ಬರ ಪರಿಹಾರಕ್ಕೆ 18,171 ಕೋಟಿ ರೂ.ಬಿಡುಗಡೆ ಮಾಡಲು ಕೋರಿ ಕೇಂದ್ರ ಸಚಿವರಿಗೆ ಸಿಎಂ ಸಿದ್ದರಾಮಯ್ಯ ಪತ್ರ

Update: 2023-11-15 15:47 GMT

ಬೆಂಗಳೂರು, ನ.15: ರಾಜ್ಯದಲ್ಲಿನ ಬರ ಪರಿಹಾರಕ್ಕೆ ಎನ್‍ಡಿಆರ್ ಎಫ್‍ನಿಂದ ತ್ವರಿತಗತಿಯಲ್ಲಿ ಬರ ಪರಿಹಾರವನ್ನು ಬಿಡುಗಡೆ ಮಾಡುವಂತೆ ಕೋರಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಗೃಹ ಸಚಿವ ಅಮಿತ್ ಶಾ ಹಾಗೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಪತ್ರ ಬರೆದು ಮನವಿ ಮಾಡಿದ್ದಾರೆ.

ಪ್ರಸಕ್ತ ಸಾಲಿನ ಮಳೆಗಾಲದಲ್ಲಿ ಕರ್ನಾಟಕದ ಬಹುತೇಕ ಭಾಗವು ಬರ ಪರಿಸ್ಥಿತಿ ಎದುರಿಸಿದೆ. ಮಳೆಗಾಲವು ರಾಜ್ಯದಲ್ಲಿ ವಿಳಂಬವಾಗಿ ಆರಂಭಗೊಂಡ ಹಿನ್ನೆಲೆಯಲ್ಲಿ ಜೂನ್ ತಿಂಗಳಲ್ಲಿ ಕನಿಷ್ಠ ಮಳೆಯಾಗಿದೆ, ಇದರಿಂದ ಶೇ.56 ಮಳೆ ಕೊರತೆ ಸಂಭವಿಸಿದೆ. ಇದು ರಾಜ್ಯದಲ್ಲಿ 122 ವರ್ಷಗಳ ಇತಿಹಾಸದಲ್ಲೆ ಅತ್ಯಂತ ಕಡಿಮೆ ಪ್ರಮಾಣದ ಮಳೆ ಎಂದು ದಾಖಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

ಜೂನ್‍ನಲ್ಲಿ ಮಳೆಯ ಕೊರತೆಯಿಂದಾಗಿ ಅನೇಕ ರೈತರು ಜುಲೈ ಆರಂಭದಲ್ಲಿ ಬಿತ್ತನೆ ಮಾಡಲು ಸಾಧ್ಯವಾಗಲಿಲ್ಲ. ಆಗಸ್ಟ್ ತಿಂಗಳಲ್ಲಿ ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ಬೆಳವಣಿಗೆಯ ನಿರ್ಣಾಯಕ ಹಂತದಲ್ಲೆ ಕರ್ನಾಟಕದಲ್ಲಿ ಶೇ.73ರಷ್ಟು ಮಳೆ ಕೊರತೆ ಸಂಭವಿಸಿದೆ, ಇದು ಆಗಸ್ಟ್ ತಿಂಗಳಿನಲ್ಲಿ ಕಳೆದ 122 ವರ್ಷಗಳಲ್ಲಿ ದಾಖಲಾದ ಕಡಿಮೆ ಪ್ರಮಾಣದ ಮಳೆಯಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ರಾಜ್ಯದಲ್ಲಿ ಆಗಸ್ಟ್ ತಿಂಗಳಲ್ಲಿ ಅಧಿಕ ಮಳೆ ಕೊರತೆಯ ಜೊತೆಗೆ ಸಾಮಾನ್ಯ ತಾಪಮಾನಕ್ಕಿಂತ ಹೆಚ್ಚಿನ ತಾಪಮಾನ ದಾಖಲಾಗಿದೆ ಹಾಗೂ ಇದರಿಂದ ಮಳೆಯಾಶ್ರಿತ ಪ್ರದೇಶಗಳಲ್ಲಿನ ಹೆಚ್ಚಿನ ಭಾಗಗಳಲ್ಲಿ ಬೆಳೆದಿರುವ ಬೆಳೆಗಳ ಮೇಲೆ ತೀವ್ರ ಪರಿಣಾಮ ಬೀರಿದೆ. ಸೆಪ್ಟೆಂಬರ್ ಅವಧಿಯಲ್ಲಿ, ಪ್ರಮುಖ ಖಾರಿಫ್ ಪ್ರದೇಶ ಒಳಗೊಂಡಿರುವ ರಾಜ್ಯದ ಒಳಾಂಗಣ ಪ್ರದೇಶಗಳು ಮಳೆ ಕೊರತೆಗೆ ಸಾಕ್ಷಿಯಾಗಿವೆ ಎಂದು ಅವರು ಹೇಳಿದ್ದಾರೆ.

