ಕರ್ನಾಟಕ ರಾಜ್ಯ ಈಸ್ಟ್ ಇಂಡಿಯಾ ಕಾಂಗ್ರೆಸ್ ಕಂಪನಿ ಕಪಿಮುಷ್ಟಿಯಲ್ಲಿದೆ : ಹಾಲು, ವಿದ್ಯುತ್ ದರ ಏರಿಕೆಗೆ ಎಚ್‌ಡಿಕೆ ಆಕ್ರೋಶ

Update: 2025-03-28 14:41 IST
PHOTO OF H.D. Kumaraswamy

ಎಚ್.ಡಿ. ಕುಮಾರಸ್ವಾಮಿ

  • whatsapp icon

ಹೊಸದಿಲ್ಲಿ: ಹಾಲು ಮತ್ತು ವಿದ್ಯುತ್ ದರ ಏರಿಕೆ ಮಾಡಿರುವ ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿರುವ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು, ಕರ್ನಾಟಕ ರಾಜ್ಯ ಈಸ್ಟ್ ಇಂಡಿಯಾ ಕಾಂಗ್ರೆಸ್ ಕಂಪನಿ ಕಪಿಮುಷ್ಟಿಯಲ್ಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ರಾಜ್ಯದಲ್ಲಿ ಹಾಲಿನ ಹಾಲಾಹಲ ಶುರುವಾಗಿದೆ. 3ನೇ ಸಲ ದರ ಏರಿಕೆ ಮಾಡಲಾಗಿದೆ. 2023 ಆಗಸ್ಟ್ ತಿಂಗಳಲ್ಲಿ 3 ರೂ., 2024 ಜೂನ್ ತಿಂಗಳಿನಲ್ಲಿ 2 ರೂ. ಹಾಗೂ 2025 ಮಾರ್ಚ್, ಅಂದರೆ ಈಗ 4 ರೂ. ಏರಿಕೆ ಮಾಡಲಾಗಿದೆ. ಹಾಗೆಯೇ ವಿದ್ಯುತ್ ಕೂಡ ದುಬಾರಿ ಆಗಿದೆ. ಜನರಿಗೆ ವಿದ್ಯುತ್ ಶಾಕ್ ನೀಡಿದ್ದಾರೆ. ಈಗ ಎಲ್ಲರಿಗೂ ಪ್ರತೀ ಯೂನಿಟ್ಟಿಗೆ 36 ಪೈಸೆ ಬರೆ. ಮಹಾದೇವಪ್ಪನಿಗೂ ಶಾಕು! ಕಾಕಾ ಪಾಟೀಲಗೂ ಶಾಕು!! ಎಂದು ರಾಜ್ಯ ಸರ್ಕಾರದ ಬಗ್ಗೆ ಕೇಂದ್ರ ಸಚಿವರು ಲೇವಡಿ ಮಾಡಿದ್ದಾರೆ.

ಒಂದು ಕೈಯಲ್ಲಿ ಕೊಟ್ಟು ಹತ್ತು ಕೈಗಳಲ್ಲಿ ಕಿತ್ತುಕೊಳ್ಳುವ ದಶಾವತಾರಿ ರಾವಣರೂಪಿ ಸುಲಿಗೆ ಪ್ರವೃತ್ತಿ ಕನ್ನಡಿಗರ ಪಾಲಿಗೆ ಮರಣಶಾಸನ. ಹಾಲು, ವಿದ್ಯುತ್ ದರ ಏರಿಕೆ ಖಂಡನೀಯ. ನೆಪ ರೈತರದು, ಲಾಭ ಕೆಎಂಎಫ್ ಗೆ! ಮೊಸರು ದರ 4 ರೂ. ಏರಿಕೆ ಮಾಡಿದ್ದೀರಿ. ಈ ಹಣ ಏನು ಮಾಡುತ್ತೀರಿ? ರೈತರಿಗೆ ವರ್ಗಾಯಿಸುತ್ತೀರೋ ಅಥವಾ ಕೆಎಂಎಫ್ ತಾನೇ ಉಳಿಸಿಕೊಳ್ಳಲಿದೆಯೋ? ಸ್ಪಷ್ಟಪಡಿಸಿ ಎಂದು ಸರ್ಕಾರವನ್ನು ಒತ್ತಾಯ ಮಾಡಿದ್ದಾರೆ.

ಇದು ಪ್ರಜಾಪ್ರಭುತ್ವ ಸರಕಾರವಲ್ಲ. ದರ ಏರಿಕೆ, ತೆರಿಗೆ ಹೇರಿಕೆ ಸರಕಾರ! ಇದು ಈಸ್ಟ್ ಇಂಡಿಯಾ ಕಾಂಗ್ರೆಸ್ ಕಂಪನಿ! ಸುಲಿಗೆಯಷ್ಟೇ ನಿತ್ಯಕೃತ್ಯ. ಕರ್ನಾಟಕ ರಾಜ್ಯ ಈಸ್ಟ್ ಇಂಡಿಯಾ ಕಾಂಗ್ರೆಸ್ ಕಂಪನಿ ಕಪಿಮುಷ್ಟಿಯಲ್ಲಿದೆಎಂದು ಅವರು ಕಿಡಿ ಕಾರಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News