ಭ್ರಷ್ಟಾಚಾರಿಗಳಿಂದ ಭ್ರಷ್ಟಾಚಾರಿಗಳಿಗೋಸ್ಕರ ಭ್ರಷ್ಟಾಚಾರಿಗಳೇ ನಡೆಸುತ್ತಿರುವ ಪಾದಯಾತ್ರೆ: ಬಿಜೆಪಿಯ ಪಾದಯಾತ್ರೆಗೆ ಡಿಕೆಶಿ ಟೀಕೆ

Update: 2024-08-02 14:31 GMT

ಬೆಂಗಳೂರು: ಬಿಜೆಪಿ-ಜೆಡಿಎಸ್ ‘ಮೈಸೂರು ಚಲೋ ಪಾದಯಾತ್ರೆ’ಗೆ ಮೊದಲೇ ಕಾಂಗ್ರೆಸ್ ಜನಾಂದೋಲನ ಆರಂಭವಾಗಿದೆ. ‘ಭ್ರಷ್ಟಾಚಾರಿಗಳಿಂದ ಭ್ರಷ್ಟಾಚಾರಿಗಳಿಗೋಸ್ಕರ ಭ್ರಷ್ಟಾಚಾರಿಗಳೇ ಪಾದಯಾತ್ರೆ ನಡೆಸುತ್ತಿವೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.

ಶುಕ್ರವಾರ ಬಿಡದಿಯಲ್ಲಿ ಆರಂಭವಾದ ಕಾಂಗ್ರೆಸ್ ಜನಾಂದೋಲನ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಈ ಪಾದಯಾತ್ರೆ ಮೂಲಕ ನಮಗೆ ಈ ಪವಿತ್ರವಾದ ಜನಾಂದೋಲನ ಹಮ್ಮಿಕೊಳ್ಳಲು ಅವಕಾಶ ಮಾಡಿಕೊಟ್ಟಿರುವ ಬಿಜೆಪಿ-ಜೆಡಿಎಸ್ ನಾಯಕರಿಗೆ ಅಭಿನಂದನೆ ಸಲ್ಲಿಸುತ್ತೇನೆ. ನೀವು ಈ ಪಾದಯಾತ್ರೆ ಹಮ್ಮಿಕೊಳ್ಳದಿದ್ದರೆ, ಜೆಡಿಎಸ್, ಬಿಜೆಪಿ ಜತೆ ವಿಲೀನ ಮಾಡದಿದ್ದರೆ, ನಾವು ಈ ಹೋರಾಟ ಮಾಡಲು ಸಾಧ್ಯವಾಗುತ್ತಿರಲಿಲ್ಲ’ ಎಂದು ಲೇವಡಿ ಮಾಡಿದರು.

‘ಬಿಜೆಪಿ-ಜೆಡಿಎಸ್‍ನವರು ಪಾದಯಾತ್ರೆ ಮೂಲಕ ಇಲ್ಲಿಗೆ ಬರುತ್ತಿದ್ದಾರೆ. ಇಲ್ಲಿಗೆ ಬಂದಾಗ ಅವರು ನಮ್ಮ ಪ್ರಶ್ನೆಗಳಿಗೆ ಉತ್ತರ ನೀಡಬೇಕು. ಬಿಜೆಪಿ ಅವಧಿಯಲ್ಲಿ ಭೋವಿ ನಿಗಮದಲ್ಲಿ 87ಕೋಟಿ ರೂ., ಕೃಷಿ ಮಾರುಕಟ್ಟೆಗಳಲ್ಲಿ 47 ಕೋಟಿ ರೂ.ಅಕ್ರಮ ನಡೆದಿದೆ. ಈ ಹಗರಣ ನಡೆದಾಗ ಯಾರು ಮುಖ್ಯಮಂತ್ರಿ, ಯಾರು ಮಂತ್ರಿ, ಯಾರು ನಿಗಮದ ಅಧ್ಯಕ್ಷರಾಗಿದ್ದರು? ಈ ಬಗ್ಗೆ ನೀವು ಉತ್ತರ ನೀಡಬೇಕು. ನೀವು ಹೇಳದಿದ್ದರೆ ನಾವು ಹೇಳುತ್ತೇವೆ’ ಎಂದು ಶಿವಕುಮಾರ್ ಸವಾಲು ಹಾಕಿದರು.

‘ಅರಸು ಟ್ರಕ್ ಟರ್ಮಿನಲ್ ನಿಗಮದಲ್ಲಿ ಪರಿಷತ್ ಮಾಜಿ ಸದಸ್ಯ ಬಿಜೆಪಿಯ ವೀರಯ್ಯ 47 ಕೋಟಿ ರೂ. ನುಂಗಿದ್ದಾರೆ. ಈ ಅಕ್ರಮದಲ್ಲಿ ಭಾಗಿಯಾಗಿದ್ದಕ್ಕೆ ಆತ ಜೈಲು ಸೇರಿದ್ದಾನೆ. ಬಿಜೆಪಿ-ಜೆಡಿಎಸ್‍ನವರು ಈ ಅಕ್ರಮದ ಬಗ್ಗೆ ಯಾಕೆ ಹೋರಾಟ ಮಾಡುತ್ತಿಲ್ಲ? ಈ ಅಕ್ರಮದ ತನಿಖೆಯನ್ನು ಅವರೆ ಯಾಕೆ ತನಿಖೆ ಮಾಡಿಸಲಿಲ್ಲ? ಹೀಗೆ ಅವರ ಕಾಲದಲ್ಲಿ ಆಗಿರುವ ಅಕ್ರಮಗಳ ದೊಡ್ಡಪಟ್ಟಿಯೇ ನಮ್ಮ ಬಳಿ ಇವೆ. ಕುಮಾರಣ್ಣ, ಅಶೋಕಣ್ಣಾ, ವಿಜಯೇಂದ್ರ, ಅಶ್ವತ್ಥ ನಾರಾಯಣ, ಸಿ.ಟಿ.ರವಿ ನೀವುಗಳು ನಮ್ಮ ಪ್ರಶ್ನೆಗಳಿಗೆ ಪಾದಯಾತ್ರೆ ವೇಳೆ ಉತ್ತರ ನೀಡಬೇಕು ಎಂದು ಅವರು ಆಗ್ರಹಿಸಿದರು.

ಕಾಂಗ್ರೆಸ್ ಜನಾಂದೋಲನ ಸಭೆ ನಾಳೆ(ಆ.3) ರಾಮನಗರ, ನಾಡಿದ್ದು ಚನ್ನಪಟ್ಟಣ, ಆಚೆ ನಾಡಿದ್ದು ಮದ್ದೂರು, ಆನಂತರ ಮಂಡ್ಯ ಹಾಗೂ ಮೈಸೂರಿನಲ್ಲಿ ಮಾಡಿ ಪ್ರಶ್ನೆ ಕೇಳುತ್ತೇವೆ. ನಾಳೆಯಿಂದ ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳೂ ಬರುತ್ತಾರೆ. ನೆರೆ ಪೀಡಿತ ಪ್ರದೇಶಗಳ ಬಗ್ಗೆ ಮೇಲ್ವಿಚಾರಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅವರು ಇಂದಿನ ಕಾರ್ಯಕ್ರಮಕ್ಕೆ ಬಂದಿಲ್ಲ ಎಂದು ಡಿಕೆ ಶಿವಕುಮಾರ್‌ ಹೇಳಿದರು.

 

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News