ರಾಜಕಾಲುವೆ ನಿರ್ಮಾಣಕ್ಕೆ 2 ಸಾವಿರ ಕೋಟಿ ರೂ. ನೆರವು ನೀಡಲು ವಿಶ್ವಬ್ಯಾಂಕ್ ಒಪ್ಪಿಗೆ : ಸಿಎಂ ಸಿದ್ದರಾಮಯ್ಯ

Update: 2024-10-26 15:40 GMT

PC:x/@siddaramaiah

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಬಾಕಿ ಉಳಿದಿರುವ 173 ಕಿ.ಮೀ. ರಾಜಕಾಲುವೆ ನಿರ್ಮಾಣ ಮಾಡಲು 2 ಸಾವಿರ ಕೋಟಿ ರೂ. ಹಣ ಆರ್ಥಿಕ ನೆರವು ನೀಡಲು ವಿಶ್ವಬ್ಯಾಂಕ್ ಸಂಸ್ಥೆಯು ತಾತ್ವಿಕ ಒಪ್ಪಿಗೆ ನೀಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಶನಿವಾರ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಮಳೆ ಹಾನಿ ಕುರಿತ ಪರಿಶೀಲನಾ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂದಿನ ಕ್ಯಾಬಿನೆಟ್‍ನಲ್ಲಿ ರಾಜಕಾಲುವೆ ನಿರ್ಮಾಣದ ಯೋಜನಾ ವರದಿಗೆ ಒಪ್ಪಿಗೆ ಪಡೆಯಲಾಗುವುದು ಎಂದರು.

ನಗರದಲ್ಲಿ ಬಾಕಿ ಉಳಿದಿರುವ 173 ಕಿ.ಮೀ. ಉದ್ದದ ರಾಜಕಾಲುವೆಗಳಿಗೆ ತಡೆಗೋಡೆ ನಿರ್ಮಿಸುವ ಯೋಜನೆಗೆ ಹಾಗೂ 80 ಕಿ.ಮೀ. ಉದ್ದದ ಕಲ್ಲುಕಟ್ಟಡದ ರಾಜಕಾಲುವೆಗಳ ಸಬಲೀಕರಣ ಯೋಜನೆಗೆ ವಿಶ್ವಬ್ಯಾಂಕ್ ಸಂಸ್ಥೆಯಿಂದ 2 ಸಾವಿರ ಕೋಟಿ ರೂ. ಆರ್ಥಿಕ ನೆರವು ಸಿಗಲಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಎಲ್ಲಾ ರಾಜಕಾಲುವೆ ಒತ್ತುವರಿ ತೆರವು, ತಡೆಗೋಡೆ ನಿರ್ಮಾಣ ಕುರಿತು ಆದೇಶ ನೀಡಿದ್ದೆ. ಆದರೆ, ಈ ಕಾರ್ಯ ಇನ್ನೂ ಪೂರ್ಣಗೊಳಿಸದ ಕಾರಣ ಪ್ರತಿ ವರ್ಷ ಮಳೆ ಬಂದ ತಕ್ಷಣ ಅನಾಹುತಗಳು ಸಂಭವಿಸುತ್ತಿವೆ. ರಾಜಕಾಲುವೆಗಳ ಅತಿಕ್ರಮಣ ತೆರವು ಕಾರ್ಯವನ್ನು ಆದ್ಯತೆ ಮೇರೆಗೆ ಕೈಗೊಳ್ಳಬೇಕು ಎಂದು ಸಿದ್ದರಾಮಯ್ಯ ತಿಳಿಸಿದರು.

