ಮನೆ ಹಾನಿಗೆ 10.54ಕೋಟಿ ರೂ.ಪರಿಹಾರ : ಅರಸು ವಸತಿ ಯೋಜನೆಯಡಿ ಮಂಜೂರು : ಸಿಎಂ ಸಿದ್ದರಾಮಯ್ಯ

Update: 2024-08-16 15:59 GMT

PC : x/@CMofKarnataka

ಬೆಂಗಳೂರು : ರಾಜ್ಯದಲ್ಲಿ ಮಳೆಯಿಂದಾಗಿ 1,283 ಮನೆಗಳು ಶೇ.75ಕ್ಕಿಂತ ಹೆಚ್ಚು ಹಾನಿಗೊಳಗಾಗಿದ್ದು, 879 ಪ್ರಕರಣಗಳಲ್ಲಿ 10.54 ಕೋಟಿ ರೂ. ಪರಿಹಾರ ವಿತರಿಸಲಾಗಿದೆ. ಇದರೊಂದಿಗೆ ದೇವರಾಜ ಅರಸು ವಸತಿ ಯೋಜನೆಯಡಿ ಮನೆ ಮಂಜೂರು ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.

ಶುಕ್ರವಾರ ನಗರದ ತಮ್ಮ ಗೃಹಕಚೇರಿ ಕೃಷ್ಣದಲ್ಲಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಮನೆ ಹಾನಿಗೊಳಗಾದ 879 ಪ್ರಕರಣಗಳಲ್ಲಿ ತಲಾ 1.20 ಲಕ್ಷ ರೂ.ನಂತೆ 10.54 ಕೋಟಿ ರೂ. ಪರಿಹಾರ ನೀಡಲಾಗಿದೆ. ಅಲ್ಲದೆ, ಈಗಾಗಲೇ ದೇವರಾಜ ಅರಸು ವಸತಿ ಯೋಜನೆಯಡಿ 500 ಮನೆ ಮಂಜೂರು ಮಾಡಲಾಗಿದೆ ಎಂದರು.

2817 ಕುಟುಂಬಗಳಿಗೆ ಬಟ್ಟೆ ಬರೆ ಹಾನಿಗಾಗಿ 2500 ರೂ.ನಂತೆ ಹಾಗೂ 2811 ಕುಟುಂಬಗಳಿಗೆ ಗೃಹೋಪಯೋಗಿ ಸಾಮಗ್ರಿಗಳ ಹಾನಿಗೆ ತಲಾ 2500 ರೂ.ನಂತೆ ಒಟ್ಟು 1.40 ಕೋಟಿ ರೂ. ಪರಿಹಾರ ವಿತರಿಸಲಾಗಿದೆ ಎಂದು ಅವರು ತಿಳಿಸಿದರು.

ರಾಜ್ಯದಲ್ಲಿ ಮನೆ ಕುಸಿದು 29 ಸಾವು ಸಂಭವಿಸಿದ್ದು, ನಗರ ಮತ್ತು ಗ್ರಾಮ ಪ್ರದೇಶಗಳಲ್ಲಿ ಶಿಥಿಲಗೊಂಡ ಮನೆಗಳಲ್ಲಿರುವವರನ್ನು ಖಾಲಿ ಮಾಡಿ ಅವರಿಗೆ ಪುನರ್ವಸತಿ ಕಲ್ಪಿಸಬೇಕು. ಪ್ರವಾಹ ಇರುವಾಗ ನೀರಿಗೆ ಇಳಿಯಲು ಬಿಡಬಾರದು, ಈ ನಿಟ್ಟಿನಲ್ಲಿ ಗ್ರಾಮ ಪಂಚಾಯತ್, ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಸಹಕಾರದಿಂದ ಮುಂಜಾಗರೂಕತೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಿದ್ದರಾಮಯ್ಯ ಹೇಳಿದರು.

