ಕೇಂದ್ರ ಸರಕಾರದ ವಿರುದ್ಧ ‘ಖಾಲಿ ಚೊಂಬು’ ಹಿಡಿದು ಬೀದಿಗಳಿದ ಕಾಂಗ್ರೆಸ್

Update: 2024-04-20 18:10 GMT

ಬೆಂಗಳೂರು: ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ನಾಲ್ಕೈದು ದಿನ ಬಾಕಿ ಇದೆ, ಈ ಮಧ್ಯೆಯೇ ರಾಜಕೀಯ ಪಕ್ಷಗಳ ಮುಖಂಡರ ನಡುವೆ ಆರೋಪ-ಪ್ರತ್ಯಾರೋಪಗಳು ತಾರಕಕ್ಕೇರಿವೆ. ಕೇಂದ್ರ ಸರಕಾರದ ತೆರಿಗೆ ಅನ್ಯಾಯದ ವಿರುದ್ಧ ಕಾಂಗ್ರೆಸ್ ಮುಖಂಡರು-ಕಾರ್ಯಕರ್ತರು ‘ಖಾಲಿ ಚೊಂಬು’ ಹಿಡಿದು ಬೀದಿಗಿಳಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶನಿವಾರ ಇಲ್ಲಿನ ಬ್ಯಾಟರಾಯನಪುರ, ಹೆಬ್ಬಾಳ ಹಾಗೂ ಪ್ರಧಾನಿ ಮೋದಿ ಪಾಲ್ಗೊಳ್ಳಲಿದ್ದ ಅರಮನೆ ಮೈದಾನದ ಸಮೀಪದ ಮೇಖ್ರಿ ವೃತ್ತ ಸೇರಿದಂತೆ ನಗರದ ವಿವಿಧೆಡೆಗಳಲ್ಲಿ ಖಾಲಿ ಚೊಂಬು ಹಿಡಿದು ಬೀದಿಗಿಳಿದ ಕಾಂಗ್ರೆಸ್ ಕಾರ್ಯಕರ್ತರು, ಪ್ರಧಾನಿ ಮೋದಿ ಹಾಗೂ ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ವಿರುದ್ದ ಧಿಕ್ಕಾರದ ಘೋಷಣೆಗಳನ್ನು ಕೂಗಿ, ವಾಗ್ದಾಳಿ ನಡೆಸಿದರು.

ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ‘ಕೇಂದ್ರದ ಬಿಜೆಪಿ ಸರಕಾರ, ಕರ್ನಾಟಕ ರಾಜ್ಯಕ್ಕೆ ಘೋರ ಅನ್ಯಾಯ ಮಾಡಿದೆ. ಕರ್ನಾಟಕದ ಜನರು, ರೈತರು ಬರ ಪರಿಹಾರ ಕೇಳಿದರೆ ಬಿಜೆಪಿ ಸರಕಾರ ಖಾಲಿ ಚೊಂಬು ನೀಡಿದೆ. 15ನೆ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ ಬರಬೇಕಾದ ಪಾಲನ್ನು ಕೇಳಿದರೆ ಕೇಂದ್ರ ನಮಗೆ ಕೊಟ್ಟಿರುವುದು ಚೊಂಬು’ ಎಂದು ಲೇವಡಿ ಮಾಡಿದರು.

