ಗಾಂಧಿ ತತ್ವ-ವಿಚಾರದಲ್ಲಿ ರಾಜಿ ಆಗುವ ಪ್ರಶ್ನೆಯೇ ಇಲ್ಲ : ಸಿಎಂ ಸಿದ್ದರಾಮಯ್ಯ

Update: 2024-08-31 15:07 GMT

ಬೆಂಗಳೂರು : ಇಡೀ ವಿಶ್ವಕ್ಕೆ ಮಹಾತ್ಮ ಗಾಂಧಿಯ ಪ್ರಸ್ತುತತೆ ಹೆಚ್ಚುತ್ತಿದೆ. ಗಾಂಧಿ ತತ್ವ-ಗಾಂಧಿ ವಿಚಾರಧಾರೆ ವಿಚಾರದಲ್ಲಿ ನಾವು ರಾಜಿ ಆಗುವ ಪ್ರಶ್ನೆಯೆ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.

ಬೆಳಗಾವಿಯಲ್ಲಿ ಮಹಾತ್ಮಗಾಂಧಿ ಅವರ ಅಧ್ಯಕ್ಷತೆಯಲ್ಲಿ 1924ರಲ್ಲಿ ನಡೆದ ಎಐಸಿಸಿ ಅಧಿವೇಶನದ ಶತಮಾನೋತ್ಸವ ಆಚರಣೆ ಸಂಬಂಧ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಈ ತಲೆಮಾರಿನ ಯುವ ಸಮೂಹಕ್ಕೆ ಮಹಾತ್ಮ ಗಾಂಧಿಯವರ ವಿಚಾರಗಳನ್ನು ಹೆಚ್ಚೆಚ್ಚು ತಲುಪಿಸಬೇಕು. ಪ್ರತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲೂ ಗಾಂಧಿಯ ವಿಚಾರಗಳು ಹೆಚ್ಚೆಚ್ಚು ಬೇರು ಬಿಡಬೇಕು. ಇದಕ್ಕೆ ತಕ್ಕಂತೆ ಇಡೀ ವರ್ಷ ಕಾರ್ಯಕ್ರಮಗಳನ್ನು ರೂಪಿಸುವುದು ಒಳ್ಳೆಯದು ಎಂದು ಮುಖ್ಯಮಂತ್ರಿ ಸಲಹೆ ನೀಡಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಮಹಾತ್ಮ ಗಾಂಧಿಯವರು ಕಾಂಗ್ರೆಸ್‍ನ ನಾಯಕತ್ವ ವಹಿಸಿಕೊಂಡು 100 ವರ್ಷ ಆಗುತ್ತಿದೆ. ಇದನ್ನು ಸರಕಾರ ಹಾಗೂ ಕಾಂಗ್ರೆಸ್ ಪಕ್ಷ ಯಾವ ರೀತಿ ಆಚರಣೆ ಮಾಡಬೇಕು ಎಂಬುದರ ಕುರಿತು ಸಭೆಯಲ್ಲಿ ಚರ್ಚೆ ಮಾಡಿದ್ದೇವೆ ಎಂದರು.

ಜಿಲ್ಲೆ ಹಾಗೂ ತಾಲೂಕುಗಳಲ್ಲಿ ಎಲ್ಲಿ ಕಾಂಗ್ರೆಸ್ ಕಚೇರಿಗಳು ಇಲ್ಲವೋ ಅಲ್ಲಿ ಕಚೇರಿಗಳನ್ನು ನಿರ್ಮಿಸಲು ನಿರ್ಧರಿಸಿದ್ದೇವೆ. ಬೆಂಗಳೂರು ನಗರದಲ್ಲಿಯೂ ಕಾಂಗ್ರೆಸ್ ಭವನ ಶಿಥಿಲಗೊಂಡಿದೆ. ಅದನ್ನು ನೆಲಸಮ ಮಾಡಿ ಹೊಸ ಕಟ್ಟಡ ಕಟ್ಟಲು ಯೋಜನೆ ಸಿದ್ಧವಾಗಿದೆ. ಚರ್ಚ್ ಸ್ಟ್ರೀಟ್‍ನಲ್ಲಿಯೂ ಕಾಂಗ್ರೆಸ್ ಕಚೇರಿಯ ಹೊಸ ಕಟ್ಟಡ ಕಟ್ಟಲಾಗುವುದು ಎಂದು ಶಿವಕುಮಾರ್ ತಿಳಿಸಿದರು.

ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಸಚಿವರಾದ ಎಚ್.ಕೆ.ಪಾಟೀಲ್, ಕೆ.ಎಚ್.ಮುನಿಯಪ್ಪ, ಹಿರಿಯ ನಾಯಕ ಡಾ.ಬಿ.ಎಲ್.ಶಂಕರ್ ಸೇರಿ ಹಲವು ಪ್ರಮುಖರು ಮತ್ತು ಶತಮಾನೋತ್ಸವ ಆಚರಣೆ ಸಮಿತಿಯ ಮುಖಂಡರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News