ದೇವೇಗೌಡರನ್ನು ಕಾಂಗ್ರೆಸ್ ಪ್ರಧಾನಿ ಮಾಡಿದೆ, ಆದರೂ ಯಾಕೆ ಕಣ್ಣೀರು ಹಾಕುತ್ತಿದ್ದಾರೋ ಗೊತ್ತಿಲ್ಲ: ಡಿ.ಕೆ ಶಿವಕುಮಾರ್
ಬೆಂಗಳೂರು: “ದೇವೇಗೌಡರು ಕಣ್ಣೀರು ಹಾಕುವಂತೆ ಯಾರು ಏನು ಮಾಡಿದ್ದಾರೆ?. ಅವರನ್ನು ಕಾಂಗ್ರೆಸ್ ಪಕ್ಷ ಪ್ರಧಾನಿ ಮಾಡಿದೆ. ಆದರೂ ಕಣ್ಣೀರು ಯಾಕೆ ಹಾಕುತ್ತಿದ್ದಾರೆ ಗೊತ್ತಿಲ್ಲ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ವಿಸಿಕೆ ಪಕ್ಷದ ಅಧ್ಯಕ್ಷರು ಹಾಗೂ ಸಂಸದರಾದ ತೋಳ್ಕಪ್ಪಿಯನ್ ತಿರುಮವಳವನ್ ಅವರು ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಸದಾಶಿವನಗರ ನಿವಾಸಕ್ಕೆ ಮಂಗಳವಾರ ಭೇಟಿ ನೀಡಿ ಕಾಂಗ್ರೆಸ್ ಪಕ್ಷ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಬೆಂಬಲ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಉತ್ತರಿಸಿದರು.
ಈ ವಯಸ್ಸಿನಲ್ಲಿ ನನಗೆ ಈ ರೀತಿ ಮಾಡಿದ್ದಾರೆ ಎಂದು ದೇವೇಗೌಡರು ಹಾಸನದಲ್ಲಿ ಕಣ್ಣೀರು ಹಾಕಿರುವ ಬಗ್ಗೆ ಮಾಧ್ಯಮಗಳು ಕೇಳಿದಾಗ, “ಅವರನ್ನು ಮುಖ್ಯಮಂತ್ರಿ ಮಾಡಿದ್ದು ಹಾಸನ ಜಿಲ್ಲೆಯಲ್ಲ, ನಮ್ಮ ರಾಮನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆ. ಹೀಗಾಗಿ ಅವರು ಕಣ್ಣೀರು ಹಾಕುವ ಪರಿಸ್ಥಿತಿ ಇಲ್ಲ. ಅವರಿಗೆ ತಮ್ಮ ಕೊಡುಗೆ ಬಗ್ಗೆ ಹೇಳಲು ಆಗುವುದಿಲ್ಲ. ಅವರು ಏನೇ ಪ್ರಯತ್ನ ಮಾಡಲಿ, ಅವರು ಹೇಳಿರುವಂತೆ ನಾಲ್ಕು ಸೀಟು ಬರುವುದಿಲ್ಲ. ಮೂರು ಅಧಿಕೃತ, ಒಂದು ಅನಧಿಕೃತ ಸೀಟುಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲಲಿದ್ದಾರೆ” ಎಂದು ತಿಳಿಸಿದರು.
ಬಿಜೆಪಿ ಪಿಕ್ ಪಾಕೆಟ್ ಮಾಡಿ ಕಾಂಗ್ರೆಸ್ ಮೇಲೆ ಹೇಳುತ್ತಿದ್ದಾರೆ:
“ಸುಪ್ರೀಂ ಕೋರ್ಟ್ ನಮಗೆ ನ್ಯಾಯ ಕೊಟ್ಟಿದ್ದು, ಬರ ಪರಿಹಾರ ನೀಡಲು ಕೇಂದ್ರ ಸರ್ಕಾರ ಕೂಡ ಒಪ್ಪಿಕೊಂಡಿದೆ. ನಮ್ಮ ಸರ್ಕಾರ ಜನರ ಜೇಬನ್ನು ಪಿಕ್ ಪಾಕೆಟ್ ಮಾಡುತ್ತಿದೆ ಎಂದು ಬಿಜೆಪಿ ಜಾಹೀರಾತು ನೀಡಿದೆ. ಅವರು ಮಾಡಿರುವ ಪಿಕ್ ಪಾಕೇಟ್ ಅನ್ನು ನಮ್ಮ ಮೇಲೆ ಆರೋಪಿಸುತ್ತಿದ್ದಾರೆ. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಶೇ40 ಕಮಿಷನ್ ಮೂಲಕ ಪಿಕ್ ಪಾಕೆಟ್ ಮಾಡಿದ್ದಾರೆ. ನಮ್ಮ ಸರ್ಕಾರದ ಅವಧಿಯಲ್ಲಿ ವಿದ್ಯುತ್ ಬಿಲ್ ಕಡಿಮೆ ಮಾಡಿದ್ದೇವೆ. ಯೂನಿಟ್ ಬೆಲೆ 1.10 ರೂ. ಕಡಿಮೆ ಮಾಡಿದ್ದು, 200 ಯೂನಿಟ್ ವರೆಗೂ ಉಚಿತ ವಿದ್ಯುತ್ ನೀಡುತ್ತಿದ್ದೇವೆ. ಅವರ ಜಾಹೀರಾತು ನೋಡಿ ನಾಚಿಕೆಯಾಗುತ್ತಿದೆ. ನಮ್ಮ ಚೊಂಬಿನ ಜಾಹೀರಾತು ಅವರಿಂದ ಅರಗಿಸಿಕೊಳ್ಳಲು ಆಗುತ್ತಿಲ್ಲ. ಅವರಿಗೆ ಒಳ್ಳೆಯದಾಗಲಿ” ಎಂದು ತಿಳಿಸಿದರು.
“ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವರು ಎಲ್ಲಿ ಬೇಕಾದರೂ ಹೋಗಿ ಪ್ರಚಾರ ಮಾಡಲಿ. ನಾವು ನಿನ್ನೆ ಮೊನ್ನೆಯಿಂದ ರಾಜಕಾರಣ ಮಾಡುತ್ತಿಲ್ಲ. ಚುನಾವಣೆ ಫಲಿತಾಂಶದ ಮರುದಿನದಿಂದಲೇ ನಾವು ನಮ್ಮ ಸೇವೆ ಮಾಡುತ್ತಿದ್ದೇವೆ. ಕೋವಿಡ್ ಸಮಯದಲ್ಲಿ ಹೆಣಗಳ ಅಂತ್ಯ ಸಂಸ್ಕಾರ ಮಾಡಿದ್ದೇವೆ. ಜನರಿಗೆ ಉಚಿತ ಔಷಧಿ, ಅಕ್ಕಿ ನೀಡಿದ್ದೇವೆ. ಜನ ಉಪಕಾರ ಸ್ಮರಣೆ ಮಾಡಲಿದ್ದಾರೆ. ಅವರು ಚುನಾವಣೆ ಇದೆ ಎಂದು ಪದೇ ಪದೆ ಬರುತ್ತಾರೆ. ಅವರು ಬರಲಿ ಅವರನ್ನು ನಾವು ಸ್ವಾಗತಿಸುತ್ತೇವೆ. ಶುಭಕೋರುತ್ತೇವೆ” ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷಕ್ಕೆ ವಿ.ಸಿ.ಕೆ ಬೆಂಬಲ:
“ಇಂಡಿಯಾ ಮೈತ್ರಿಕೂಟದ ನಮ್ಮ ಸ್ನೇಹಿತರು, ವಿಸಿಕೆ ಪಕ್ಷದ ಅಧ್ಯಕ್ಷರು, ತಮಿಳುನಾಡಿನ ಹಿರಿಯ ಸಂಸದರಾದ ತೋಳ್ಕಪ್ಪಿಯನ್ ತಿರುಮವಳವನ್ ಅವರು ಇಂದು ನಮ್ಮ ಪಕ್ಷದ ಅಭ್ಯರ್ಥಿಗಳು ಹಾಗೂ ಪಕ್ಷಕ್ಕೆ ಬೆಂಬಲ ನೀಡಲು ಬಂದಿದ್ದಾರೆ. ಕಾಂಗ್ರೆಸ್ ಪಕ್ಷದ ಪರವಾಗಿ ಅವರನ್ನು ಸ್ವಾಗತಿಸುತ್ತೇನೆ. ಇವರ ಪಕ್ಷದಿಂದ ಬೆಂಗಳೂರು ಗ್ರಾಮಾಂತರದಲ್ಲಿ ಚಂದ್ರಶೇಖರ್, ಕೋಲಾರದಲ್ಲಿ ಎಂ.ಸಿ ವೇಣು, ಬೆಂಗಳೂರು ದಕ್ಷಿಣದಲ್ಲಿ ರಾಜಕುಮಾರ್ ಅವರು ಸ್ಪರ್ಧಿಸಿದ್ದರು. ಈಗ ಅವರು ಸ್ಪರ್ಧೆಯಿಂದ ನಿವೃತ್ತಿ ಘೋಷಿಸಿದ್ದಾರೆ. ಆ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸುತ್ತಿದ್ದಾರೆ. ಇವರು ಡಿ.ಕೆ ಸುರೇಶ್ ಅವರಿಗೆ ಆತ್ಮೀಯರಾಗಿದ್ದು, ಅವರ ಪರವಾಗಿ ಇಂದು ಪ್ರಚಾರ ಮಾಡಲಿದ್ದಾರೆ” ಎಂದರು.