‘ಕರ್ನಾಟಕದ ಜನ ಭದ್ರಾ ಮೇಲ್ದಂಡೆ ಯೋಜನೆಗೆ 6 ಸಾವಿರ ಕೋಟಿ ರೂ.ಕೇಳಿದರೆ, ಕೇಂದ್ರ ಸರಕಾರ ಬಜೆಟ್‍ನಲ್ಲಿ ಘೋಷಿಸಿದ ಹಣವನ್ನು ಕೇಳಿದರೆ ಪ್ರಧಾನಿ ಚೊಂಬು ನೀಡಿದ್ದಾರೆ. ಕರ್ನಾಟಕದ ಜನರು ಕೇಂದ್ರಕ್ಕೆ 100 ರೂ.ತೆರಿಗೆ ನೀಡಿದರೆ ಅವರಿಗೆ ವಾಪಸ್ ಬರುತ್ತಿರುವುದು ಕೇವಲ 13ರೂ. ಮಾತ್ರ. ಬೆಂಗಳೂರಿನ ಫೆರಿಫೆರಲ್ ರಿಂಗ್ ರಸ್ತೆ ಮಾಡಲು ಅನುದಾನ ನೀಡುವುದಾಗಿ ಹೇಳಿದ ಕೇಂದ್ರ ಸರಕಾರ ನಂತರ ಚೊಂಬು ನೀಡಿದೆ ಎಂದು ಅವರು ಟೀಕಿಸಿದರು.

‘ದೇಶದ ಜನರ ಖಾತೆಗೆ 15 ಲಕ್ಷ ರೂ.ಹಾಕುತ್ತೇವೆಂದು ಹೇಳಿದ ಪ್ರಧಾನಿ ಮೋದಿ ಜನರ ಕೈಗೆ ಕೊಟ್ಟಿದ್ದು ಚೊಂಬು. ಕೇಂದ್ರಕ್ಕೆ ಚುನಾವಣೆ ಬಾಂಡ್ ಬಗ್ಗೆ ಕೇಳಿದರೆ ಚೊಂಬು ನೀಡುತ್ತಾರೆ. ಹೀಗಾಗಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕ ಹಾಗೂ ದೇಶದ ಜನರು ಬಿಜೆಪಿಗೆ ಖಾಲಿ ಚೊಂಬು ನೀಡಲಿದ್ದಾರೆ’ ಎಂದು ರಣದೀಪ್ ಸಿಂಗ್ ಸುರ್ಜೆವಾಲ ಭವಿಷ್ಯ ನುಡಿದರು.

ಬಿಜೆಪಿಯವರ ಕೈಗೆ ಜನರೇ ಚೊಂಬು ಕೊಡುತ್ತಾರೆ: ಅತಿ ಹೆಚ್ಚು ತೆರೆಗೆ ಪಾವತಿಸುವ ಕರ್ನಾಟಕ ರಾಜ್ಯಕ್ಕೆ ಮೋದಿ ಸರಕಾರ ಮಾತ್ರ ಶೂನ್ಯ ಕೊಡುಗೆ ನೀಡುವ ಮೂಲಕ ಜನಸಾಮಾನ್ಯರ ಕೈಗೆ ಖಾಲಿ ಚೊಂಬು ಕೊಟ್ಟಿದ್ದಾರೆ ಎಂದು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರೊ.ಎಂ.ವಿ. ರಾಜೀವ್ ಗೌಡ ವ್ಯಂಗ್ಯವಾಡಿದರು.

ಭೂಪಸಂದ್ರ ಬಸ್ ನಿಲ್ದಾಣದ ಬಳಿ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕರ್ನಾಟಕ ಅದರಲ್ಲೂ ಬೆಂಗಳೂರು ನಗರ ಹೆಚ್ಚು ತೆರಿಗೆ ಪಾವತಿಸುತ್ತಾ ಬಂದಿದೆ. ಆದರೆ, ಈ ಕೇಂದ್ರ ತನ್ನ ಪಕ್ಷಗಳು ಆಳ್ವಿಕೆ ಇರುವ ರಾಜ್ಯಗಳಿಗೆ ಎತೇಚ್ಚವಾಗಿ ಹಣ ಬಿಡುಗಡೆ ಮಾಡಿ, ಕರ್ನಾಟಕಕ್ಕೆ ಮಾತ್ರ ಮಲತಾಯಿ ಧೋರಣೆ ಮಾಡುತ್ತಿದೆ. ಪ್ರಧಾನಿ ಮೋದಿ ಕರ್ನಾಟಕಕ್ಕೆ ನೀಡಿರುವ ಕೊಡುಗೆ ಶೂನ್ಯವಾಗಿದ್ದು, ಹತ್ತು ವರ್ಷಗಳಲ್ಲಿ ನಾಡಿನ ಜನತೆಗೆ ‘ಚೊಂಬು’ ನೀಡಿದ್ದಾರೆ.

