‘ಗೃಹಲಕ್ಷ್ಮಿ’ ಹಣದಿಂದ ಕಾಲೇಜು ಶುಲ್ಕ ಪಾವತಿಸಿದ ವಿದ್ಯಾರ್ಥಿಗೆ ಸಿಎಂ ಹಾರೈಕೆ

Update: 2024-10-19 12:51 GMT

ಬೆಂಗಳೂರು: ಗೃಹಲಕ್ಷ್ಮಿ ಹಣದಿಂದ ಬಿ.ಇಡಿ 4ನೆ ಸೆಮಿಸ್ಟರ್ ಪರೀಕ್ಷೆಯ ಶುಲ್ಕವನ್ನು ಕಟ್ಟಿದೆ. ಕುಟುಂಬ ಸಾಲದ ಸುಳಿಯಲ್ಲಿದೆ ತಂದೆ ಬಳಿ ಹಣ ಕೇಳೋಕೆ ಆಗದೆ ತಾಯಿ ಉಳಿಸಿಟ್ಟಿದ್ದ ಯೋಜನೆಯ ಹಣ ಸಹಾಯಕ್ಕೆ ಬಂದಿದೆ. ಸಂಕಷ್ಟದ ಸಮಯದಲ್ಲಿ ನನ್ನನ್ನು ಕಾಪಾಡಿದೆ. ಸಿದ್ದರಾಮಯ್ಯ ಅವರಿಗೆ ಎಷ್ಟು ಧನ್ಯವಾದ ಹೇಳಿದ್ರು ಸಾಲಲ್ಲ ಎಂದು ಅಪ್ಪು ಎಂಬ ವಿದ್ಯಾರ್ಥಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಡತನದ ಕಾರಣಕ್ಕಾಗಿ ಶಿಕ್ಷಣ ವಂಚಿತರಾಗಿರುವ ಮಕ್ಕಳನ್ನು ನನ್ನ ಬಾಲ್ಯದಿಂದಲೂ ನೋಡುತ್ತಾ ಬಂದಿದ್ದೇನೆ, ಇಂದಿಗೂ ನಮ್ಮ ನಡುವೆ ಅಂತಹಾ ಉದಾಹರಣೆಗಳು ಸಾಕಷ್ಟು ಸಿಗಲಿವೆ. ಸ್ವತಃ ನಾನೇ ನನ್ನಿಷ್ಟದ ಕಾನೂನು ವ್ಯಾಸಂಗಕ್ಕಾಗಿ ನಡೆಸಿದ ಹೋರಾಟ ಈ ಕ್ಷಣ ನೆನಪಾಗುತ್ತಿದೆ ಎಂದು ತಿಳಿಸಿದ್ದಾರೆ.

ಅಂದು ಯಾವುದೋ ಕಾರಣಕ್ಕೆ ಶಿಕ್ಷಣ ಮೊಟಕುಗೊಳಿಸಿ, ಕೃಷಿಯಲ್ಲಿ ತೊಡಗಿಕೊಂಡಿದ್ದರೆ ಇಂದು ಮುಖ್ಯಮಂತ್ರಿಯಾಗಿ ಕೋಟ್ಯಂತರ ಕನ್ನಡಿಗರ ಸೇವೆ ಮಾಡುವ ಭಾಗ್ಯ ನನ್ನದಾಗುತ್ತಿರಲಿಲ್ಲ. ಬಡತನದಲ್ಲೂ ಕಲಿಕೆಯೆಡೆಗಿನ ಈ ಯುವಕನ ಹಂಬಲ ಕಂಡು ನನಗೆ ಖುಷಿಯಾಯಿತು. ಗೃಹಲಕ್ಷ್ಮಿ ಯೋಜನೆ ನಿಜವಾಗಿ ತಲುಪಬೇಕಿರುವುದು ಮತ್ತು ತಲುಪುತ್ತಿರುವುದು ಇಂತಹ ಜನರನ್ನೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

ತನಗೆ ಬಂದ ಗೃಹಲಕ್ಷ್ಮಿಯ ಹಣವನ್ನು ಕಡುಬಡತನದಲ್ಲೂ ಕೂಡಿಟ್ಟು ಮಗನ ಶಿಕ್ಷಣಕ್ಕಾಗಿ ಕೊಟ್ಟ ಆ ತಾಯಿಯ ಪ್ರೀತಿ-ಕಾಳಜಿಗೆ ಧನ್ಯವಾದ. ಬಿ.ಇಡಿ ಶಿಕ್ಷಣ ಮುಗಿಸಿ ಶಿಕ್ಷಕನಾಗಿ ನೂರಾರು ಮಕ್ಕಳ ಬದುಕು ರೂಪಿಸುವಂತಾಗು. ಇಂದು ನೀನು ಧನ್ಯವಾದ ತಿಳಿಸಿದ್ದಕ್ಕಿಂತ ಹೆಚ್ಚು ಖುಷಿ ಅಂದು ನನಗಾಗಲಿದೆ ಎಂದು ಸಿದ್ದರಾಮಯ್ಯ ಹಾರೈಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News