‘ಊಟ, ತಿಂಡಿ ನೆಪದಲ್ಲಿ ಪ್ರತ್ಯೇಕ ಸಭೆಗಳನ್ನು ಮಾಡಬೇಡಿ’ : ಸಚಿವರಿಗೆ ಸಿಎಂ ಸಿದ್ದರಾಮಯ್ಯ ಸೂಚನೆ?
ಬೆಂಗಳೂರು : ಊಟ, ತಿಂಡಿ ನೆಪದಲ್ಲಿ ಪ್ರತ್ಯೇಕ ಸಭೆಗಳನ್ನು ಮಾಡಬೇಡಿ. ಇದರಿಂದಾಗಿ, ವಿಪಕ್ಷಗಳಿಗೆ ಸರಕಾರದ ವಿರುದ್ಧ ಟೀಕೆಗಳನ್ನು ಮಾಡಲು ನಾವೇ ಅವಕಾಶಗಳನ್ನು ಕೊಟ್ಟಂತೆ ಆಗುತ್ತದೆ ಎಂದು ಸಚಿವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಗುರುವಾರ ವಿಧಾನಸೌಧದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸಚಿವರೊಂದಿಗೆ ಅನೌಪಚಾರಿಕವಾಗಿ ಮಾತನಾಡಿದ ಸಿಎಂ, ಮುಖ್ಯಮಂತ್ರಿ ಹುದ್ದೆ ವಿಚಾರವಾಗಿ ಬಹಿರಂಗವಾಗಿ ಚರ್ಚೆಗಳು ಆಗುತ್ತಿರುವುದಕ್ಕೆ ಕಡಿವಾಣ ಹಾಕುವಂತೆ ಹೈಕಮಾಂಡ್ ಎಚ್ಚರಿಕೆಯ ಸಂದೇಶ ರವಾನಿಸಿದೆ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.
ರಾಜಕೀಯ ದುರುದ್ದೇಶದಿಂದ ಹಾಕಿರುವ ಮುಡಾ ಪ್ರಕರಣ ಏನು ಆಗುವುದಿಲ್ಲ. ನಾನು ಇನ್ನೂ ಮುಖ್ಯಮಂತ್ರಿ ಸ್ಥಾನದಲ್ಲಿ ಇದ್ದೇನೆ. ಆದರೂ, ಪದೇ ಪದೇ ಸಚಿವರು ಪ್ರತ್ಯೇಕ ಸಭೆಗಳನ್ನು ಮಾಡುತ್ತಿರುವುದರಿಂದ ಜನತೆಗೆ ತಪ್ಪು ಸಂದೇಶ ರವಾನಿಸಿದಂತಾಗುತ್ತದೆ. ಇಂತಹ ಬೆಳವಣಿಗೆಗಳನ್ನು ಸಹಿಸಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಅಸಮಾಧಾನ ಹೊರಹಾಕಿದ್ದಾರೆ ಎಂದು ಹೇಳಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್, ಇತ್ತೀಚಿನ ದಿನಗಳಲ್ಲಿ ಊಟದ ಹೆಸರಿನಲ್ಲಿ ನಡೆಯುತ್ತಿರುವ ಸಭೆಗಳ ಬಗ್ಗೆ ಮಾಧ್ಯಮಗಳಲ್ಲಿ ಸಾಕಷ್ಟು ವರದಿಗಳು ಬರುತ್ತಿವೆ. ಆದುದರಿಂದ, ಸಚಿವ ಸಂಪುಟ ಸಭೆ ಮುಗಿದ ಬಳಿಕ ನಡೆದ ಅನೌಪಚಾರಿಕ ಚರ್ಚೆಯಲ್ಲಿ ಎಲ್ಲ ಸಚಿವರು ನಾವು ನಿಮ್ಮೊಂದಿಗಿದ್ದೇವೆ ಎಂದು ಮುಖ್ಯಮಂತ್ರಿಗೆ ಬೆಂಬಲ ನೀಡಿದ್ದೇವೆ ಎಂದು ಹೇಳಿದರು.