ಬರ ಪರಿಹಾರ ವಿಚಾರದಲ್ಲಿಯೂ ನಮಗೆ ಮೋಸ ಮಾಡಿದ್ದಾರೆ. ಅಷ್ಟೇ ಏಕೆ, ತಾವು ಅಧಿಕಾರಕ್ಕೆ ಬರುವ ಅತಿಯಾಸೆಯಿಂದ ಎಲ್ಲರ ಖಾತೆಗೆ 15ಲಕ್ಷ ರೂ.ಹಾಕುತ್ತೇವೆಂದು ಹೇಳಿದ್ದು ಮಾತ್ರ ದೊಡ್ಡ ಮೋಸ. ರಾಜ್ಯದಿಂದ ಆಯ್ಕೆಯಾದ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ 27 ಜನ ಸಂಸದರು ರಾಜ್ಯಕ್ಕೆ ನೀಡಿದ್ದು ಚೊಂಬು. ಹೀಗೆ ಇಷ್ಟೆಲ್ಲಾ ಚೊಂಬುಗಳನ್ನು ನೀಡಿರುವ ಬಿಜೆಪಿ ಪಕ್ಷಕ್ಕೆ ಈ ಲೋಕಸಭಾ ಚುನಾವಣೆಯಲ್ಲಿ ನಮ್ಮ ಸ್ವಾಭಿಮಾನ ಕನ್ನಡಿಗರು ಅದೇ ಚೊಂಬನ್ನು ನೀಡಿ ಮನೆಗೆ ಕಳುಹಿಸಿಲಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ನಡೆಸಿದ ಖಾಲಿ ಚೊಂಬು ಪ್ರತಿಭಟನೆಯಲ್ಲಿ ಸಚಿವರಾದ ಕೃಷ್ಣ ಭೈರೇಗೌಡ, ಬೈರತಿ ಸುರೇಶ್, ಶಾಸಕ ರಿಝ್ವಾನ್ ಅರ್ಶದ್, ಎಐಸಿಸಿ ಕಾರ್ಯದರ್ಶಿ ಅಭಿಶೇಕ್ ದತ್ತ್, ಮುಖಂಡರಾದ ವಿಜಯ್ ಮುಗುಂದ್, ಸುಧೀಂದ್ರ, ಎ.ಎನ್.ನಟರಾಜ್ ಗೌಡ ಸೇರಿದಂತೆ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಪ್ರಧಾನಿ ಮೋದಿ ತಲುಪಿದ ‘ಖಾಲಿ ಚೊಂಬು’: ಕೇಂದ್ರದ ತೆರಿಗೆ ಅನ್ಯಾಯವನ್ನು ವಿರೋಧಿಸಿ ಕಾಂಗ್ರೆಸ್ ಪಕ್ಷವು ‘ಕರ್ನಾಟಕಕ್ಕೆ ಮೋದಿ ಸರಕಾರ ಕೊಟ್ಟ ಕೊಡುಗೆ ಚೊಂಬು’ ಎಂಬ ಪತ್ರಿಕೆಯೊಂದರಲ್ಲಿನ ಜಾಹೀರಾತು ಪ್ರತಿಯನ್ನು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಪ್ರಧಾನಿ ಮೋದಿಯವರಿಗೆ ಅರಮನೆ ಮೈದಾನದಲ್ಲೇ ನಡೆದ ಸಮಾವೇಶದಲ್ಲಿ ತೋರಿಸಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News