ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಕಾಂಗ್ರೆಸ್ ಗೆ ಲಾಭ; ಪ್ರತಾಪ್ ಸಿಂಹ ಗೆದ್ದರೆ ನಾನು ಊರು ಬಿಡುತ್ತೇನೆ: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್
ಮೈಸೂರು: ʼಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಈ ಬಾರಿ ಎರಡು ಪಕ್ಷಗಳು ಪಲ್ಟಿ ಹೊಡೆಯಲಿವೆʼ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ವಾಗ್ದಾಳಿ ನಡೆಸಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʼಬಿಜೆಪಿ ಮತ್ತು ಜೆಡಿಎಸ್ ತಮ್ಮ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಮೈತ್ರಿಗೆ ಮುಂದಾಗಿವೆ. ಆದರೆ ಅದು ಯಶಸ್ಸು ಕಾಣುವುದಿಲ್ಲ, ಬಿಜೆಪಿಯೊಂದಿಗೆ ಜೆಡಿಎಸ್ ಮೈತ್ರಿಯಿಂದ ಕಾಂಗ್ರೆಸ್ ಪಕ್ಷದ ಮತಗಳಿಕೆ ಪ್ರಮಾಣ ಮತ್ತಷ್ಟು ಹೆಚ್ಚಾಗಲಿದೆ. ಯಾಕೆಂದರೆ ಜೆಡಿಎಸ್ ಪಕ್ಷಕ್ಕೆ ಒಂದು ಸಮುದಾಯ ಮಾತ್ರ ಮತ ಹಾಕಲ್ಲ, ಅದರಲ್ಲಿ ಅಲ್ಪಸಂಖ್ಯಾತ, ದಲಿತ, ಮತ್ತು ಹಿಂದುಳಿದ ವರ್ಗಗಳು ಮತ ನೀಡಿವೆ. ಬಿಜೆಪಿಯೊಂದಿಗೆ ಇವರು ಮೈತ್ರಿಮಾಡಿಕೊಂಡರೆ ಆ ವರ್ಗದ ಮತಗಳು ಕಾಂಗ್ರೆಸ್ ಪಕ್ಷದ ಪರವಾಗಿ ಬರಲಿದೆʼ ಎಂದು ಹೇಳಿದರು.
ʼಈಗಾಗಲೇ ಬಿಜೆಪಿಯವರು ಕಾಂಗ್ರೆಸ್ ಪಕ್ಷದ ವಿರುದ್ಧ ಮಾತನಾಡಲು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಸುಫಾರಿ ಕೊಟ್ಟು ಬಾಡಿಗೆ ರೂಪದಲ್ಲಿ ತಮ್ಮ ಪಕ್ಷಕ್ಕೆ ಕರೆದುಕೊಂಡಿದ್ದಾರೆ. ಮುಂದೆ ರಾಜ್ಯದಲ್ಲಿ ತೆರವಾಗಿರುವ ವಿರೋಧ ಪಕ್ಷದ ನಾಯಕ ಸ್ಥಾನವನ್ನು ಕುಮಾರಸ್ವಾಮಿ ಅವರಿಗೆ ನೀಡಲಿದ್ದಾರೆʼ ಎಂದು ಲೇವಡಿ ಮಾಡಿದರು.
ʼʼಪ್ರತಾಪ್ ಸಿಂಹ ಗೆದ್ದರೆ ನಾನು ಊರು ಬಿಡುತ್ತೇನೆʼʼ
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷ ಸಂಸದ ಪ್ರತಾಪ್ ಸಿಂಹ ವಿರುದ್ಧ ಮೂರು ಲಕ್ಷಗಳ ಮತ ಅಂತರದಲ್ಲಿ ಗೆಲುವು ಸಾಧಿಸಲಿದೆ. ಬೇಕಿದ್ದರೆ ಇದರ ಬಗ್ಗರ ಅಫಿಡವಿಟ್ ಮಾಡಿಕೊಡುತ್ತೇನೆ. ಸಂಸದ ಪ್ರತಾಪ್ ಸಿಂಹ ತಿಪ್ಪರಲಾಗ ಹಾಕಿದರೂ ಗೆಲ್ಲಲ್ಲ. ಅವರ ಬಿಜೆಪಿ ಪಕ್ಷದ ಮುಖಂಡರುಗಳೇ ಅವರನ್ನು ಸೋಲಿಸಲು ಕಾದು ಕುಳಿತಿದ್ದಾರೆ. ಕೊಡಗಿಗೆ ಪ್ರತಾಪ್ ಸಿಂಹ ಕಾಲು ಹಾಕಲು ಆಗುವುದಿಲ್ಲ. ಪ್ರತಾಪ್ ಸಿಂಹ ಗೆದ್ದರೆ ನಾನು ಊರನ್ನೇ ಬಿಟ್ಟುಬಿಡುತ್ತೇನೆ ಎಂದು ಸವಾಲು ಹಾಕಿದರು.