ಮುಂದಿನ ವರ್ಷದಿಂದ 10ನೇ ತರಗತಿ ಪರೀಕ್ಷೆಯಲ್ಲಿ ಗ್ರೇಸ್ ಮಾರ್ಕ್ಸ್‌ ರದ್ದುಗೊಳಿಸಲು ಸಿಎಂ ಸೂಚನೆ

Update: 2024-05-17 15:29 GMT

ಬೆಂಗಳೂರು : ಮುಂದಿನ ಶೈಕ್ಷಣಿಕ ವರ್ಷದಿಂದ ಹತ್ತನೆ ತರಗತಿ ಪರೀಕ್ಷೆಯಲ್ಲಿ ಗ್ರೇಸ್ ಮಾರ್ಕ್ಸ್‌ (ಕೃಪಾಂಕ)  ರದ್ದುಗೊಳಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹಾಗೂ ಶಿಕ್ಷಣ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿ ನಡೆದ ವಿವಿಧ ಅಧಿಕಾರಿಗಳ ಸಭೆಯ ಅಧ್ಯಕ್ಷತೆವಹಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಗ್ರೇಸ್ ಮಾಕ್ರ್ಸ್ ಕೊಡುವ ಬಗ್ಗೆ ಮರುಪರಿಶೀಲನೆ ಮಾಡಿ ರದ್ದುಗೊಳಿಸುವಂತೆ ಹೇಳಿದರು.

ಪರೀಕ್ಷೆಯಲ್ಲಿ ಈ ಬಾರಿ ಕಠಿಣ ಕ್ರಮ ಕೈಗೊಳ್ಳಲಾಗಿತ್ತು. ಅದು ಸರಿ ಇದೆ. ಆದರೆ, ಈ ಬಾರಿ ಶೇ.20 ರಷ್ಟು ಕೃಪಾಂಕ ಕೊಟ್ಟಿದ್ದು ಸರಿ ಇತ್ತಾ? ಎಂದು ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಪ್ರಶ್ನಿಸಿದರು. ನಕಲು ಹೊಡೆಯುವುದನ್ನು ತಪ್ಪಿಸಲು ಈ ಬಾರಿ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಹಾಗಂತ ಅವರಿಗೆ ಗ್ರೇಸ್ ಮಾಕ್ರ್ಸ್ ಕೊಟ್ಟಿರುವುದು ಸರಿಯಲ್ಲ. ನಕಲು ಮಾಡುವುದನ್ನು ತಡೆದು ಅದನ್ನು ಗ್ರೇಸ್ ಮಾರ್ಕ್ಸ್‌ ಮೂಲಕ ನೀಡದಂತಾಗಿದೆ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು ಎನ್ನಲಾಗಿದೆ.

ಇದೇ ಸಂದರ್ಭದಲ್ಲಿ ಹತ್ತನೆ ತರಗತಿ ಫಲಿತಾಂಶ ಕುಸಿತ ಏಕೆ ಎಂದು ಸಭೆಯಲ್ಲಿ ಅಧಿಕಾರಿಗಳಿಗೆ ಸಿದ್ದರಾಮಯ್ಯ ಕೇಳಿದರು. ಆನಂತರ, ಉತ್ತಮ ಫಲಿತಾಂಶ ಬರುವ ನಿಟ್ಟಿನಲ್ಲಿ ಕ್ಷೇತ್ರ ಶಿಕ್ಷಣ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಿ ಎಂದು ಸೂಚನೆ ನೀಡಿದರು.

ಇನ್ನೊಂದೆಡೆ, ಶಿಕ್ಷಣ ಇಲಾಖೆಯಿಂದಲೂ ಗ್ರೇಸ್ ಮಾರ್ಕ್ಸ್‌ ಗೆ ಸಾಕಷ್ಟು ವಿರೋಧ ಬರುತ್ತಿದೆ ಎಂದು ಸಭೆಯಲ್ಲಿ ಪ್ರಸ್ತಾಪಿಸಲಾಯಿತು. ಈ ವೇಳೆ ಸಿದ್ದರಾಮಯ್ಯ, ಗ್ರೇಸ್ ಮಾರ್ಕ್ಸ್‌ ಕೊಡುವುದು ಅವೈಜ್ಞಾನಿಕ ಎಂಬ ಬಗ್ಗೆ ಅಭಿಪ್ರಾಯಗಳು ಬರುತ್ತಿವೆ. ಹತ್ತನೆ ತರಗತಿಯಲ್ಲಿ ಗ್ರೇಸ್ ಮಾರ್ಕ್ಸ್‌ ಕೊಡೋದು ಅಗತ್ಯ ಇದೆಯೇ ಎಂದೂ ಖಾರವಾಗಿ ಪ್ರಶ್ನಿಸಿದರು.

ಈ ಸಂದರ್ಭದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು, ಈ ವರ್ಷ ಮಾತ್ರ ಗ್ರೇಸ್ ಮಾರ್ಕ್ಸ್‌ ಕೊಡುವ ತೀರ್ಮಾನ ಮಾಡಲಾಗಿತ್ತು. ಮುಂದಿನ ವರ್ಷದಿಂದ ಗ್ರೇಸ್ ಮಾರ್ಕ್ಸ್‌ ಇರಲ್ಲ. ಪರೀಕ್ಷಾ ನಡವಳಿಕೆ ಸರಿ ಮಾಡಲು ಮುಂದಾಗಿದ್ದೆವು ಎಂದು ನುಡಿದರು.

ಸಭೆಯ ನಂತರ ಸುದ್ದಿಗಾರರೊಂದಿಗೆ ಇದೇ ವಿಚಾರ ಪ್ರಸ್ತಾಪಿಸಿ ಇದು ಈ ವರ್ಷಕ್ಕೆ ಯಾವ ಸಮಸ್ಯೆ ಇಲ್ಲ. ಮುಂದಿನ ವರ್ಷದಿಂದ ಇರಲ್ಲ. ಈ ವರ್ಷ ಕೊಟ್ಟಿರುವ ಗ್ರೇಸ್ ಮಾರ್ಕ್ಸ್‌ ನಲ್ಲಿ ಯಾವುದೂ ಬದಲಾವಣೆ ಇಲ್ಲ. ಮುಂದಿನ ವರ್ಷದಿಂದ ಶೇ.20ರಷ್ಟು ಗ್ರೇಸ್ ಮಾರ್ಕ್ಸ್‌ ಕೊಡುವ ಪದ್ಧತಿ ಇರಲ್ಲ. ಮುಂದೆ ಹಿಂದಿನ ಪದ್ಧತಿಯೇ ಮುಂದುವರೆಯಲಿದೆ ಎಂದು ಸ್ಪಷ್ಟನೆ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News