14 ನಿವೇಶನಗಳನ್ನು ವಾಪಸ್ ಮಾಡಿರುವುದು ನನ್ನ ಪತ್ನಿಯ ಸ್ವತಂತ್ರ ನಿರ್ಧಾರ : ಸಿಎಂ ಸಿದ್ದರಾಮಯ್ಯ

Update: 2024-10-01 12:22 GMT

Sreengrab:x/@siddaramaiah

ಬೆಂಗಳೂರು: ‘ನಾನು ಅತ್ಮಸಾಕ್ಷಿಯಾಗಿ ಕೆಲಸ ಮಾಡುತ್ತೇನೆ. ಆದರೆ, ರಾಜಿನಾಮೆ ನೀಡುವ ಅಗತ್ಯವಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದಿಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಮಂಗಳವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ನನ್ನ ಪತ್ನಿ ನಿವೇಶನ ವಾಪಸ್ ಮಾಡುವ ಕುರಿತು ಸ್ವತಂತ್ರವಾಗಿ ತೀರ್ಮಾನ ತೆಗೆದುಕೊಂಡಿದ್ದಾರೆ. ಪತ್ರ ಬರೆದಿರುವ ಕುರಿತು ನನಗೆ ಯಾವುದೇ ರೀತಿಯ ಮಾಹಿತಿಯಿಲ್ಲ. ಅವರ ಸಹೋದರ ಮಲ್ಲಿಕಾರ್ಜುನ ಸ್ವಾಮಿ ಜಮೀನಿನ ಮಾಲಕರಾಗಿದ್ದರು. ಉಡುಗೊರೆ ರೂಪದಲ್ಲಿ ನನ್ನ ಪತ್ನಿಗೆ 3 ಎಕರೆ 16 ಗುಂಟೆ ಜಮೀನು ನೀಡಿದ್ದರು ಎಂದು ಸ್ಮರಿಸಿದರು.

ಆ ಜಮೀನನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದವರು ಒತ್ತುವರಿ ಮಾಡಿಕೊಂಡು ನಿವೇಶನಗಳನ್ನು ರಚಿಸಿ ಮಾರಿಕೊಂಡಿದ್ದರು. ಅದಕ್ಕೆ ಬದಲಿ ನಿವೇಶನ ಕೋರಿದ್ದು, ವಿಜಯನಗರದ 3 ಮತ್ತು 4ನೆ ಹಂತದಲ್ಲಿ ನಿವೇಶನ ಮಂಜೂರು ಮಾಡಿತ್ತು. ನನ್ನ ಪತ್ನಿಯವರು ವಿಜಯನಗರದಲ್ಲೇ ನೀಡುವಂತೆ ಕೇಳಿರಲಿಲ್ಲ. ಈಗ ಅದು ದೊಡ್ಡ ವಿವಾದವಾಗಿದೆ ಎಂದರು.

ಇದರಿಂದ ನನ್ನ ಪತಿಯ ತೇಜೋವಧೆಯಾಗುತ್ತಿರುವುದು ಹಾಗೂ ರಾಜಕೀಯ ದ್ವೇಷ ಹಾಗೂ ಸೇಡನ್ನು ತೀರಿಸಿಕೊಳ್ಳತ್ತಿರುವ ಕೆಲಸವನ್ನು ವಿಪಕ್ಷಗಳು ಮಾಡುತ್ತಿರುವುದರಿಂದ ಮನನೊಂದು ನಿವೇಶನಗಳನ್ನು ಮರಳಿ ನೀಡಲು ತೀರ್ಮಾನಿಸಿದ್ದಾರೆ. ನಿನ್ನೆ ಈಡಿಯವರು ಇಸಿಐಆರ್ ಫೈಲ್ ಮಾಡಿದ್ದಾರೆ. ಕಾನೂನು ರೀತಿ ಯಾವೆಲ್ಲಾ ಕ್ರಮವಿದೆ ತೆಗೆದುಕೊಳ್ಳಲಿ ಎಂದು ನುಡಿದರು.

ಜಮೀನಿನ ಬದಲಿಗೆ ನಿವೇಶನಗಳನ್ನು ಹಂಚಿಕೆ ಮಾಡಿರುವುದು ನನ್ನ ಪ್ರಕಾರ ಹಣಕಾಸು ವಹಿವಾಟು ಆಗುವುದಿಲ್ಲ, ಈ ಪ್ರಕರಣದಲ್ಲಿ ನನ್ನ ಪಾತ್ರವೇನು? ವಿಪಕ್ಷದವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ರಾಜಿನಾಮೆ ನೀಡುವುದರಿಂದ ಎಲ್ಲವೂ ಮುಗಿಯುತ್ತದೆಯೇ? ಅನಗತ್ಯವಾಗಿ ರಾಜಿನಾಮೆ ಕೇಳುತ್ತಿದ್ದಾರೆ. ನನ್ನ ತಪ್ಪಿಲ್ಲ ಎಂದ ಮೇಲೆ ರಾಜಿನಾಮೆ ಯಾಕೆ ನೀಡಬೇಕು ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಪ್ರಕರಣಕ್ಕೂ ಹಾಗೂ ನನ್ನ ಪ್ರಕರಣಕ್ಕೂ ವ್ಯತ್ಯಾಸವಿದೆ. ಇದರಲ್ಲಿ ನನ್ನ ಪಾತ್ರವಿಲ್ಲ. ಯಡಿಯೂರಪ್ಪ ಜಮೀನು ಡಿನೊಟಿಫೈ ಮಾಡಿದ್ದರು. ನಾನು ಯಾವುದೇ ಡಿನೋಟಿಫೈ ಮಾಡಿಲ್ಲ, ಹಣಕಾಸಿನ ವಹಿವಾಟು ಮಾಡಿಲ್ಲ ನಾನು ಅತ್ಮಸಾಕ್ಷಿಯಾಗಿ ಕೆಲಸ ಮಾಡುತ್ತೇನೆ. ರಾಜಿನಾಮೆ ನೀಡುವ ಅಗತ್ಯವಿಲ್ಲ ಎಂದು ಅವರು ಸಮರ್ಥಿಸಿಕೊಂಡರು.

Full View

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News