕುಗೊಳಿಸುವ ಸಲುವಾಗಿ ಚರ್ಚೆ ಮಾಡಲಾಗಿದೆ ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು.
ಕೇಂದ್ರ ಸಚಿವರನ್ನು ಭೇಟಿ ಮಾಡಿದಂತೆ ನಮ್ಮ ಪಕ್ಷದ ಕೆ.ಸಿ.ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೇವಾಲ ಸೇರಿದಂತೆ ಹಲವು ನಾಯಕರನ್ನು ಭೇಟಿ ಮಾಡಿದ್ದೇನೆ. ಹೊಸದಿಲ್ಲಿಗೆ ಹೋದ ಮೇಲೆ ವರಿಷ್ಠರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸುವುದು ಸಾಮಾನ್ಯ. ಅದರಲ್ಲಿ ಯಾವುದೇ ವಿಶೇಷತೆ ಇಲ್ಲ ಎಂದು ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದರು.
‘ಟ್ರಾಫಿಕ್ ಜಾಮ್‍ನಲ್ಲಿ ಅವಕಾಶ ಸಿಗಬಹುದು: ನಾನು ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯಲ್ಲ. ಈಗಾಗಲೇ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾರೆ. 2028ಕ್ಕೆ ನಮ್ಮ ಸರದಿ ಬರಲಿದೆ. ಮೆಜೆಸ್ಟಿಕ್‍ನ ಟ್ರಾಫಿಕ್ ಜಾಮ್‍ನಲ್ಲಿ ನಮಗೆ ಅವಕಾಶ ಸಿಕ್ಕರೂ ಸಿಗಬಹುದು ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಮಾರ್ಮಿಕವಾಗಿ ಸಚಿವ ಸತೀಶ್ ಜಾರಕಿಹೊಳಿ ಉತ್ತರಿಸಿದರು.