ಈ ವರ್ಷ ಅಕ್ಟೋಬರ್ ತಿಂಗಳಲ್ಲಿ ಬೆಂಗಳೂರು ನಗರದಲ್ಲಿ 275 ಮಿ.ಮೀ. ಮಳೆಯಾಗಿದ್ದು, ಇದು 3ನೇ ಅತಿ ಹೆಚ್ಚು ಮಳೆಯಾಗಿದೆ. 2005ರಲ್ಲಿ ಈ ಅವಧಿಯಲ್ಲಿ 407 ಮೀ.ಮೀ. ಮಳೆಯಾಗಿತ್ತು ಎಂದು ಸಿದ್ದರಾಮಯ್ಯ ಹೇಳಿದರು.

ರಾಜಕಾಲುವೆ ನಿರ್ಮಾಣದ ಯೋಜನೆಯ ವಿಸ್ತೃತ ಯೋಜನಾ ವರದಿಯ ಅಂದಾಜು ಪಟ್ಟಿಗಳಿಗೆ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲು ಕ್ರಮ ಕೈಗೊಳ್ಳಲಾಗುವುದು. ಟೆಂಡರ್ ಪ್ರಕ್ರಿಯೆಯನ್ನು ಆದಷ್ಟು ಬೇಗನೆ ಪೂರ್ಣಗೊಳಿಸಿ ಮುಂದಿನ ವರ್ಷದ ಆರಂಭದ ಒಳಗಾಗಿ ಕಾಮಗಾರಿ ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಸಿದ್ದರಾಮಯ್ಯ ತಿಳಿಸಿದರು.

ಅತಿವೃಷ್ಟಿ ನಿರ್ವಹಣೆಗೆ 8 ವಲಯಗಳ ನಿಯಂತ್ರಣ ಕೊಠಡಿಗಳ ಜೊತೆಗೆ 63 ಉಪ ವಿಭಾಗಗಳಲ್ಲಿ ಹೆಚ್ಚುವರಿ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಲಾಗಿದೆ. ರಾಷ್ಟ್ರೀಯ ನೈಸರ್ಗಿಕ ವಿಕೋಪ ನಿರ್ವಹಣಾ ಪ್ರಾಧಿಕಾರ ವತಿಯಿಂದ ರಾಜಕಾಲುವೆಗಳ ಕಿರು ಸೇತುವೆಗಳ ಅಗಲೀಕರಣ ಮತ್ತು ಕೆರೆಗಳ ಅಭಿವೃದ್ಧಿಗಾಗಿ 275 ಕೋಟಿ ರೂ. ಕ್ರಿಯಾ ಯೋಜನೆ ಅನುಮೋದಿಸಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.

ನಗರದಲ್ಲಿ ಮಳೆಯಿಂದ ಹಾನಿಗೀಡಾಗಿರುವ ರಸ್ತೆಗಳ ದುರಸ್ತಿಗೆ ಕ್ರಮಗಳನ್ನು ಕೈಗೊಳ್ಳಲಾಗುವುದು. ಈಗಾಗಲೇ 14 ಸಾವಿರ ಗುಂಡಿ ಮುಚ್ಚಲಾಗಿದೆ. ಮುಚ್ಚಿದ ಬಳಿಕ ಮತ್ತಷ್ಟು ಮಳೆ ಬಂದಿದ್ದರಿಂದ ಮತ್ತೆ ಗುಂಡಿ ಮುಚ್ಚಿವೆ. ಇವನ್ನೂ ಮುಚ್ಚಲು ಸೂಚನೆ ನೀಡಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಬೆಂಗಳೂರಿಗೆ ಬಂದಿದ್ದ ವಿಶ್ವ ಬ್ಯಾಂಕ್ ಸಂಸ್ಥೆಯ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದು, 5000 ಕೋಟಿ ರೂ. ನೆರವು ನೀಡಲು ಒಪ್ಪಿದ್ದಾರೆ. ಇದರಲ್ಲಿ 3500 ಕೋಟಿ ರೂ.ಗಳನ್ನು ಬೆಂಗಳೂರಿಗೆ ಮಾತ್ರ ಖರ್ಚು ಮಾಡಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು.

