ಮಳೆ ಹಾನಿ ಸ್ಥಳಗಳಿಗೆ ಭೇಟಿ ನೀಡಿ, ಪರಿಶೀಲಿಸಿ ತಕ್ಷಣ ಪರಿಹಾರ ಒದಗಿಸಿ : ಜಿಲ್ಲಾಧಿಕಾರಿಗಳಿಗೆ ಸಿಎಂ ಸೂಚನೆ

Update: 2024-10-26 16:05 GMT

PC:x/@siddaramaiah

ಬೆಂಗಳೂರು : ಮಳೆ ಹಾನಿಗೀಡಾದ ಸ್ಥಳಗಳಿಗೆ ಜಿಲ್ಲಾಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿ ನಿಯಮಾವಳಿ ಪ್ರಕಾರ ತಕ್ಷಣ ಪರಿಹಾರ ಒದಗಿಸಿ ಜನರಿಗೆ ಸಾಂತ್ವಾನ ನೀಡುವ ಕಾರ್ಯ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ

ಶನಿವಾರ ಇಲ್ಲಿನ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ 2024ರ ಹಿಂಗಾರು ಅವಧಿಯಲ್ಲಿ ಅಧಿಕ ಮಳೆಯಿಂದ ಉಂಟಾದ ಹಾನಿ ಕುರಿತು ಜಿಲ್ಲಾಧಿಕಾರಿಗಳು ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳೊಂದಿಗೆ ನಡೆಸಿದ ಪರಿಶೀಲನಾ ಸಭೆಯಲ್ಲಿ ಸಿದ್ದರಾಮಯ್ಯ ತಿಳಿಸಿದರು.

ಅತಿವೃಷ್ಟಿ, ಪ್ರವಾಹ, ನೆರೆ ಪೀಡಿತ ಪ್ರದೇಶಗಳಿಗೆ ಜಿಲ್ಲಾಧಿಕಾರಿಗಳು ಸ್ವತಃ ಭೇಟಿ ನೀಡಿ ಯಾವುದೇ ಅನಾಹುತಗಳು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸಿದ್ದರಾಮಯ್ಯ ಹೇಳಿದರು.

ಹಿಂಗಾರು ಅವಧಿಯಲ್ಲಿ ಅಂದರೆ ಅಕ್ಟೋಬರ್‌ ನಿಂದ ಡಿಸೆಂಬರ್ ತಿಂಗಳಲ್ಲಿ ರಾಜ್ಯದ ಹಲವು ಭಾಗಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಲಿದೆ ಎಂದು ಈಗಾಗಲೇ ಮುನ್ಸೂಚನೆ ನೀಡಲಾಗಿದೆ. ರಾಜ್ಯದ ಪ್ರಮುಖ ಜಲಾಶಯಗಳ ಒಟ್ಟು ಸಂಗ್ರಹಣಾ ಸಾಮರ್ಥ್ಯ 895.62 ಟಿಎಂಸಿ ಆಗಿದ್ದು, ಪ್ರಸ್ತುತ 871.26 ಟಿಎಂಸಿ ನೀರು ಸಂಗ್ರಹವಿದೆ. 2023ರ ಅವಧಿಯಲ್ಲಿ ಇದು 505.81 ಟಿಎಂಸಿ ಇತ್ತು ಎಂದು ಸಿದ್ದರಾಮಯ್ಯ ತಿಳಿಸಿದರು.

ಈ ಬಾರಿ ಜಲವಿದ್ಯುತ್ ಉತ್ಪಾದನೆಗೆ ಉತ್ತಮ ಪ್ರಮಾಣದ ನೀರು ಲಭ್ಯವಿದೆ. ಕಾವೇರಿ ಕಣಿವೆ ಹಾಗೂ ಕೃಷ್ಣಾ ಕಣಿವೆಯಲ್ಲೂ ಉತ್ತಮ ನೀರು ಸಂಗ್ರಹವಿದೆ. ಕುಡಿಯುವ ನೀರಿಗೆ ಸಾಕಷ್ಟು ನೀರನ್ನು ಇಟ್ಟುಕೊಂಡು ನೀರಾವರಿಗೆ ಸಮರ್ಪಕವಾಗಿ ನೀರು ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಸಿದ್ದರಾಮಯ್ಯ ಹೇಳಿದರು.

ಬೆಳೆ ಹಾನಿಯ ಕುರಿತು ಜಂಟಿ ಸಮೀಕ್ಷೆ ನಡೆಯುತ್ತಿದ್ದು, ಮೂರ್ನಾಲ್ಕು ದಿನಗಳಲ್ಲಿ ಸಮೀಕ್ಷೆ ಕಾರ್ಯ ಪೂರ್ಣಗೊಳ್ಳಲಿದೆ. ಜಂಟಿ ಸಮೀಕ್ಷೆ ಕಾರ್ಯವನ್ನು ಒಂದು ವಾರದ ಒಳಗಾಗಿ ಪೂರ್ಣಗೊಳಿಸಿ ವರದಿಯನ್ನು ಸಲ್ಲಿಸಲು ಸಿದ್ದರಾಮಯ್ಯ ಅವರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.

ಕೆರೆಗಳ ಒತ್ತುವರಿ ತೆರವುಗೊಳಿಸಲು ಈಗಾಗಲೇ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಗಡುವು ವಿಧಿಸಲಾಗಿತ್ತು. ಬೆಂಗಳೂರು ಸುತ್ತಮುತ್ತ ಬಹುತೇಕ ಕೆರೆಗಳು ಕೇವಲ ಶೇ.30ರಷ್ಟು ಮಾತ್ರ ತುಂಬಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕು ಎಂದು ಸಿದ್ದರಾಮಯ್ಯ ಸೂಚಿಸಿದರು.

ಕೆರೆಗಳ ಒತ್ತುವರಿ ತೆರವುಗೊಳಿಸುವುದು, ಬಳಿಕ ಕೆರೆಗಳ ಹೂಳೆತ್ತುವುದು ಸೇರಿದಂತೆ ಅಭಿವೃದ್ದಿ ಕಾರ್ಯಗಳನ್ನು ಜಿಲ್ಲಾಧಿಕಾರಿಗಳು ಆದ್ಯತೆ ಮೇರೆಗೆ ಕೈಗೊಳ್ಳಬೇಕು. ಉದ್ಯೋಗ ಖಾತ್ರಿ ಯೋಜನೆಯನ್ನು ಸಹ ಇದಕ್ಕೆ ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಸಿದ್ದರಾಮಯ್ಯ ತಿಳಿಸಿದರು.

ಹೆಚ್ಚುವರಿ ಬಿತ್ತನೆಗೆ ರೈತರಿಂದ ಬಿತ್ತನೆ ಬೀಜಕ್ಕೆ ಬೇಡಿಕೆ ಬಂದರೆ ಅದನ್ನು ಒದಗಿಸಲು ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು. ರೈತರಿಗೆ ಪರ್ಯಾಯ ಬೆಳೆ ಬೆಳೆಸಲು ಬಿತ್ತನೆ ಬೀಜ ಲಭ್ಯವಿದೆ. ಬಿತ್ತನೆ ಬೀಜ ಮತ್ತು ಗೊಬ್ಬರ ಸಾಕಷ್ಟು ಪ್ರಮಾಣದಲ್ಲಿರುವಂತೆ ನೋಡಿಕೊಳ್ಳಬೇಕು ಎಂದು ಸಿದ್ದರಾಮಯ್ಯ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News