ನಾಳೆಯಿಂದ ವಿಧಾನಮಂಡಲಅಧಿವೇಶನ ಆರಂಭ | ಆಡಳಿತ-ಪ್ರತಿಪಕ್ಷಗಳ ನಡುವೆ ವಾಕ್ಸಮರಕ್ಕೆ ವೇದಿಕೆ ಸಿದ್ಧ

Update: 2024-07-14 15:51 GMT

ಬೆಂಗಳೂರು : ವಿಧಾನ ಮಂಡಲದ ಮುಂಗಾರು ಅಧಿವೇಶನ ಸೋಮವಾರ (ಜು.15)ದಿಂದ ಆರಂಭಗೊಳ್ಳಲಿದ್ದು, ಮುಡಾ ನಿವೇಶನ ಅಕ್ರಮ ಹಂಚಿಕೆ, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಕೋಟ್ಯಂತರ ರೂ. ಹಗರಣ, ಎಸ್ಸಿಎಸ್ಪಿ-ಟಿಎಸ್ಪಿ ಕಾಯ್ದೆಯಡಿ ಪರಿಶಿಷ್ಟರ ಕಲ್ಯಾಣಕ್ಕೆ ಬಜೆಟ್‍ನಲ್ಲಿ ಒದಗಿಸಲಾಗಿರುವ ಅನುದಾನದಲ್ಲಿ ಸುಮಾರು 14,282ಕೋಟಿ ರೂ.ಗಳನ್ನು ಸರಕಾರ ಗ್ಯಾರಂಟಿಗಳ ಅನುಷ್ಠಾನಕ್ಕೆ ಬಳಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಿರುವ ವಿಚಾರವನ್ನು ಮುಂದಿಟ್ಟುಕೊಂಡು ಪ್ರತಿಪಕ್ಷ ಬಿಜೆಪಿ ಹಾಗೂ ಜೆಡಿಎಸ್ ಸರಕಾರದ ವಿರುದ್ಧ ಮುಗಿಬೀಳಲು ಸಜ್ಜಾಗಿವೆ.

ಇದಲ್ಲದೆ, ನಂದಿನಿ ಹಾಲಿನ ದರ ಏರಿಕೆ, ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ಹೆಚ್ಚಳ, ಮೈಸೂರು ಹಾಗೂ ತುಮಕೂರು ಜಿಲ್ಲೆಯಲ್ಲಿ ಕಲುಷಿತ ನೀರು ಸೇವನೆಯಿಂದ ಆಗಿರುವ ಸಾವು ಸೇರಿದಂತೆ ಇನ್ನಿತರ ವಿಷಯಗಳನ್ನು ಅಸ್ತ್ರವನ್ನಾಗಿ ಸರಕಾರದ ವಿರುದ್ಧ ಪ್ರಯೋಗಿಸಲು ಪ್ರತಿಪಕ್ಷಗಳು ಸಿದ್ಧತೆ ಮಾಡಿಕೊಂಡಿವೆ. ಅದೇ ರೀತಿ, ಪ್ರತಿಪಕ್ಷಗಳನ್ನು ಸಮರ್ಥವಾಗಿ ಎದುರಿಸಲು ಸರಕಾರವು ಮುಡಾದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಅಕ್ರಮವಾಗಿ ನಿವೇಶನಗಳನ್ನು ಪಡೆದಿರುವ ದಾಖಲೆಗಳನ್ನು ಮುಂದಿಟ್ಟುಕೊಂಡು ತಿರುಗೇಟು ನೀಡಲು ಮುಂದಾಗಿದೆ.

