ಸರಕಾರಿ ನೌಕರರ ಬೇಡಿಕೆಯಂತೆ ಓಪಿಎಸ್, ಆರೋಗ್ಯ ಸಂಜೀವಿನಿ ಜಾರಿಗೆ ನಿರ್ಧಾರ : ಸಿಎಂ ಸಿದ್ದರಾಮಯ್ಯ

Update: 2024-08-17 13:47 GMT

ಬೆಂಗಳೂರು: ರಾಜ್ಯ ಸರಕಾರಿ ನೌಕರರ ಬೇಡಿಕೆಯಂತೆ ಹಳೆಯ ಪಿಂಚಣಿ ಯೋಜನೆ(ಓಪಿಎಸ್) ಮತ್ತು ಆರೋಗ್ಯ ಸಂಜೀವಿನಿ ಕಾರ್ಯಕ್ರಮದ ಬಗ್ಗೆಯೂ ಸರಕಾರ ಸೂಕ್ತವಾದ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

ಶನಿವಾರ ಇಲ್ಲಿನ ಅರಮನೆ ಮೈದಾನದಲ್ಲಿ ರಾಜ್ಯ ಸರಕಾರಿ ನೌಕರರ ಸಂಘ ಆಯೋಜಿಸಿದ್ದ ‘ನಮ್ಮಾಭಿಮಾನದ ಅಭಿನಂದನೆ’ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಇದು ನಿಮ್ಮೆಲ್ಲರ ಸರಕಾರ. ನಾನು ನಿಮ್ಮ ಜೊತೆ ಇರುತ್ತೇನೆ. ನಾವು-ನೀವು ಒಟ್ಟಾಗಿ ಜನರ ಜೊತೆ ಇದ್ದು, ಜನರ ಋಣ ತೀರಿಸೋಣ ಎಂದರು.

ನಾನು ಮುಖ್ಯಮಂತ್ರಿಯಾಗಿ ಎರಡು ವೇತನ ಆಯೋಗದ ಶಿಫಾರಸ್ಸುಗಳನ್ನು ಜಾರಿ ಮಾಡಿದ್ದೇನೆ. ಸರಕಾರಿ ನೌಕರರ ಹಿತ ಕಾಯಲು ನಾನು ಮತ್ತು ನಮ್ಮ ಸಚಿವ ಸಂಪುಟ ಸದಾ ಸಿದ್ಧವಿದೆ. ಸರಕಾರ ಅಂದರೆ ಎಲ್ಲ ಸರಕಾರಿ ನೌಕರರೂ ಇರುತ್ತಾರೆ. ನೀವೆಲ್ಲಾ ಒಟ್ಟು ಸೇರಿದರೆನೇ ಸರಕಾರ ಎಂದು ಅವರು ತಿಳಿಸಿದರು.

ಅಂಬೇಡ್ಕರ್, ಗಾಂಧಿ, ಬಸವಾದಿ ಶರಣರು ಸಮ ಸಮಾಜದ ಕನಸು ಕಂಡಿದ್ದರು. ಇವರೆಲ್ಲರ ಕನಸನ್ನು ನನಸು ಮಾಡುವ ಜವಾಬ್ದಾರಿ ನಿಮ್ಮೆಲ್ಲರ ಮೇಲೂ ಇದೆ. ಇದಕ್ಕಾಗಿ ಶ್ರಮಿಸೋಣ ಎಂದು ಅವರು ಕರೆ ನೀಡಿದರು.

ಸಮ ಸಮಾಜದ ಆಶಯದಿಂದ ಸರಕಾರ ಜಾರಿ ಮಾಡುವ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ನಿಮ್ಮಗಳ ಮೇಲಿದೆ. ಶೋಷಿತ ಸಮುದಾಯಗಳ ಮನೆ ಬಾಗಿಲಿಗೆ ಸರಕಾರದ ಕಾರ್ಯಕ್ರಮಗಳನ್ನು ತಲುಪಿಸಿದಾಗ ಮಾತ್ರ ನಮ್ಮ-ನಿಮ್ಮ ಶ್ರಮ ಸಾರ್ಥಕವಾಗುತ್ತದೆ. ಹೀಗೆ ನಾವು ನೀವು ಸೇರಿ ಸ್ವಾಸ್ಥ್ಯ ಸಮಾಜ ರೂಪಿಸಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ನಸೀರ್ ಅಹಮದ್, ಶಾಸಕರಾದ ಪ್ರಕಾಶ್ ರಾಥೋಡ್ ಸೇರಿದಂತೆ ಮತ್ತಿತರರು ಇದ್ದರು. ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News