ಇದು ಬೆಳೆಗಳ ಪಕ್ವತೆಯ ಹಂತದಲ್ಲಿ ಮಣ್ಣಿನ ತೇವಾಂಶದ ಒತ್ತಡಕ್ಕೆ ಕಾರಣವಾಯಿತು. ಇದಲ್ಲದೆ, ಅಕ್ಟೋಬರ್‍ನಲ್ಲಿ ಬರ ಪರಿಸ್ಥಿತಿಯು ಮತ್ತಷ್ಟು ಹದಗೆಟ್ಟಿದೆ. ರಾಜ್ಯದ ಒಟ್ಟು 236 ತಾಲೂಕುಗಳ ಪೈಕಿ 223 ತಾಲೂಕುಗಳು ಬರಪೀಡಿತ ಪ್ರದೇಶಗಳು ಎಂದು ಘೋಷಿಸಲಾಗಿದೆ. ಸೆ.22ರಂದು ಎನ್‍ಡಿಆರ್‍ಎಫ್‍ನಿಂದ ಬರ ಪರಿಹಾರವನ್ನು ನಿರೀಕ್ಷಿಸಿ ಮತ್ತು 195 ತೀವ್ರ ಬರ ಪೀಡಿತ ತಾಲೂಕುಗಳಲ್ಲಿ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಖಾರಿಫ್ ಬರ ನಿವೇದನೆ ವರದಿಯನ್ನು ಸಲ್ಲಿಕೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ರಾಜ್ಯದ ಬರ ಪರಿಸ್ಥಿತಿಯನ್ನು ನಿರ್ಣಯಿಸಲು ಕೇಂದ್ರ ತಂಡವು ಅ.5ರಿಂದ 9ರ ವರೆಗೆ ಬರ ಪ್ರದೇಶಗಳಿಗೆ ಭೇಟಿ ನೀಡಿದೆ. ಬರ ಪರಿಸ್ಥಿತಿಯಿಂದ ಹದಗೆಡುತ್ತಿರುವ ರಾಜ್ಯದ ಪರಿಸ್ಥಿತಿಯ ಬಗ್ಗೆ, ಮಳೆಗಾಲದ ಸಂಪೂರ್ಣ ಋತುಮಾನವನ್ನು ಗಮನದಲ್ಲಿಟ್ಟುಕೊಂಡು ಮರು ಅಧ್ಯಯನ ನಡೆಸಲಾಯಿತು ಮತ್ತು ಹೆಚ್ಚುವರಿಯಾಗಿ 21 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಲಾಯಿತು ಎಂದು ಅವರು ತಿಳಿಸಿದ್ದಾರೆ.

ಆ ತಾಲೂಕುಗಳಿಗೆ ಎನ್‍ಡಿಆರ್‍ಎಫ್‍ನಿಂದ ಹಣಕಾಸಿನ ನೆರವು ಕೋರಿ ಪೂರಕ ನಿವೇದನೆ ಪತ್ರವನ್ನು ಅ.9ರಂದು ಸಲ್ಲಿಸಲಾಗಿದೆ. ನೈಋತ್ಯ ಮುಂಗಾರು ವಿಳಂಬದಿಂದ ರಾಜ್ಯದ ಕೃಷಿ ಪ್ರದೇಶಗಳ ಮೇಲೆ ಪರಿಣಾಮ ಬೀರಿದೆ. ಹಾಗಾಗಿ, ಬರ ಪರಿಸ್ಥಿತಿ ಬಗ್ಗೆ ಅಕ್ಟೋಬರ್ ಅಂತ್ಯದಲ್ಲಿ ಪುನಃ ಅಧ್ಯಯನ ನಡೆಸಲಾಯಿತು ಮತ್ತು ಹೆಚ್ಚುವರಿಯಾಗಿ 7 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಲಾಯಿತು. ಈ ಬರ ಪೀಡಿತ ತಾಲೂಕುಗಳಿಗೂ ಹಣಕಾಸಿನ ನೆರವನ್ನು ನಿರೀಕ್ಷಿಸಿ ಹೆಚ್ಚುವರಿಯಾಗಿ ನಿವೇದನಾ ಪತ್ರವನ್ನು ಬರೆಯಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಒಟ್ಟಾರೆ 2023ನೆ ಸಾಲಿನ ಖಾರಿಫ್ ನಲ್ಲಿ ಸುಮಾರು 48 ಲಕ್ಷ ಹೆಕ್ಟೇರ್‍ಗಿಂತ ಹೆಚ್ಚಿನ ಕೃಷಿ ಮತ್ತು ತೋಟಗಾರಿಕೆ ಬೆಳೆಗಳು ಹಾನಿಗೊಳಗಾಗಿವೆ. ಒಟ್ಟಾರೆ ಹಾನಿಗೊಂಡ ಬೆಳೆಗಳ ಒಟ್ಟು ಮೌಲ್ಯ 35,162.05 ಕೋಟಿ ರೂಪಾಯಿಗಳಾಗಿವೆ. ರಾಜ್ಯ ಸರಕಾರವು 18171.44 ಕೋಟಿ ರೂಪಾಯಿ ಬರ ಪರಿಹಾರವನ್ನು ಎನ್‍ಡಿಆರ್‍ಎಫ್‍ನಿಂದ ಬಿಡುಗಡೆ ಮಾಡಬೇಕು ಎಂದು ಕೋರಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

