ವಿಪಕ್ಷ ನಾಯಕ ಆರ್.ಆಶೋಕ್ ವಿರುದ್ಧದ ಭೂಹಗರಣದ ದಾಖಲೆ ಬಿಡುಗಡೆ ಮಾಡಿದ ಕಾಂಗ್ರೆಸ್
ಬೆಂಗಳೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದಿಂದ ತಮಗೆ ಪರಿಹಾರದ ರೂಪದಲ್ಲಿ ಬಂದಿರುವ ನಿವೇಶನಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯರ ಪತ್ನಿ ಪಾವರ್ತಿ ವಾಪಸ್ ಕೊಟ್ಟಿರುವುದನ್ನೆ ದೊಡ್ಡ ಅಪರಾಧವೆಂದು ಅಬ್ಬರಿಸುತ್ತಿರುವ ವಿಪಕ್ಷ ನಾಯಕ ಆರ್.ಅಶೋಕ್, ‘ಸರಕಾರದ ಜಮೀನನ್ನು ಸರಕಾರಕ್ಕೆ ರಿರ್ಟನ್ ಗಿಫ್ಟ್ ಕೊಟ್ಟಿದ್ದನ್ನು ಮರೆತಿರುವಂತಿದೆ’ ಎಂದು ಸಂಪುಟ ಸಚಿವರು ತಿರುಗೇಟು ನೀಡಿದ್ದಾರೆ.
ಬುಧವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ವಿಪಕ್ಷ ನಾಯಕ ಆರ್.ಅಶೋಕ್ ವಿರುದ್ಧದ ಭೂ ಹಗರಣದ ದಾಖಲೆಗಳನ್ನು ಬಿಡುಗಡೆ ಮಾಡಿ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಕಾನೂನು ಸಚಿವ ಎಚ್.ಕೆ.ಪಾಟೀಲ್, ಕಂದಾಯ ಸಚಿವ ಕೃಷ್ಣ ಬೈರೇಗೌಡ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾತನಾಡಿ, ‘ಬೆಂಗಳೂರಿನ ಲೊಟ್ಟೆಗೊಲ್ಲಹಳ್ಳಿಯ ಸರ್ವೆ ನಂಬರ್ 10/1, 10/11 ಎಫ್1 ಮತ್ತು 10/11 ಎಫ್ 2ರ 32 ಗುಂಟೆ ಜಮೀನು ನೂರಾರು ಕೋಟಿ ರೂ.ಬೆಲೆ ಬಾಳುತ್ತದೆ. ಈ ಜಮೀನಿಗೆ ಸಂಬಂಧಿಸಿದಂತೆ ಬಿಡಿಎ 24/2/1977ರಲ್ಲಿ ಅಧಿಸೂಚನೆ ಹೊರಡಿಸಿತ್ತು. 27/2/1977ರಂದು ಮತ್ತೊಂದು ಅಧಿಸೂಚನೆ ಹಾಗೂ 31/8/1978ರಲ್ಲಿ ಅಂತಿಮ ಅಧಿಸೂಚನೆ ಹೊರಡಿಸಿತ್ತು ಎಂದು ಹೇಳಿದರು.
ಇದಾದ ನಂತರ 26/2/2003 ಹಾಗೂ 12/11/2007ರಂದು ಎರಡು ಶುದ್ಧ ಕ್ರಯ ಪತ್ರದ ಮೂಲಕ ಈ ಬಿಡಿಎ ಮಾಲಕತ್ವದ ಅಧಿಸೂಚಿತ ಜಾಗವನ್ನು ಮೂಲ ಮಾಲಕರಿಂದ ಅಶೋಕ್ ಖರೀದಿ ಮಾಡಿದ್ದಾರೆ. 16/10/2009ರಂದು ರಾಮಸ್ವಾಮಿ ಎಂಬವರು ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಈ ಜಮೀನನ್ನು ಡಿನೋಟಿಫೈ ಮಾಡುವಂತೆ ಅರ್ಜಿ ಸಲ್ಲಿಸಿದ್ದಾರೆ. ಆ ಪತ್ರದ ಮೇಲೆ ‘ಕೂಡಲೆ ಕಡತದಲ್ಲಿ ಮಂಡಿಸಿ’ ಎಂದು ಷರಾ ನಮೂದಿಸಿ ಯಡಿಯೂರಪ್ಪ ಆದೇಶ ನೀಡಿದ್ದಾರೆ ಎಂದು ಪರಮೇಶ್ವರ್ ವಿವರಿಸಿದರು.
