ಸಂವಿಧಾನ ಜಾಗೃತಿ ದಿನದ ಹೆಸರಿನಲ್ಲಿ ಸಂವಿಧಾನಕ್ಕೇ ಅಪಮಾನ ಮಾಡಿದ ಕಾಂಗ್ರೆಸ್ ಸರಕಾರ: ಸಿ.ಟಿ.ರವಿ

Update: 2024-02-26 09:37 GMT

ಬೆಂಗಳೂರು: ಸಂವಿಧಾನ ಜಾಗೃತಿ ದಿನದ ಹೆಸರಿನಲ್ಲಿ ಸಂವಿಧಾನಕ್ಕೇ ಅಪಮಾನ ಮಾಡುವ ಕೆಲಸವನ್ನು ಕರ್ನಾಟಕದ ಕಾಂಗ್ರೆಸ್ ಸರಕಾರ ಮಾಡಿದೆ ಎಂದು ಬಿಜೆಪಿ ನಿಕಟಪೂರ್ವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಮಾಜಿ ಸಚಿವ ಸಿ.ಟಿ.ರವಿ ಅವರು ಆಕ್ಷೇಪ ವ್ಯಕ್ತಪಡಿಸಿದರು.

ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ನಗರದ ಅರಮನೆ ಮೈದಾನದಲ್ಲಿ ಸರಕಾರಿ ಖರ್ಚಿನಲ್ಲಿ ಕರ್ನಾಟಕ ಸರಕಾರದ ವತಿಯಿಂದ ಆಯೋಜಿಸಿದ್ದ ʼಸಂವಿಧಾನ ಜಾಗೃತಿʼ ದಿನದಲ್ಲಿ ಸಂವಿಧಾನ ಜಾಗೃತಿ ಬಗ್ಗೆ ಮಾತನಾಡಿದ್ದು ಕಡಿಮೆ. ಬದಲಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಟೀಕಿಸಿದ್ದು, ಸುಳ್ಳು ಆರೋಪ ಹೊರಿಸಿದ್ದು, ತಪ್ಪು ಭಾವನೆ ಬರುವಂತೆ ಸುಳ್ಳು ಸುದ್ದಿಯನ್ನು ಹರಡಿಸಿದ್ದು, ಇದು ಸಂವಿಧಾನಕ್ಕೆ ಮಾಡಿದ ಅಪಚಾರ ಎಂದು ಅಭಿಪ್ರಾಯಪಟ್ಟರು.

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟವರು. 4 ಬಾರಿ ಗುಜರಾತ್ ಮುಖ್ಯಮಂತ್ರಿಯಾಗಿದ್ದು, 2 ಬಾರಿ ಬಹುಮತ ಪಡೆದು ಜನರಿಂದ ಆಯ್ಕೆಯಾದ ಪ್ರಧಾನಮಂತ್ರಿ. ಅವರನ್ನು ಒಂದು ಸರಕಾರದ ಪ್ರಾಯೋಜಿತ ಕಾರ್ಯಕ್ರಮದಲ್ಲಿ ಟೀಕೆ ಮಾಡುವುದೇ ಸಂವಿಧಾನ ವಿರೋಧಿ ಕೃತ್ಯ ಎಂದು ತಿಳಿಸಿದರು.

ಪ್ರಧಾನಮಂತ್ರಿಯವರನ್ನು ಟೀಕಿಸಲು ನಿಮಗೆ ಬೇರೆ ವೇದಿಕೆಗಳಿವೆ. ಕಾರ್ಯಕ್ರಮದಲ್ಲಿ ಮಾತನಾಡಿದ ಎಲ್ಲ ಮುಖಂಡರು ಕೇವಲ ಪ್ರಧಾನಮಂತ್ರಿಯವರ ವಿರುದ್ಧ ಟೀಕೆ, ಅಪಪ್ರಚಾರ, ನಿಂದನೆಗೇ ಸರಕಾರಿ ಪ್ರಾಯೋಜಿತ ಕಾರ್ಯಕ್ರಮವನ್ನು ದುರ್ಬಳಕೆ ಮಾಡಿಕೊಂಡದ್ದು ಖಂಡನೀಯ. ಇದಕ್ಕಾಗಿ ಆಯೋಜಕರು ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು. ವಾಸ್ತವಿಕ ನೆಲೆಯಲ್ಲಿ ಸಂವಿಧಾನ ವಿರೋಧಿಯಾಗಿ ವರ್ತನೆ ಮಾಡಿರುವುದೇ ಕಾಂಗ್ರೆಸ್ ಪಕ್ಷ ಎಂದು ಆರೋಪಿಸಿದರು.

ಸಂವಿಧಾನಕ್ಕೆ 80ಕ್ಕೂ ಹೆಚ್ಚು ತಿದ್ದುಪಡಿ ಮಾಡಿದ್ದ ಕಾಂಗ್ರೆಸ್

ನಮ್ಮ ಸಂವಿಧಾನಕ್ಕೆ ಇದುವರೆಗೆ 106 ತಿದ್ದುಪಡಿಗಳಾಗಿವೆ. ಅದರಲ್ಲಿ 80ಕ್ಕೂ ಹೆಚ್ಚು ತಿದ್ದುಪಡಿ ಮಾಡಿರುವುದು ಕಾಂಗ್ರೆಸ್ ಅಧಿಕಾರದ ಅವಧಿಯಲ್ಲಿ. ಅದರಲ್ಲೂ ವಿಶೇಷವಾಗಿ ತುರ್ತು ಪರಿಸ್ಥಿತಿ ಹೇರಿಕೆ ಸಂದರ್ಭದಲ್ಲಿ, ಎಲ್ಲ ವಿರೋಧ ಪಕ್ಷಗಳ ನಾಯಕರನ್ನು ಜೈಲಿನಲ್ಲಿ ಇಟ್ಟ ಸಂದರ್ಭದಲ್ಲಿ, ನಾಗರಿಕ ಹಕ್ಕುಗಳ ದಮನ ಆದಾಗ, 1975-77ರ ತುರ್ತು ಪರಿಸ್ಥಿತಿ ಅವಧಿಯಲ್ಲೇ ಸಂವಿಧಾನದ 45 ತಿದ್ದುಪಡಿ ಮಾಡಲಾಗಿತ್ತು ಎಂದು ಸಿ.ಟಿ.ರವಿ ಅವರು ತಿಳಿಸಿದರು.

.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News