ಪಂಚಮಸಾಲಿ ಸಮುದಾಯದ ಮೀಸಲಾತಿ | ಸಂವಿಧಾನದ ಆಶಯಕ್ಕೆ ಅನುಗುಣವಾಗಿ ತೀರ್ಮಾನ : ಸಿಎಂ ಸಿದ್ದರಾಮಯ್ಯ
ಬೆಂಗಳೂರು : ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಪ್ರವರ್ಗ-2ಎ ಅಡಿ ಮೀಸಲಾತಿ ಒದಗಿಸುವ ಬೇಡಿಕೆ ಕುರಿತು ಕಾನೂನು ಪ್ರಕಾರ, ಸಂವಿಧಾನದ ಆಶಯಕ್ಕೆ ಅನುಗುಣವಾಗಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ಶುಕ್ರವಾರ ಗೃಹ ಕಚೇರಿ ಕೃಷ್ಣಾದಲ್ಲಿ ಪಂಚಮಸಾಲಿ ಮೀಸಲಾತಿ ಕುರಿತಾಗಿ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದ ನಿಯೋಗದೊಂದಿಗೆ ನಡೆಸಿದ ಸಭೆಯಲ್ಲಿ ಮಾತನಾಡಿದ ಅವರು, ಸರಕಾರ ಮೀಸಲಾತಿ ವಿಷಯದಲ್ಲಿ ಮುಕ್ತ ಮನಸ್ಸು ಹೊಂದಿದೆ. ನಮ್ಮ ಸರಕಾರ ಸಾಮಾಜಿಕ ನ್ಯಾಯದ ಪರವಾಗಿದೆ. ಎಲ್ಲ ದುರ್ಬಲ ವರ್ಗದವರಿಗೂ ನ್ಯಾಯ ದೊರೆಯಬೇಕು ಎಂಬುವುದು ನಮ್ಮ ಸರಕಾರದ ನಿಲುವು ಎಂದು ಹೇಳಿದರು.
ಶಾಶ್ವತ ಹಿಂದುಳಿದ ವರ್ಗಗಳ ಆಯೋಗವಿದೆ. ಅದರ ಅಂತಿಮ ಶಿಫಾರಸ್ಸು ಇನ್ನೂ ನಮ್ಮ ಕೈಗೆ ತಲುಪಿಲ್ಲ. ಚುನಾವಣೆ ನೀತಿ ಸಂಹಿತೆ ಇರುವುದರಿಂದ ಮೀಸಲಾತಿ ಕುರಿತಾಗಿ ಅಡ್ವೊಕೇಟ್ ಜನರಲ್, ಕಾನೂನು ಇಲಾಖೆ, ತಜ್ಞರೊಂದಿಗೆ, ಸಂಪುಟದಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. ಈಗಲೇ ಯಾವುದೇ ತೀರ್ಮಾನ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ತಿಳಿಸಿದರು.
ಮೀಸಲಾತಿ ಕುರಿತು ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಮುಂದೆ ಪ್ರಸ್ತಾವನೆ ಸಲ್ಲಿಸಬೇಕು, ಅದರ ಶಿಫಾರಸು ಅನ್ವಯ ಕ್ರಮ ಕೈಗೊಳ್ಳಬೇಕು ಎಂದು ಈ ಹಿಂದೆ ಪಂಚಮಸಾಲಿ ಸಮುದಾಯದ ಮುಖಂಡರು ಭೇಟಿಯಾದಾಗ ನಾನು ಸಲಹೆ ನೀಡಿದ್ದೆ. ಯಾವುದೇ ತೀರ್ಮಾನ ನ್ಯಾಯಯುತವಾಗಿ ಎಲ್ಲರಿಗೂ ಒಪ್ಪಿತವಾಗುವಂತೆ, ನ್ಯಾಯಾಲಯಕ್ಕೂ ಒಪ್ಪಿಗೆಯಾಗುವಂತಿರಬೇಕು ಎಂದು ಅವರು ನುಡಿದರು.