ಬೆಂಗಳೂರು ನಗರದಲ್ಲಿ ಕಂಟ್ರೋಲ್ ರೂಂಗಳನ್ನು ಗುರುತಿಸಲಾಗಿದೆ. ದೊಡ್ಡ ಚರಂಡಿಗಳು ಓಪನ್ ಇರುವ ಸ್ಥಳಗಳನ್ನು ಗುರುತಿಸಿ ಮೊದಲೇ ಬಂದೋಬಸ್ತ್ ಮಾಡಲಾಗಿದೆ. ಇದರಿಂದ ಇದುವರೆಗೆ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.

ರಾಜಕಾಲುವೆಗಳ ಒತ್ತುವರಿ ತೆರವು ಮಾಡಬೇಕು. ಕೋಡಿಗೆ ಗೇಟ್ ಅಳವಡಿಸುವ ಮೂಲಕ, ಮಳೆಗಾಲದಲ್ಲಿ ಕೆರೆಗಳಲ್ಲಿ ನೀರಿನ ಪ್ರಮಾಣ ನಿಯಂತ್ರಿಸಿ ಪ್ರವಾಹ ತಡೆಗಟ್ಟಲು ಕ್ರಮ ಕೈಗೊಳ್ಳಬೇಕೆಂದು ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಬೆಂಗಳೂರಿನಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತರು ಪ್ರತಿದಿನ ನಗರದ ಪರಿಸ್ಥಿತಿ ಕುರಿತು ಸಭೆ ನಡೆಸಿ ಪರಿಶೀಲಿಸಬೇಕು. ಎಂಜಿನಿಯರುಗಳು ವಲಯ ಆಯುಕ್ತರ ಸಭೆ ನಡೆಸಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಕರ್ತವ್ಯಲೋಪ ಎಸಗಿದರೆ ಮುಲಾಜಿಲ್ಲದೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಿದ್ದರಾಮಯ್ಯ ಎಚ್ಚರಿಸಿದರು.

ಬೆಂಗಳೂರು ಅಭಿವೃದ್ಧಿಗೆ ಸಂಬಂಧಿಸಿದ ಸಂಸ್ಥೆಗಳಾದ ಬಿಡಿಎ, ಬಿಡಬ್ಲ್ಯುಎಸ್‍ಎಸ್‍ಬಿ, ಬಿಎಂಆರ್‍ಸಿಎಲ್, ಬಿಬಿಎಂಪಿ ಮೊದಲಾದವುಗಳ ನಡುವೆ ಸಮನ್ವಯ ವಹಿಸುವಂತೆ ಸಿದ್ದರಾಮಯ್ಯ ಸೂಚಿಸಿದರು.

ಪ್ರವಾಹ ಸಂದರ್ಭದಲ್ಲಿ ಉದ್ಭವವಾಗಬಹುದಾದ ಸಾಂಕ್ರಾಮಿಕ ಕಾಯಿಲೆಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸಿದ್ದರಾಮಯ್ಯ ಸೂಚಿಸಿದರು.

ಪ್ರವಾಹ, ಭಾರಿ ಮಳೆ ಸಂದರ್ಭದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡರೆ, ಕೂಡಲೇ ಸರಿಪಡಿಸಲು ಸಿದ್ಧತೆ ಮಾಡಿಕೊಳ್ಳಬೇಕು. ಅಗತ್ಯವಿರುವ ಟ್ರಾನ್ಸ್‌ ಫಾರ್ಮರ್‌ಗಳು, ಕಂಬಗಳನ್ನು ಲಭ್ಯಗೊಳಿಸಬೇಕು ಎಂದು ಸಿದ್ದರಾಮಯ್ಯ ತಿಳಿಸಿದರು.

ಸಭೆಯಲ್ಲಿ ಸಚಿವರಾದ ಕೃಷ್ಣ ಬೈರೇಗೌಡ, ದಿನೇಶ್ ಗುಂಡೂರಾವ್, ಸಿಎಂ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತೆ ಡಾ.ಉಮಾ ಮಹಾದೇವನ್ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News