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಕೋಟ್ಯಂತರ ರೂ.ಅಕ್ರಮದ ಹಿನ್ನೆಲೆಯಲ್ಲಿ ಈಗಾಗಲೆ ಜಾರಿ ನಿರ್ದೇಶನಾಲಯ(ಈ.ಡಿ) ಮಾಜಿ ಸಚಿವ ಬಿ.ನಾಗೇಂದ್ರ ಅವರನ್ನು ಬಂಧಿಸಿದೆ. ಸಿಬಿಐ, ಎಸ್‍ಐಟಿ ಹಾಗೂ ಈ.ಡಿ. ಪ್ರತ್ಯೇಕ ತನಿಖೆಯನ್ನು ಮಾಡುತ್ತಿವೆ. ಅಲ್ಲದೆ, ನಿಗಮದ ಅಧ್ಯಕ್ಷ ಹಾಗೂ ಶಾಸಕ ಬಸನಗೌಡ ದದ್ದಲ್ ಅವರಿಗೂ ವಿಚಾರಣೆಗೆ ಹಾಜರಾಗುವಂತೆ ಈ.ಡಿ. ನೋಟಿಸ್ ಜಾರಿ ಮಾಡಿದೆ. ಈ ವಿಷಯಗಳು ಉಭಯ ಸದನಗಳಲ್ಲೂ ಕೋಲಾಹಲ ಎಬ್ಬಿಸುವ ಸಾಧ್ಯತೆಗಳು ಹೆಚ್ಚಿವೆ.

ಸದನದಲ್ಲಿ ಇತ್ತೀಚಿಗೆ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಿದ ಕೂಡಲೆ ಮುಡಾದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿಗೆ ಅಕ್ರಮವಾಗಿ ಹೆಚ್ಚುವರಿ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಆರೋಪಿಸಿ ಮುಖ್ಯಮಂತ್ರಿ ಹಾಗೂ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು  ಹೋರಾಟ ನಡೆಸಲಿವೆ.

ಮುಡಾದಿಂದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬಕ್ಕೆ ಅಕ್ರಮವಾಗಿ 48 ನಿವೇಶನಗಳು ಹಂಚಿಕೆಯಾಗಿದ್ದು, ಈ ಸಂಬಂಧ ತನಿಖೆ ಮಾಡುವಂತೆ ಕೋರಿ 2011ರಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಸಭಾಪತಿಗೆ ದಾಖಲೆಗಳನ್ನು ನೀಡಿದ ವಿಚಾರವನ್ನು ಮುಂದಿಟ್ಟುಕೊಂಡು ಪ್ರತಿಪಕ್ಷಗಳ ಹೋರಾಟಕ್ಕೆ ಕಡಿವಾಣ ಹಾಕಲು ಸರಕಾರ ಸಿದ್ಧತೆ ಮಾಡಿಕೊಂಡಿದೆ. ಇದಲ್ಲದೆ, ಕಲುಷಿತ ನೀರು ಸೇವನೆಯಿಂದ ಮೈಸೂರು ಹಾಗೂ ತುಮಕೂರು ಜಿಲ್ಲೆಯಲ್ಲಿ ಆಗಿರುವ ಸಾವುಗಳ ವಿಚಾರವು ಸದನದಲ್ಲಿ ಪ್ರಸ್ತಾವಿಸಲ್ಪಡುವ ಸಾಧ್ಯತೆಯಿದೆ.

ದೇವರಾಜ ಅರಸು ಟ್ರಕ್ ಟರ್ಮಿನಲ್ ನಲ್ಲಿ ನಡೆದಿರುವ ಅಕ್ರಮದ ಹಿನ್ನೆಲೆಯಲ್ಲಿ ಬಿಜೆಪಿಯ ಡಿ.ಎಸ್. ವೀರಯ್ಯ ಬಂಧನವಾಗಿರುವ ವಿಚಾರವನ್ನು ಮುಂದಿಟ್ಟು ಪ್ರತಿಪಕ್ಷಗಳ ಬಾಯಿ ಮುಚ್ಚಿಸಲು ಸರಕಾರ ಮುಂದಾಗಬಹುದು. ಮುಡಾದಿಂದ ಅಕ್ರಮವಾಗಿ ನಿವೇಶನ ಹಂಚಿಕೆಯಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೆ ನಡೆಯುತ್ತಿರುವ ಎಸ್‍ಐಟಿ ತನಿಖೆಯ ವ್ಯಾಪ್ತಿಗೆ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರಕಾರದ ಅವಧಿಯನ್ನು ಸೇರಿಸುವ ಸಾಧ್ಯತೆಗಳಿವೆ.