ಹಿಂದಿನ ಸರಕಾರ ನಿಮ್ಮ ಮನವಿ ಮೇರೆಗೆ 2ಸಿ ಮತ್ತು 2ಡಿ ಹೊಸ ಪ್ರವರ್ಗ ಮಾಡಿತು. 3ಎ ನಲ್ಲಿರುವ ಒಕ್ಕಲಿಗರನ್ನು 2ಸಿ ಗೆ ಸೇರಿಸುವುದು. 3ಬಿಯಲ್ಲಿರುವ ಲಿಂಗಾಯತರನ್ನು 2ಡಿಗೆ ಸೇರಿಸುವ ಪ್ರಸ್ತಾಪ ಮುಂದಿರಿಸಿತು. ಮುಸ್ಲಿಮರ ಮೀಸಲಾತಿಯನ್ನು ತೆಗೆದು ಹಾಕಿತ್ತು. ಮುಸ್ಲಿಮರು ಇದನ್ನು ಸುಪ್ರೀಂಕೋರ್ಟ್‍ನಲ್ಲಿ ಪ್ರಶ್ನಿಸಿದಾಗ, ಯಥಾಸ್ಥಿತಿ ಮುಂದುವರೆಸಲು ರಾಜ್ಯ ಸರಕಾರ ಒಪ್ಪಿಕೊಂಡಿತ್ತು. ಆದುದರಿಂದ, ಈ ಪ್ರಕರಣ ಇನ್ನೂ ನ್ಯಾಯಾಲಯದಲ್ಲಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಈಗ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದೆ. ಆದರೆ ಪೂರ್ವನಿಗದಿಯಂತೆ ಸಮುದಾಯದ ಮುಖಂಡರೊಂದಿಗೆ ಇಂದು ಸಭೆ ನಡೆಸಲಾಗಿದೆ. ಪಂಚಮಸಾಲಿ ಸಮುದಾಯ ಪ್ರಸ್ತುತ ಪ್ರವರ್ಗ-3ಬಿ ಯಲ್ಲಿದೆ. ಈ ಪ್ರವರ್ಗದಡಿ ಲಿಂಗಾಯತ ಹಾಗೂ ಅದರ ಉಪಜಾತಿಗಳೇ ಮೀಸಲಾತಿ ಸೌಲಭ್ಯ ಪಡೆಯುತ್ತಿವೆ. ಹಾಗಾಗಿ 2ಎ ಪ್ರವರ್ಗದಡಿ ಪಂಚಮಸಾಲಿಗರನ್ನು ಸೇರಿಸಬೇಕೆಂದು ನಿಯೋಗ ಒತ್ತಾಯಿಸಿತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆಯ ಬಳಿಕ ಸುದ್ದಿಗಾರರಿಗೆ ತಿಳಿಸಿದರು.
ಸೂಕ್ತ ಮೀಸಲಾತಿ ಇಲ್ಲದ ಕಾರಣ ಸಮುದಾಯದ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಕೃಷಿ ಕಾರ್ಮಿಕರು ಹೆಚ್ಚಾಗಿರುವ ಪಂಚಮಸಾಲಿ ಸಮುದಾಯವನ್ನು ಪ್ರವರ್ಗ-2ಎ ಸೇರಿಸಿ ಸಾಮಾಜಿಕ ನ್ಯಾಯ ಒದಗಿಸಲು ನಿಯೋಗ ಮನವಿ ಮಾಡಿತು ಎಂದು ಅವರು ಹೇಳಿದರು.
ಪಂಚಮಸಾಲಿಗಳಿಗೆ ಮೀಸಲಾತಿ ನೀಡುವ ಸಂಬಂಧ ವರದಿ ಸಲ್ಲಿಸಲು ಜಯಪ್ರಕಾಶ್ ಹೆಗಡೆ ಅಧ್ಯಕ್ಷತೆಯ ಹಿಂದುಳಿದ ವರ್ಗಗಳ ಆಯೋಗ ಅಧ್ಯಯನ ನಡೆಸಿ, ಮಧ್ಯಂತರ ವರದಿಯನ್ನು ಸಲ್ಲಿಸಿದ್ದರೂ, ಯಾವುದೇ ತೀರ್ಮಾನ ಕೈಗೊಂಡಿಲ್ಲ. ಮಧ್ಯಂತರ ವರದಿ ಆಧಾರದ ಮೇಲೆ ನಿರ್ಧಾರ ಕೈಗೊಳ್ಳಲು ನಿಯೋಗ ಮನವಿ ಮಾಡಿತು ಎಂದು ಮುಖ್ಯಮಂತ್ರಿ ತಿಳಿಸಿದರು.
ಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್, ಶಿವರಾಜ್ ತಂಗಡಗಿ, ಶಾಸಕರಾದ ವಿನಯ್ ಕುಲಕರ್ಣಿ, ವಿಜಯಾನಂದ ಕಾಶಪ್ಪನವರ್, ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹಾಗೂ ಸರಕಾರದ ಹಿರಿಯ ಅಧಿಕಾರಿಗಳು, ಸಮುದಾಯದ 40ಕ್ಕೂ ಹೆಚ್ಚು ಮುಖಂಡರು, ವಕೀಲರು ಮತ್ತು ಪ್ರಮುಖರು ಉಪಸ್ಥಿತರಿದ್ದರು.
………………………..