ಅಲ್ಲದೇ, ಎರಡೇ ತಿಂಗಳಲ್ಲಿ ಆ ಜಮೀನನ್ನು ಡಿನೋಟಿಫೈ ಮಾಡಲಾಗುತ್ತದೆ. ಆನಂತರ, ನಿವೃತ್ತ ವಿಂಗ್ ಕಮಾಂಡರ್ ಜಿ.ವಿ.ಅತ್ರಿ ಎಂಬವರು ಲೋಕಾಯುಕ್ತದಲ್ಲಿ ಪ್ರಕರಣ ದಾಖಲು ಮಾಡುತ್ತಾರೆ. ವಿಷಯ ಗಂಭೀರವಾಗುತ್ತಿದ್ದಂತೆ ಅಶೋಕ್ ಬಿಡಿಎ ಮಾಲಕತ್ವದಲ್ಲಿರುವ ಆ ಜಾಗವನ್ನು 27/8/2011ರಂದು ರಿಜಿಸ್ಟರ್ ಗಿಫ್ಟ್ ಡೀಡ್ ಮೂಲಕ ಸರಕಾರಕ್ಕೆ ವಾಪಸ್ ಕೊಟ್ಟರು ಎಂದು ಅವರು ಹೇಳಿದರು.
ಈ ವಿವಾದ ಹೈಕೋರ್ಟ್ ಮೆಟ್ಟಿಲು ಏರಿದಾಗ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಹಾಗೂ ನ್ಯಾ.ಅರವಿಂದ ಕುಮಾರ್ ಅವರಿದ್ದ ವಿಭಾಗೀಯ ಪೀಠವು ಅಶೋಕ್ ಈಗಾಗಲೆ ಸರಕಾರಕ್ಕೆ ಜಮೀನು ವಾಪಸ್ ಕೊಟ್ಟಿರುವುದರಿಂದ ಯಾವುದೆ ತನಿಖೆಯ ಅಗತ್ಯವಿಲ್ಲ ಎಂದು ತೀರ್ಪು ಕೊಟ್ಟು ಅತ್ರಿ ಸಲ್ಲಿಸಿದ್ದ ಅರ್ಜಿಯನ್ನು ಇತ್ಯರ್ಥ ಮಾಡಿತು ಎಂದು ಪರಮೇಶ್ವರ್ ತಿಳಿಸಿದರು.
ಸಿದ್ದರಾಮಯ್ಯ ಅವರ ಪತ್ನಿ ತಮಗೆ ಪರಿಹಾರ ರೂಪವಾಗಿ ಬಂದಿರುವ ನಿವೇಶನಗಳನ್ನು ವಾಪಸ್ ನೀಡಿರುವ ಕುರಿತು ಅಶೋಕ್ ಯಾವ ರೀತಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ನಿಮ್ಮ ಪ್ರಕರಣದಲ್ಲಿ ಹೈಕೋರ್ಟ್ ಕೊಟ್ಟಿರುವ ತೀರ್ಪನ್ನು ಯಾವ ರೀತಿ ಅರ್ಥೈಸಿಕೊಂಡಿದ್ದೀರಾ? ಸಿದ್ದರಾಮಯ್ಯನವರ ರಾಜೀನಾಮೆ ಕೇಳೋಕೆ ನಿಮಗೂ ನೈತಿಕತೆ ಇರಬೇಕಲ್ಲ? ಎಂದು ಅವರು ಪ್ರಶ್ನಿಸಿದರು.
ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎ.ಕೆ.ಪಾಟೀಲ್ ಮಾತನಾಡಿ, ‘ಬಿಡಿಎ ಆಸ್ತಿಯನ್ನು ನಿಮ್ಮ ಹೆಸರಿಗೆ ಮಾಡಿಕೊಂಡು, ಸುದೀರ್ಘ ಅವಧಿಗೆ ಉಪಯೋಗಿಸಿಕೊಂಡು ಅನಿವಾರ್ಯತೆ ಎದುರಾದಾಗ ಸರಕಾರಕ್ಕೆ ವಾಪಸ್ ಕೊಟ್ಟಿದ್ದೀರಾ. ಪಾವರ್ತಿಯವರು ತಮ್ಮ ಜಮೀನಿಗೆ ಪರಿಹಾರವಾಗಿ ಬಂದ ನಿವೇಶನಗಳನ್ನು ವಾಪಸ್ ಕೊಟ್ಟರೆ ತಪ್ಪೇ? ಮುಡಾ ಪ್ರಕರಣದಲ್ಲಿ ಜನರ ಮನಸ್ಸಿನಲ್ಲಿ ಸಂಶಯ ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ. ಅದು ಎಂದಿಗೂ ಯಶಸ್ವಿಯಾಗುವುದಿಲ್ಲ. ನಿಮ್ಮ ವಿರುದ್ಧದ ಆರೋಪಗಳಿಗೆ ನೀವು ಉತ್ತರ ಕೊಡಲೇಬೇಕು ಎಂದು ಆಗ್ರಹಿಸಿದರು.
