ಸಿಎ ನಿವೇಶನ ಹಂಚಿಕೆ ವಿಚಾರ: ಮಲ್ಲಿಕಾರ್ಜುನ ಖರ್ಗೆ ಕುಟುಂಬಸ್ಥರ ವಿರುದ್ಧ ಲೋಕಾಯುಕ್ತಕ್ಕೆ ದೂರು

Update: 2024-09-27 16:10 GMT

ಮಲ್ಲಿಕಾರ್ಜುನ ಖರ್ಗೆ

ಬೆಂಗಳೂರು: ನಗರದ ಎರಡು ಕಡೆಗಳಲ್ಲಿ ಕೋಟ್ಯಂತರ ರೂ. ಮೌಲ್ಯದ ನಾಗರೀಕ ನಿವೇಶನಗಳನ್ನು(ಸಿಎ) ಹಂಚಿಕೆ ಮಾಡಿಕೊಂಡಿರುವ ಆರೋಪ ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಕುಟುಂಬಸ್ಥರ ವಿರುದ್ಧ ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.

ಸಿದ್ದಾರ್ಥ್ ವಿಹಾರ ಟ್ರಸ್ಟ್ ಹೆಸರಿನಲ್ಲಿ ಬಿಟಿಎಂ ಹಾಗೂ ಬಾಗಲೂರಿನಲ್ಲಿರುವ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಲ್ಲಿ(ಕೆಐಎಡಿಬಿ) ನಾಗರೀಕ ನಿವೇಶನದಡಿ 5 ಎಕರೆ ಸರ್ಕಾರಿ ಸ್ವತ್ತು ಪಡೆದುಕೊಂಡಿರುವ ಆರೋಪದಡಿ ಮಲ್ಲಿಕಾರ್ಜುನ ಖರ್ಗೆ, ಪತ್ನಿ ರಾಧಾಬಾಯಿ, ಪುತ್ರ ಪ್ರಿಯಾಂಕ್ ಖರ್ಗೆ ಹಾಗೂ ಸಂಸದ ರಾಧಾಕೃಷ್ಣ ವಿರುದ್ಧ ದೂರು ನೀಡಿದ್ದು, ಅವರಿಗೆ ಸಹಕರಿಸಿದ ಸಚಿವ ಎಂ.ಬಿ.ಪಾಟೀಲ್ ಹಾಗೂ ಐಎಎಸ್ ಅಧಿಕಾರಿ ಸೆಲ್ವಕುಮಾರ್ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಒತ್ತಾಯಿಸಿದ್ದಾರೆ.

ಸಿದ್ದಾರ್ಥ್ ವಿಹಾರ ಟ್ರಸ್ಟ್ ಮಲ್ಲಿಕಾರ್ಜುನ ಖರ್ಗೆ ಕುಟುಂಬದ ಹೆಸರಿನಲ್ಲಿದ್ದು, ಶೈಕ್ಷಣಿಕ ಉದ್ದೇಶಕ್ಕಾಗಿ 2014ರಲ್ಲಿ ಬಿಟಿಎಂ ಲೇಔಟ್ 4ನೇ ಹಂತದ 2ನೇ ಬ್ಲಾಕ್‍ನಲ್ಲಿ ಬಿಡಿಎಯಿಂದ 86,133 ಚದರ ಅಡಿ ಜಾಗವನ್ನು ನಾಗರಿಕ ನಿವೇಶನ(ಸಿಎ)ವನ್ನು 30 ವರ್ಷಗಳ ಗುತ್ತಿಗೆ ನೀಡಿ ಹಂಚಿಕೆ ಮಾಡಲಾಗಿತ್ತು.

ಇದಾದ 10 ವರ್ಷಗಳ ಬಳಿಕ 2024ರ ಮಾ.11ರಂದು ಮತ್ತೆ ಶೈಕ್ಷಣಿಕ ಉದ್ದೇಶಕ್ಕಾಗಿ ಕೆಐಎಡಿಬಿಗೆ ಸಿಎ ನಿವೇಶನ ನೀಡುವಂತೆ ಅರ್ಜಿ ಸಲ್ಲಿಸಲಾಗಿತ್ತು. ಇದಕ್ಕೆ ಕೆಐಡಿಬಿಯು ಅನುಮೋದಿಸಿ ಹೈಟೆಕ್ ಡಿಫೆನ್ಸ್ ಅಂಡ್ ಏರೋಸ್ಪೆಸ್ ಪಾರ್ಕ್‍ನ ಹಾರ್ಡ್‍ವೇ ಸೆಕ್ಟರ್‍ನಲ್ಲಿ 5 ಎಕರೆ ಜಮೀನು ಮಂಜೂರು ಮಾಡಿ ಅರ್ಜಿದಾರರಿಗೆ ಹಂಚಿಕೆ ಪತ್ರ ನೀಡಲಾಗಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಸಿದ್ದಾರ್ಥ್ ವಿಹಾರ ಟ್ರಸ್ಟ್‍ಗೆ ಹಂಚಿಕೆ ಮಾಡಲಾಗಿರುವ 5 ಎಕರೆ ವಿಸ್ತೀರ್ಣದ ಸಿಎ ನಿವೇಶನದ ಪ್ರಸ್ತುತ ಮಾರುಕಟ್ಟೆ ಮೌಲ್ಯ ಕನಿಷ್ಠ 110 ಕೋಟಿ ರೂ. ರೂಪಾಯಿವಾಗಿದೆ. ಕೈಗಾರಿಕಾ ನಿವೇಶನ ಕೋರಿ ಅರ್ಜಿ ಸಲ್ಲಿಸುವ ಸಾಮಾನ್ಯ ಉದ್ಯಮಿಗಳು ವರ್ಷಾನುಗಟ್ಟಲೇ ಅಲೆದಾಡಿದರೂ ನಿವೇಶನ ಹಂಚಿಕೆ ಮಾಡದೆಯೇ ಸತಾಯಿಸುವ ಕೆಐಎಡಿಬಿ ಅಧಿಕಾರಿಗಳು ಖರ್ಗೆ ಕುಟುಂಬದ ರಾಜಕೀಯ ಪ್ರಭಾವಗಳಿಗೆ ಮತ್ತು ಸಚಿವ ಎಂ.ಬಿ. ಪಾಟೀಲ್ ಅವರ ಒತ್ತಡಕ್ಕೆ ಮಣಿದು ಅರ್ಜಿ ಸಲ್ಲಿಸಿದ 3 ತಿಂಗಳೊಳಗಾಗಿ 5 ಎಕರೆ ಜಾಗವನ್ನು ಹಂಚಿಕೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News