ಹರೀಶ್ ಪೂಂಜಾಗೆ ಕಾಂಗ್ರೆಸ್ ಮುಖಂಡರ ಸ್ವಾಗತ!

Update: 2024-09-11 08:45 GMT

ರಾಯಚೂರು: ಕಾಂಗ್ರೆಸ್ ನಾಯಕರು ಆಯೋಜಿಸಿದ ಗಣೇಶೋತ್ಸವಕ್ಕೆ ಬೆಳ್ತಂಗಡಿಯ ಬಿಜೆಪಿ ಶಾಸಕ ಹರೀಶ್ ಪೂಂಜಾ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಗಿದ್ದು, ವಿವಾದಕ್ಕೆ ಕಾರಣವಾಗಿದೆ.

ದ್ವೇಷ ಭಾಷಣಕಾರ, ಪೊಲೀಸ್ ಠಾಣೆಗೆ ನುಗ್ಗಿ ಪೊಲೀಸರಿಗೇ ಬೆದರಿಕೆ ಹಾಕುವ ಬಿಜೆಪಿ ಶಾಸಕನನ್ನು ಗಣೇಶೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಕರೆದು ಸ್ವಾಗತಿಸುತ್ತಿರುವವರು ಎಷ್ಟು ಸರಿ ಎಂದು ಕಾಂಗ್ರೆಸ್‌ ನಲ್ಲೇ ಅಸಮಾಧಾನ ವ್ಯಕ್ತವಾಗಿದೆ ಎನ್ನಲಾಗಿದೆ.

ಬಿಜೆಪಿ ಶಾಸಕ ಹರೀಶ್ ಪೂಂಜಾರನ್ನು ಮುಖ್ಯ ಅತಿಥಿಯಾಗಿ ಆಮಂತ್ರಿಸಿ ಭರ್ಜರಿಯಾಗಿ ಸ್ವಾಗತಿಸಿ ಬೋರ್ಡು ಹಾಕಿರುವವರು ಕಾಂಗ್ರೆಸ್ ಸರಕಾರದಲ್ಲಿ ಸಚಿವರಾದ ಎನ್ ಎಸ್ ಬೋಸರಾಜು, ರಾಯಚೂರು ಜಿಲ್ಲೆಯ ಮಾನವಿಯ ಕಾಂಗ್ರೆಸ್ ಶಾಸಕ ಹಂಪಯ್ಯ ಸಾಹುಕಾರ, ಕಾಂಗ್ರೆಸ್ ಎಮ್ಮೆಲ್ಸಿ ಬಸನಗೌಡ ಬಾದರ್ಲಿ, ಸಚಿವ ಬೋಸರಾಜು ಅವರ ಪುತ್ರ, ಕಾಂಗ್ರೆಸ್ ಮುಖಂಡ ರವಿ ಬೋಸರಾಜು ಹಾಗು ಇನ್ನೋರ್ವ ಕಾಂಗ್ರೆಸ್ ಮುಖಂಡ ಆಲ್ದಾಳ್ ವೀರಭದ್ರಿಯ ಮಗ ಬಸವನ ಗೌಡ ಆಲ್ದಾಳ್.

ರಾಯಚೂರಿನ ಮಾನವಿಯಲ್ಲಿ ಶ್ರೀ ಛತ್ರಪತಿ ಶಿವಾಜಿ ಯುವಕರ ಸೇನೆ ಆಯೋಜಿಸಿರುವ ಗಣೇಶೋತ್ಸವಸದ ವಿಸರ್ಜನಾ ಕಾರ್ಯಕ್ರಮದ ಮುಖ್ಯ ಸಂಘಟಕ ಅಲ್ಲಿನ ಕಾಂಗ್ರೆಸ್ ಮುಖಂಡ ಆಲ್ದಾಳ್ ವೀರಭದ್ರಿಯ ಪುತ್ರ ಬಸವನ ಗೌಡ ಆಲ್ದಾಳ್. ಆದರೆ ಆ ಕಾರ್ಯಕ್ರಮದ ಮುಖ್ಯ ಅತಿಥಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಬಿಜೆಪಿ ಶಾಸಕ ಹರೀಶ್ ಪೂಂಜಾ ಆಹ್ವಾನಿಸಿರುವುದಕ್ಕೆ ಅಪಸ್ವರ ಕೇಳಿ ಬಂದಿದೆ.

ಬುಧವಾರ ಮಾನವಿಯ ಎಪಿಎಂಸಿ ಗೇಟ್ ಬಳಿ ನಡೆಯುವ ಬೃಹತ್ ಗಣೇಶ ವಿಸರ್ಜನೆ ಕಾರ್ಯಕ್ರಮದ ಬ್ಯಾನರ್‌ ವೈರಲ್‌ ಆಗಿದೆ.

ಮುಸಲ್ಮಾನರ ವಿರುದ್ಧ ದ್ವೇಷ ಭಾಷಣದಿಂದ ಅಥವಾ ಪೊಲೀಸರು, ಅಧಿಕಾರಿಗಳ ವಿರುದ್ಧ ಬೆದರಿಕೆ ಹಾಕುವ ಮೂಲಕವೇ ಸುದ್ದಿಯಲ್ಲಿರುವ ಹರೀಶ್ ಪೂಂಜಾ ಅವರನ್ನು ಅತಿಥಿಯಾಗಿ ಆಹ್ವಾನಿಸಿದ್ದಕ್ಕೆ ಕಾಂಗ್ರೆಸ್‌ ನಾಯಕರು ಟೀಕೆಗೆ ಗುರಿಯಾಗಿದ್ದಾರೆ.

ಒಂದು ಕಡೆ ದ್ವೇಷ ಭಾಷಣ ಮಾಡುವ ಬಿಜೆಪಿ, ಸಂಘ ಪರಿವಾರದ ಮುಖಂಡರು ಹಾಗು ಜನಪ್ರತಿನಿಧಿಗಳ ಬಗ್ಗೆ ರಾಜ್ಯ ಕಾಂಗ್ರೆಸ್ ಸರಕಾರ ಮೃದು ಧೋರಣೆ ಅನುಸರಿಸುತ್ತಿದೆ , ಅವರ ವಿರುದ್ಧ ಸೂಕ್ತ ಕಾನೂನು ಕ್ರಮವೂ ಇಲ್ಲ ಎಂದು ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

Full View

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News