ಕಂದಾಯ ಸಚಿವ ಕೃಷ್ಣ ಬೈರೇಗೌಡ ಮಾತನಾಡಿ, ‘2003ರಲ್ಲಿ ಈ ಆಸ್ತಿಯನ್ನು ಆರ್.ಅಶೋಕ್, ಗುಳ್ಳಮ್ಮ ಎಂಬವರ ಕುಟುಂಬದವರಿಂದ ಶುದ್ಧ ಕ್ರಯದ ಮೂಲಕ ಖರೀದಿ ಮಾಡಿದ್ದಾರೆ. ಬಿಡಿಎ ವಶದಲ್ಲಿರುವ ಜಮೀನನ್ನು ಹೇಗೆ ಶುದ್ಧ ಕ್ರಯದ ಮೂಲಕ ಖರೀದಿ ಮಾಡಿದರು ಎಂಬುದಕ್ಕೆ ಅವರೇ ಉತ್ತರಿಸಬೇಕು.
ಆದರೆ, ಈ ಜಮೀನು ಡಿನೋಟಿಫೈ ಮಾಡಲು ಯಡಿಯೂರಪ್ಪ ಅವರಿಗೆ ಅರ್ಜಿ ಕೊಟ್ಟಿದ್ದು ರಾಮಸ್ವಾಮಿ. ಬೇನಾಮಿ ವ್ಯಕ್ತಿಯನ್ನು ಬಳಸಿಕೊಂಡು ಕೋಟ್ಯಂತರ ರೂ.ಬೆಲೆ ಬಾಳುವ ಜಮೀನನ್ನು ಡಿನೋಟಿಫೈ ಮಾಡಿಸಿಕೊಂಡಿದ್ದು ಕಾನೂನು ಬಾಹಿರ ಅಲ್ಲವೇ?, ಅಕ್ರಮ ಅಲ್ಲವೇ? ಗುಳ್ಳಮ್ಮ ಕುಟುಂಬದ ಯಾವ ಸದಸ್ಯರೂ ಈ ಜಮೀನಿಗೆ ಡಿನೋಟಿಫೈ ಮಾಡಲು ಅರ್ಜಿ ಹಾಕಿಲ್ಲ ಎಂದು ಹೇಳಿದರು.
ಮುನಿಸ್ವಾಮಪ್ಪ ಎಂಬವರ ಹೆಸರಿಗೆ ಜಮೀನು ಡಿನೋಟಿಫೈ ಆಗುತ್ತದೆ. ಆದರೆ, ಜಮೀನಿನ ಖಾತೆ ಅಶೋಕ್ ಹೆಸರಿಗೆ ಆಗುತ್ತದೆ. ಹೆಜ್ಜೆ ಹೆಜ್ಜೆಗೂ ಇಲ್ಲಿ ಅಕ್ರಮಗಳು ನಡೆದಿವೆ. ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು, ಸರಕಾರ ವಜಾಗೊಳಿಸಬೇಕು. ರಾಜ್ಯದ ಜನ ಆಯ್ಕೆ ಮಾಡಿರುವ ಬಹುಮತದ ಸರಕಾರವನ್ನು ಕಿತ್ತು ಹಾಕಬೇಕು. ವಾಮ ಮಾರ್ಗ ಹುಡುಕಿ ಬಿಜೆಪಿ ಸರಕಾರ ತಂದು, ಇಂತಹ ಡಿನೋಟಿಫಿಕೇಷನ್‍ಗಳನ್ನು ಮಾಡಬೇಕೆ? ಎಂದು ಕೃಷ್ಣ ಬೈರೇಗೌಡ ಪ್ರಶ್ನಿಸಿದರು.
ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಉಪಸ್ಥಿತರಿದ್ದರು.
‘ಮುಡಾ ಪ್ರಕರಣದಲ್ಲಿ ಈಡಿಯನ್ನು ತರಲಾಗಿದೆ. ಇದು ಬಿಜೆಪಿಯ ಅಂಗ ಸಂಸ್ಥೆ. ನಿವೇಶನಗಳನ್ನು ವಾಪಸ್ ಕೊಟ್ಟಿರುವುದು ತಪ್ಪಿನ ಸಾಕ್ಷಿ ಎಂದು ಹೇಳುವ ಆರ್.ಅಶೋಕ್ ಅವರು, ಲೊಟ್ಟೆಗೊಲ್ಲಹಳ್ಳಿ ಜಮೀನಿನ ವಿಚಾರದಲ್ಲಿ ವಿಪಕ್ಷ ನಾಯಕ ಹಾಗೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರಾ? ನೀವು ರಾಜೀನಾಮೆ ಕೊಟ್ಟು ಪ್ರಶ್ನಿಸಿದರೆ ಮಾತನಾಡಲು ಹಕ್ಕು ಇರುತ್ತದೆ’
-ಕೃಷ್ಣಬೈರೇಗೌಡ ಕಂದಾಯ ಸಚಿವ