‘ಧರ್ಮಾಧಾರಿತ ಯೋಜನೆ’ ಎಂದು ತಪ್ಪು ಮಾಹಿತಿ ಹರಡಿದ್ದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

Update: 2023-09-09 18:09 GMT

ಬೆಂಗಳೂರು, ಸೆ. 9: ‘ಗಾಂಪರ ಗುಂಪಿನ ಎಳೆಯ ಸದಸ್ಯ ತೇಜಸ್ವಿ ಸೂರ್ಯ ಅವರೇ, ಅಲ್ಪಸಂಖ್ಯಾತರೆಂದರೆ ಕೇವಲ ಮುಸ್ಲಿಮರು ಮಾತ್ರವೇ? ಅಭಿವೃದ್ಧಿ ಎನ್ನುವುದು ಜನ ಕೇಂದ್ರಿತವಾಗಿರಬೇಕಲ್ಲವೇ?, ಬಡ ಜನರ ಬದುಕು ಹಸನಾಗುವುದನ್ನು ಅಭಿವೃದ್ಧಿ ಎಂದು ಒಪ್ಪಿಕೊಳ್ಳಲಾಗದಿರುವುದೇಕೆ?’ ಎಂದು ಕಾಂಗ್ರೆಸ್ ಸಂಸದ ತೇಜಸ್ವಿ ಸೂರ್ಯ ವಿರುದ್ದ ವಾಗ್ದಾಳಿ ನಡೆಸಿದೆ.

ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿಗಳಿಗಾಗಿ (ಮುಸ್ಲಿಮ್, ಕ್ರಿಶ್ಚಿಯನ್, ಜೈನ, ಬೌದ್ಧ, ಸಿಖ್, ಪಾರ್ಸಿ) ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವು ಇತ್ತೀಚೆಗೆ ಟ್ಯಾಕ್ಸಿ / ಗೂಡ್ಸ್ / ಪ್ಯಾಸೆಂಜರ್ ಆಟೋ ರಿಕ್ಷಾ ವಾಹನ ಖರೀದಿಗಾಗಿ 3 ಲಕ್ಷ ರೂ. ಸಹಾಯಧನ ಸೌಲಭ್ಯ ನೀಡುವ ಯೋಜನೆಯನ್ನು ಪ್ರಕಟಿಸಿತ್ತು. ಇದನ್ನು ಟ್ವಿಟರ್‌ ನಲ್ಲಿ ಹಂಚಿಕೊಂಡಿರುವ ತೇಜಸ್ವಿ ಸೂರ್ಯ, ಇದು ‘ಧರ್ಮಾಧಾರಿತ ಯೋಜನೆ’ ಎಂದು ತಪ್ಪು ಮಾಹಿತಿ ಹರಡಿದ್ದರು.

ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ದಲಿತರ ಏಳಿಗೆಗೂ ಆಕ್ಷೇಪ, ಅಲ್ಪಸಂಖ್ಯಾತ ಸಮುದಾಯಗಳ ಅಭಿವೃದ್ಧಿಗೂ ಆಕ್ಷೇಪ ಮಾಡುವ ನಿಮ್ಮ ಉದ್ದೇಶವಾದರೂ ಏನು?, ದೇವಾಲಯಗಳ ಅರ್ಚಕರ ತಸ್ತಿಕ್ ಹಣವನ್ನೂ ಏರಿಸಿದೆ ನಮ್ಮ ಸರಕಾರ, ಇದಕ್ಕೂ ನಿಮ್ಮ ಆಕ್ಷೇಪ ಇದೆಯೇ?, ಹಾಲಿನ ದರ ಏರಿಕೆಯ ಲಾಭ ರೈತರ ಕೈ ಸೇರುವುದು ಇಷ್ಟವಿಲ್ಲವೇ?, ವಿದ್ಯುತ್ ದರ ಏರಿಸಿದ್ದು ಹಿಂದಿನ ಬಿಜೆಪಿ ಸರಕಾರ ಎನ್ನುವುದು ತಿಳಿದಿಲ್ಲವೇ?’ ಎಂದು ಪ್ರಶ್ನಿಸಿದೆ.

‘ತೇಜಸ್ವಿ ಸೂರ್ಯ ಅವರೇ, ಗ್ಯಾಸ್ ಬೆಲೆ, ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯ ಬಗ್ಗೆ ಮಾತಾಡುವುದಿಲ್ಲವೇಕೆ? ದುಬಾರಿ ಜಿಎಸ್ಟಿ ಬಗ್ಗೆ ತುಟಿ ಬಿಚ್ಚುವುದಿಲ್ಲವೇಕೆ?, ಜನರ ಹಣವನ್ನು ಜನರಿಗೇ ಕೊಡುವ ಬಗ್ಗೆ ಇಷ್ಟೊಂದು ಅಸಹನೆ ತೋರುವ ಬಿಜೆಪಿಗರ ಪ್ರಕಾರ ಜನರ ಹಣವನ್ನು ಉದ್ಯಮಿಗಳ ಸಾಲಮನ್ನಾ ಮಾಡಲು ಬಳಸುವುದು ಅಭಿವೃದ್ಧಿಯೇ?’ ಎಂದು ಕಾಂಗ್ರೆಸ್ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News