ಸಂಸತ್ ಸದಸ್ಯರಾಗಿ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ ಹಾಗೂ ಬಸವರಾಜ ಬೊಮ್ಮಾಯಿ ಅನುಪಸ್ಥಿತಿ ಪ್ರತಿಪಕ್ಷಗಳಿಗೆ ಸ್ವಲ್ಪ ಅನಾನುಕೂಲ ಉಂಟು ಮಾಡಬಹುದು. ಆದರೂ, ವಿಪಕ್ಷ ನಾಯಕ ಆರ್.ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಜೆಡಿಎಸ್ ನಾಯಕ ಜಿ.ಟಿ.ದೇವೇಗೌಡ ಸೇರಿದಂತೆ ಇನ್ನಿತರರು ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರಯತ್ನ ಮಾಡಲಿದ್ದಾರೆ.

ಅಧಿವೇಶನಕ್ಕೆ ಪೂರ್ವಭಾವಿಯಾಗಿ ಅಧಿಕಾರಿಗಳೊಂದಿಗೆ ಸಿಎಂ ಸಭೆ :

ನಾಳೆಯಿಂದ ಪ್ರಾರಂಭವಾಗುವ ವಿಧಾನ ಮಂಡಲ ಅಧಿವೇಶನದಲ್ಲಿ ಚರ್ಚೆಯಾಗುವ ವಿಷಯಗಳಿಗೆ ಸಮರ್ಪಕ ಉತ್ತರ ನೀಡಲು ಸಿದ್ಧರಾಗಿರುವಂತೆ ಹಾಗೂ ಅಧಿವೇಶನದಲ್ಲಿ ಖುದ್ದು ಹಾಜರಿದ್ದು, ಸಚಿವರಿಗೆ ತಮ್ಮ ಇಲಾಖೆಗಳ ವಿಷಯಗಳ ಕುರಿತ ಮಾಹಿತಿ ಒದಗಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ, ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಹಾಘೂ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಿದ್ದಾರೆ.

ಗೃಹ ಕಚೇರಿ ಕೃಷ್ಣಾದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಮುಖ್ಯಮಂತ್ರಿ, ಈ ಬಾರಿ ಸಂಪೂರ್ಣ ಬಜೆಟ್‍ಗೆ ಮಾರ್ಚ್ ನಲ್ಲಿಯೇ ಅನುಮೋದನೆ ದೊರೆತಿರುವ ಕಾರಣ, ವಿರೋಧ ಪಕ್ಷದವರು ಈ ಬಾರಿಯ ಸಂಪೂರ್ಣ ಅಧಿವೇಶನವನ್ನು ವಿವಿಧ ಆರೋಪ ಮಾಡುವ ಕುರಿತು ಬಳಸಿಕೊಳ್ಳುವ ಸಾಧ್ಯತೆ ಇದೆ. ಇದಕ್ಕೆ ಸೂಕ್ತ ಉತ್ತರ ನೀಡಲು ಅಧಿಕಾರಿಗಳು ಸಿದ್ಧರಾಗಿರಬೇಕು ಎಂದು ಸೂಚಿಸಿದರು.