ಬಿಜೆಪಿ-ಜೆಡಿಎಸ್‍ನವರು ರಾಜಕೀಯವಾಗಿ ಮಾಡುವ ಆರೋಪಗಳಿಗೆಲ್ಲಾ ಉತ್ತರ ಕೊಡುವುದಿಲ್ಲ. ಅವರ ಕಾಲದಲ್ಲಿ ಬೆಂಗಳೂರು ನಗರದಲ್ಲಿ ಆದ ಅನಾಹುತಗಳಿಗೆ ಸರಿಯಾಗಿ ಕ್ರಮ ತಗೊಂಡಿಲ್ಲ. ರಾಜಕಾಲುವೆ ಒತ್ತುವರಿ ತೆರವಿಗೆ ಅವರು ಏನೂ ಮಾಡಿಲ್ಲ ಎಂದು ಸಿದ್ದರಾಮಯ್ಯ ದೂರಿದರು.

ಕೆರೆಗಳ ಅಭಿವೃದ್ಧಿಗೆ 175 ಕೋಟಿ ರೂ. ಟೆಂಡರ್ ಕರೆಯಲು ಸೂಚನೆ..!

ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ ಅಡಿಯಲ್ಲಿ 175 ಕೋಟಿ ರೂ. ಹಣವನ್ನು ಬೆಂಗಳೂರಿನ ಕೆರೆಗಳ ಅಭಿವೃದ್ಧಿಗೆ ಟೆಂಡರ್ ಕರೆಯಲು ಸೂಚನೆ ನೀಡಲಾಗಿದೆ. ತೂಬು ಕಾಲುವೆಗೆ 85 ಕೋಟಿ ರೂ., ಬೆಂಗಳೂರು ನಗರ ರಸ್ತೆ ನಿರ್ಮಾಣಕ್ಕಾಗಿ 165 ಕೋಟಿ ರೂ. ಪ್ರಸ್ತಾವನೆ ಸಿದ್ದಪಡಿಸಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಅಕ್ರಮ ಕಟ್ಟಡ ನಿರ್ಮಾಣ ನಿಯಂತ್ರಣಕ್ಕಾಗಿ ಕಾನೂನು ತರಲು ತೀರ್ಮಾನ..!

ನಗರದಲ್ಲಿ ಅಕ್ರಮ ನಿರ್ಮಾಣ ತಡೆಗಟ್ಟಲು ಹೊಸ ಕಠಿಣ ಕಾನೂನು ತಂದು ಬಿಬಿಎಂಪಿ, ಬಿಡಿಎ, ಬಿಎಂಆರ್‍ಡಿಎಗೆ ಹೆಚ್ಚು ಅಧಿಕಾರ ನೀಡಲು ನಿರ್ಧರಿಸಲಾಗಿದೆ. ಅಕ್ರಮ ಕಟ್ಟಡ ನಿರ್ಮಾಣದಿಂದಾಗುವ ಅನಾಹುತ ತಡೆಯಲು ಕಾನೂನು ಬಿಗಿಗೊಳಿಸುವ ಕಾರ್ಯಕ್ಕೆ ಮುಂದಾಗಿದ್ದೇವೆ. ಈ ಸಂಬಂಧ ಅಕ್ರಮ ಕಟ್ಟಡ ನಿರ್ಮಾಣ ಸಕ್ರಮಕ್ಕೆ ಸುಗ್ರೀವಾಜ್ಞೆ ತರಲು ತೀರ್ಮಾನಿಸಲಾಗಿದೆ. ಕಾನೂನು ಬಾಹಿರ ನಿರ್ಮಾಣ ನಿಯಂತ್ರಣ ಮಾಡಲು ಕಷ್ಟ ಆಗುತ್ತಿದೆ. ಕೂಡಲೇ ಸಂಪುಟದ ಮುಂದೆ ತಂದು ಕಾನೂನು ಮಾಡಲು ಮುಂದಾಗಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News