ಸಿಎಂ ಸಿದ್ದರಾಮಯ್ಯರ ವಿರುದ್ಧ ರಾಜ್ಯಪಾಲರಿಗೆ ಮತ್ತೊಂದು ದೂರು?

Update: 2024-08-06 13:29 GMT
ಸಿದ್ದರಾಮಯ್ಯ (PC : PTI)

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಪ್ರಭಾವ ಬಳಸಿ ಜಮೀನು ಡಿ-ನೋಟಿಫೈ ಮಾಡಿದ್ದಾರೆಂದು ಆರೋಪಿಸಿ ಮೈಸೂರು ಮೂಲದ ಸ್ನೇಹಮಯಿ ಕೃಷ್ಣ ಎಂಬುವರು ರಾಜ್ಯಪಾಲ ಥಾವರ್‌ ಚಂದ್ ಗೆಹ್ಲೋಟ್ ಅವರಿಗೆ ದೂರು ನೀಡಿದ್ದಾರೆ ಎಂದು ಗೊತ್ತಾಗಿದೆ.

ಮಂಗಳವಾರ ರಾಜಭವನದಲ್ಲಿ ರಾಜ್ಯಪಾಲರನ್ನು ಭೇಟಿ ಮಾಡಿದ ಸ್ನೇಹಮಯಿ ಕೃಷ್ಣ ಎಂಬವರು, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಕರಣ ದಾಖಲಿಸಲು ಅನುಮತಿ ನೀಡಬೇಕೆಂದು ಕೋರಿದ್ದಾರೆ ಎಂದು ಹೇಳಲಾಗಿದೆ.

ಮೈಸೂರು ತಾಲೂಕು ವರುಣ ಹೋಬಳಿಯ ಉತ್ತನಹಳ್ಳಿ ಗ್ರಾಮದಲ್ಲಿನ 1.39 ಎಕರೆ ಜಮೀನನ್ನು ಆಶ್ರಯ ಯೋಜನೆಯಡಿ ನಿವೇಶನ ಇಲ್ಲದವರಿಗೆ ನೀಡಲು ಜಿಲ್ಲಾಡಳಿತ 1972ರಲ್ಲಿ ಭೂ ಸ್ವಾಧೀನಪಡಿಸಿಕೊಂಡಿತ್ತು. ಬಳಿಕ ಜಮೀನಿನ ಹಕ್ಕುಪತ್ರಗಳನ್ನು ಫಲಾನುಭವಿಗಳಿಗೆ ಹಂಚಲಾಗಿತ್ತು. ಆದರೆ, ಸದರಿ ಜಮೀನಿನಲ್ಲಿ ಮೂಲಸೌಕರ್ಯ ಇಲ್ಲದ ಕಾರಣ ಫಲಾನುಭವಿಗಳು ಮನೆ ನಿರ್ಮಾಣ ಮಾಡಿರಲಿಲ್ಲ.

ಆ ಜಮೀನು ಖಾಲಿ ಇತ್ತು. 30 ವರ್ಷಗಳ  ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಂದಿನ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು, ಈ 1.39ಎಕರೆ ಜಮೀನನ್ನು ಮಾರಪ್ಪ ಎಂಬ ಹೆಸರಿನ ವ್ಯಕ್ತಿಗೆ ಡಿ-ನೋಟಿಫೈ ಮಾಡುವಂತೆ ಕೋರುತ್ತಾರೆ. ಆದರೆ, ಮಾರಪ್ಪ ಮತ್ತು ಈ ಜಮೀನಿಗೆ ಯಾವುದೇ ಸಂಬಂಧವಿರುದಿಲ್ಲ. ಮಾರಪ್ಪನ ತಂದೆ ಹೆಸರಿನಲ್ಲಿ ಬೇರೆ ಜಾಗದಲ್ಲಿ ಜಮೀನು ಇದೆ ಎಂದು ತಿಳಿಸಲಾಗಿದೆ.

ಸಿದ್ದರಾಮಯ್ಯ ಪತ್ರ ಆಧರಿಸಿ ಜಿಲ್ಲಾಡಳಿತ 14 ತಿಂಗಳ ಬಳಿಕ ನಕಲಿ ದಾಖಲೆಗಳನ್ನು ಸೃಷ್ಟಿಸಿ ಮಾರಪ್ಪ ಎಂಬುವರ ಹೆಸರಿಗೆ 1.39 ಎಕರೆ ಜಮೀನನ್ನು ಡಿ-ನೋಟಿಫೈ ಮಾಡಿದ್ದಾರೆಂಬ ಆರೋಪ ಕೇಳಿಬಂದಿದೆ. ಮೂಲ ಜಮೀನಿನ ಮಾಲಕರು ಮಾರಪ್ಪ ಅಲ್ಲ, ಆದರೂ ಅವರ ಹೆಸರಿಗೆ ಡಿ-ನೋಟಿಫೈ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News