ರಾಜ್ಯ ಸರಕಾರದ ಕಂದಾಯ ಸಚಿವರ ನೇತೃತ್ವದಲ್ಲಿ ನೈಸರ್ಗಿಕ ವಿಕೋಪ ನಿರ್ವಹಣೆಯ ಸಂಪುಟದ ಉಪ ಸಮಿತಿಯು ರಾಜ್ಯದ ಬರ ಪರಿಸ್ಥಿತಿ ಬಗ್ಗೆ ಮನವರಿಕೆ ಮಾಡಿಕೊಡಲು ನಿಮ್ಮ ಕಚೇರಿಗೆ ಆಗಮಿಸಿ ಭೇಟಿಯಾಗಲು ಹಲವು ಬಾರಿ ಪ್ರಯತ್ನಗಳನ್ನು ನಡೆಸಿದೆ. ಆದರೆ ದುರಾದೃಷ್ಟವಶಾತ್ ಭೇಟಿಗೆ ಸಮ್ಮತಿ ಸಿಕ್ಕಿಲ್ಲ ಎಂದು ಅವರು ಹೇಳಿದ್ದಾರೆ.

ಸಂಪುಟ ಉಪ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು ಅ.25ರಂದು ರಾಜ್ಯದಲ್ಲಿನ ಭೀಕರ ಬರ ಪರಿಸ್ಥಿತಿಯ ಕುರಿತು ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ಕಾರ್ಯದರ್ಶಿಗೆ ತಿಳಿಸಿದ್ದಾರೆ. ಈ ವೇಳೆ ಎನ್‍ಡಿಆರ್‍ಎಫ್ ಅಡಿಯಲ್ಲಿ ಬೆಳೆ ನಷ್ಟಕ್ಕೆ ಇನ್‍ಪುಟ್ ಸಬ್ಸಿಡಿ ನೀಡಲು 8 ವರ್ಷದ ಹಳೆಯ 2015ರ ಕೃಷಿ ಗಣತಿ ದತ್ತಾಂಶವನ್ನು ಪೂರಕವಾಗಿ ಬಳಕೆ ಮಾಡುತ್ತಿರುವ ಬಗ್ಗೆ ಕಳವಳವನ್ನು ವ್ಯಕ್ತಪಡಿಸಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಹಳೆಯ ಕೃಷಿ ಗಣತಿ ದತ್ತಾಂಶದ ಮೇಲಿನ ಅವಲಂಬನೆಯನ್ನು ಪರಿಶೀಲಿಸುವುದು ಸೂಕ್ತವಾಗಿದೆ. ರಾಜ್ಯವು ನಿರ್ವಹಿಸುತ್ತಿರುವ ಎಸ್‍ಎಂಎಫ್ ಶೇಕಡಾವಾರು ಮತ್ತು ಫ್ರೂಟ್ಸ್‍ನ ರೈತರ ಸಂಖ್ಯೆ ದತ್ತಾಂಶವನ್ನು ಪರಿಗಣಿಸುವಂತೆ ನಾನು ನಿಮ್ಮಲ್ಲಿ ಕಳಕಳಿಯಿಂದ ವಿನಂತಿಸಿಕೊಳ್ಳುತ್ತಿದ್ದೇನೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