ಎಲ್ಲ ಕಾರ್ಯದರ್ಶಿಗಳೂ, ಇಲಾಖಾ ಮುಖ್ಯಸ್ಥರು ಅಧಿವೇಶನದಲ್ಲಿ ಹಾಜರಿರಬೇಕು. ಸಚಿವರಿಗೆ ಸಮರ್ಪಕವಾಗಿ ಮಾಹಿತಿ ನೀಡಬೇಕು. ಆಯಾ ಇಲಾಖಾ ಸಚಿವರು ಚರ್ಚೆಯ ವಿಷಯಗಳಿಗೆ ಉತ್ತರಿಸಬೇಕು. ಅಗತ್ಯವಿದ್ದರೆ ನಾನು ಮಧ್ಯಪ್ರವೇಶಿಸುತ್ತೇನೆ. ನಿಮ್ಮ ಇಲಾಖೆಯ ವಿಷಯ ಇದ್ದಾಗ ಕಾರ್ಯದರ್ಶಿಗಳು ಖುದ್ದು ಹಾಜರಿದ್ದು, ಸಚಿವರಿಗೆ ಸಹಕಾರ ನೀಡಬೇಕು. ಕೇವಲ ಅಧೀನ ಅಧಿಕಾರಿಗಳನ್ನು ಕಳುಹಿಸಿ ಗೈರು ಹಾಜರಾಗುವಂತಿಲ್ಲ ಎಂದು ಮುಖ್ಯಮಂತ್ರಿ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಮೈಸೂರಿನ ಕೆಸರೇ ಗ್ರಾಮದ 3.16 ಎಕರೆ ಜಮೀನಿಗೆ ಬದಲಾಗಿ CM Siddaramaiah ತಮ್ಮ ಪತ್ನಿ ಹೆಸರಿನಲ್ಲಿ ಅಕ್ರಮವಾಗಿ 14 ನಿವೇಶನ ಮಂಜೂರು ಮಾಡಿಸಿಕೊಂಡಿದ್ದಾರೆ. ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಈ ಹಗರಣದಲ್ಲಿ ಶಾಮೀಲಾಗಿರುವವರನ್ನು ರಕ್ಷಿಸಲು ಏಕಾಏಕಿ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದಾರೆ. 5ಸಾವಿರ ಕೋಟಿ ರೂ.ಗೂ ಹೆಚ್ಚು ಮೌಲ್ಯದ ನಿವೇಶನಗಳನ್ನು ಅಕ್ರಮವಾಗಿ ಹಂಚಿಕೆ ಮಾಡಿದ್ದಾರೆ. ಮುಡಾ ಅವ್ಯವಹಾರಕ್ಕೆ ಸಂಬಂಧಿಸಿ ಜಿಲ್ಲಾಧಿಕಾರಿ ವರದಿ ನೀಡಿದ ಬಳಿಕವೂ ಸುಮಾರು 42 ನಿವೇಶನಗಳನ್ನು ಒಬ್ಬರಿಗೆ ಬದಲಿಯಾಗಿ ಕೊಟ್ಟಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆಗೆ ಆದೇಶಿಸಬೇಕು. ಜೊತೆಗೆ, ಮುಖ್ಯಮಂತ್ರಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಸದನದಲ್ಲಿ ಹೋರಾಟ ಮಾಡುತ್ತೇವೆ.

ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ

‘ಮುಡಾದಿಂದ ಮುಖ್ಯಮಂತ್ರಿಯ ಪತ್ನಿ ಪರಿಹಾರ ಪಡೆದಿರುವ ಜಮೀನು ಮುಡಾಗೆ ಸೇರಿದ ಸ್ವತ್ತು. ಡಿನೋಟಿಫಿಕೇಷನ್ ಬಳಿಕ ನಾಲ್ಕು ವರ್ಷ ಏನೂ ಬೆಳವಣಿಗೆಯೇ ಆಗಿಲ್ಲ. ಸತ್ತವರ ಹೆಸರಿನಲ್ಲಿ ಜಮೀನು ಡಿ ನೋಟಿಫಿಕೇಷನ್ ಆಗಿದೆ. ಮುಡಾದಿಂದ ತಮಗೆ 62ಕೋಟಿ ರೂ. ಪರಿಹಾರ ಬರಬೇಕೆಂದು ಸಿದ್ದರಾಮಯ್ಯ ಹೇಳುತ್ತಾರೆ. ಯಾರಪ್ಪನ ಆಸ್ತಿ ಎಂದು 62ಕೋಟಿ ರೂ. ಕೊಡಬೇಕು. ಇದು ಪಿತಾರ್ಜಿತ ಆಸ್ತಿನಾ? ಯಾರ ಬಳಿ ಖರೀದಿ ಮಾಡಿದ್ದಾರೆ ಎಲ್ಲವೂ ಗೊತ್ತಿದೆ, ನನ್ನ ಬಳಿ ಎಲ್ಲ ದಾಖಲೆ ಇದೆ. ಇದು ಹಿಟ್ ಅಂಡ್ ರನ್ ಅಲ್ಲ. ದಾಖಲೆ ಸಮೇತ ಮಾಹಿತಿ ಕೊಡುತ್ತಿದ್ದೇನೆ’

ಎಚ್.ಡಿ.ಕುಮಾರಸ್ವಾಮಿ, ಕೇಂದ್ರ ಸಚಿವ

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - -ಅಮ್ಜದ್ ಖಾನ್ ಎಂ.

contributor

Similar News