ರಾಜ್ಯಪಾಲರು ರಾಜ್ಯದ ಆಡಳಿತದಲ್ಲಿ ಹಸ್ತಕ್ಷೇಪ ಮಾಡುವುದು ಸರಿಯಲ್ಲ : ಸಿಎಂ ಸಿದ್ದರಾಮಯ್ಯ

Update: 2024-09-27 09:37 GMT

ಮೈಸೂರು : "ಸಂವಿಧಾನದಿಂದ ಆಯ್ಕೆಯಾದ ರಾಜ್ಯಪಾಲರು ರಾಜ್ಯದ ಆಡಳಿತದಲ್ಲಿ ಹಸ್ತಕ್ಷೇಪ ಮಾಡುವುದು ಸರಿಯಲ್ಲ. ದೇಶದಲ್ಲಿ ಎಲ್ಲೆಲ್ಲಿ ವಿರೋಧಪಕ್ಷಗಳ ಸರಕಾರವಿದೆಯೋ, ಅಲ್ಲಿ ಕೇಂದ್ರ ಸರಕಾರ ಈಡಿ, ಸಿಬಿಐ ಹಾಗೂ ರಾಜಭವನದ ಕಚೇರಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

 ಶುಕ್ರವಾರ ಮೈಸೂರು ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ರಾಷ್ಟ್ರಪತಿಗಳಾಗಲಿ ಅಥವಾ ರಾಜ್ಯಪಾಲರಾಗಲಿ ಸಂವಿಧಾನದ ಪ್ರಕಾರ ಕೆಲಸ ಮಾಡಲು ನಾಮಾಂಕಿತರಾಗಿದ್ದು, ಯಾವುದು ಚುನಾವಣೆಯ ಮೂಲಕ ಆಯ್ಕೆಯಾದವರಲ್ಲ. ಅವರು ಸಂವಿಧಾನದಲ್ಲಿ ಪ್ರಮುಖರು. ಆದರೆ ಜನಪ್ರತಿನಿಧಿಗಳು ಚುನಾವಣೆಯ ಮೂಲಕ ಆಯ್ಕೆಯಾಗಿ ಆಡಳಿತದಲ್ಲಿ ಪ್ರಮುಖರು. ಇಂತಹ ಪ್ರಮುಖ ವ್ಯತ್ಯಾಸವಿರುವಾಗ ಯಾವುದೇ ರಾಜ್ಯದ ರಾಜ್ಯಪಾಲರು ರಾಜ್ಯದ ಆಡಳಿತದಲ್ಲಿ ಹಸ್ತಕ್ಷೇಪ ಮಾಡುವುದು ಸರಿಯಲ್ಲ . ಈ ವಿಷಯದ ಕುರಿತು ರಾಷ್ಟ್ರಾದ್ಯಂತ ಚರ್ಚೆಯಾಗಬೇಕು" ಎಂದರು.

ರಾಜಕೀಯ ಪ್ರೇರಿತ ಕೇಸ್ ಹಾಕಿರುವುದು ಇದೇ ಮೊದಲು :

ʼಮುಡಾ ಪ್ರಕರಣದಲ್ಲಿ ಕಾನೂನು ಪ್ರಕಾರ ಹೋರಾಟ ಮಾಡಲಾಗುವುದು. ನನ್ನ ಮೇಲಿನ ಜನಬೆಂಬಲದಿಂದ ಬೆದರಿರುವ ಪ್ರತಿಪಕ್ಷಗಳು, ನನ್ನ ಮೇಲೆ ರಾಜಕೀಯ ಪ್ರೇರಿತ ಕೇಸ್ ಹಾಕಿರುವುದು ಇದೇ ಮೊದಲ ಬಾರಿʼ ಎಂದರು.

ಪ್ರತಿಪಕ್ಷಗಳಿಂದ ಸರಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ :

ಬಿಜೆಪಿಯವರು ಮುಖ್ಯಮಂತ್ರಿಗಳು ರಾಜಿನಾಮೆ ನೀಡಬೇಕೆಂದು ಪ್ರತಿಭಟನೆ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ, ತಪ್ಪು ಮಾಡಿಲ್ಲವಾದ್ದರಿಂದ ರಾಜಿನಾಮೆ ನೀಡುವ ಅಗತ್ಯವಿಲ್ಲ. ಜಾಮೀನಿನ ಮೇಲಿರುವ ಕುಮಾರಸ್ವಾಮಿಯವರು ರಾಜಿನಾಮೆ ನೀಡಿದ್ದಾರೆಯೇ? ಎಂದು ಮರುಪ್ರಶ್ನಿಸಿ , ಸರಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನವನ್ನು ಪ್ರತಿಪಕ್ಷಗಳು ಮಾಡುತ್ತಿವೆ ಎಂದರು.

ಗ್ಯಾರಂಟಿ ಯೋಜನೆಗಳು ನಿಲ್ಲುವುದಿಲ್ಲ :

ಅನಿಶ್ಚಿತ ರಾಜಕೀಯ ಬೆಳವಣಿಗೆಯಿಂದ ಗ್ಯಾರಂಟಿಗಳು ನಿಲ್ಲಬಹುದೆಂಬ ಆತಂಕ ಜನರಲ್ಲಿ ಮನೆಮಾಡಿರುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ಯಾವುದೇ ಕಾರಣಕ್ಕೂ ಬಡವರ ಕಾರ್ಯಕ್ರಮಗಳನ್ನು ನಿಲ್ಲಿಸುವುದಿಲ್ಲ. ಇಂದಿನ ಕಾರ್ಯಕ್ರಮಕ್ಕೆ ಜನರು ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿ ಮುಖ್ಯಮಂತ್ರಿಗಳ ಪರ ತಮ್ಮ ಬೆಂಬಲವನ್ನು ಸೂಚಿಸಿದ್ದಾರೆ. 136 ಸ್ಥಾನಗಳನ್ನು ಕಾಂಗ್ರೆಸ್ ಗೆದ್ದಿದೆ. ಬಿಜೆಪಿಯವರು ಜನಾದೇಶ ಎಂದಿಗೂ ಪಡೆಯದೆ, ಕೇವಲ ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಜನರು ತಿರಸ್ಕರಿಸಿದ್ದಾರೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News