ಫ್ರೂಟ್ಸ್ ದತ್ತಾಂಶದ ಪ್ರಕಾರ 31 ಜಿಲ್ಲೆಗಳಲ್ಲಿ ಸುಮಾರು 52.73 ಲಕ್ಷ ರೈತರು 2 ಹೆಕ್ಟೆರ್‍ಗಿಂತ ಕಡಿಮೆ ಪ್ರಮಾಣದ ಭೂಮಿಯನ್ನು ಹೊಂದಿದ್ದಾರೆ. ಸಣ್ಣ ಮತ್ತು ಅತಿಸಣ್ಣ ರೈತರು ಹೆಚ್ಚಾಗಿ ಬರದ ಪರಿಣಾಮ ಎದುರಿಸುತ್ತಿದ್ದಾರೆ. ಕೃಷಿ ಚಟುವಟಿಕೆಗಳ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿರುವ ಸಣ್ಣ ಮತ್ತು ಅತಿ ಸಣ್ಣ ರೈತರ ಜೀವನ ಮತ್ತು ಕುಟುಂಬಗಳ ಜೀವನ ಪೆÇೀಷಣೆಗಾಗಿ ಉಚಿತ ಪರಿಹಾರವನ್ನು ಪಾವತಿಸಲು ಅನುಕೂಲವಾಗುವಂತೆ ರಾಜ್ಯ ಸರಕಾರವು 12,577.9 ಕೋಟಿ ರೂ.ಗಳನ್ನು ಕೋರುತ್ತಿದೆ ಎಂದು ಅವರು ಹೇಳಿದ್ದಾರೆ.

ಅತಿ ಕಡಿಮೆ ಎಸ್‍ಡಿಆರ್ ಎಫ್ ಅನುದಾನ ಹಂಚಿಕೆಯಾಗುತ್ತಿರುವ ರಾಜ್ಯಕ್ಕೆ ಆರ್ಥಿಕ ನೆರವಿನ ಹೊರತಾದ ಸಹಾಯಗಳಿಗೆ ಶೇ.50ರಷ್ಟು ಮಿತಿ ನಿಗದಿಪಡಿಸಿರುವುದರಿಂದ ಸಂತ್ರಸ್ತ ಕುಟುಂಬಗಳಿಗೆ ಸೂಕ್ತ ನೆರವು ನೀಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸಂತ್ರಸ್ತ ಕುಟುಂಬಗಳಿಗೆ ಆರ್ಥಿಕೇತರ ನೆರವು ನೀಡಲು ಎನ್‍ಡಿಆರ್‍ಎಫ್ ಅಡಿ ಪರಿಹಾರ ಕೋರುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಮುಂಬರುವ ತಿಂಗಳುಗಳಲ್ಲಿ ಕುಡಿಯುವ ನೀರಿನ ಪರಿಸ್ಥಿತಿಯು ಹದಗೆಡುವ ಸಾಧ್ಯತೆಯಿದೆ. ಮಳೆಗಾಲದ ನಂತರ ರಾಜ್ಯಗಳಲ್ಲಿನ ಪ್ರಮುಖ ಜಲಾಶಯಗಳು ಒಟ್ಟು ಸಾಮಥ್ರ್ಯದ ಶೇ.53ರಷ್ಟು ಮಾತ್ರ ನೀರನ್ನು ಹೊಂದಿವೆ. ನಮ್ಮ ಜಲಸಂಗ್ರಹಾಗಾರಗಳಲ್ಲಿನ ಶೇಖರಣಾ ಮಟ್ಟದಲ್ಲಿನ ಕುಸಿತವು ಜಲವಿದ್ಯುತ್ ಉತ್ಪಾದನೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಉಪಸಮಿತಿಯು ಸಲ್ಲಿಸಿರುವ ತನ್ನ ಶಿಫಾರಸ್ಸುಗಳಿಗೆ ಆದಷ್ಟು ಬೇಗ ಪ್ರತಿಕ್ರಿಯಿಸಿ. ಎನ್‍ಡಿಆರ್‍ಎಫ್‍ನಿಂದ ತ್ವರಿತಗತಿಯಲ್ಲಿ ಬರ ಪರಿಹಾರ ಬಿಡುಗಡೆ ಮಾಡಿದರೆ ಸಂಕಷ್ಟದಲ್ಲಿರುವ ರೈತರಿಗೆ ಇನ್‍ಪುಟ್ ಸಬ್ಸಿಡಿ ಮತ್ತು ಆರ್ಥಿಕ ಸಹಾಯದ ಹೊರತಾದ ಪರಿಹಾರವನ್ನು ಸಕಾಲದಲ್ಲಿ ವಿತರಿಸಲು ಅನುಕೂಲವಾಗುತ್ತದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News