ಕುಮಾರಸ್ವಾಮಿಯವರ ನಿವಾಸಕ್ಕೆ ವಿದ್ಯುತ್ ಕಂಬದಿಂದ ಅಕ್ರಮ ವಿದ್ಯುತ್ ಸಂಪರ್ಕ ಎಂದು ವೀಡಿಯೊ ಹಂಚಿಕೊಂಡ ಕಾಂಗ್ರೆಸ್

Update: 2023-11-14 06:41 GMT

ಬೆಂಗಳೂರು: 'ಜಗತ್ತಿನ ಏಕೈಕ ಮಹಾಪ್ರಾಮಾಣಿಕ ಎಚ್.ಡಿ ಕುಮಾರಸ್ವಾಮಿಯವರ ಬೆಂಗಳೂರಿನಲ್ಲಿರುವ ಜೆ ಪಿ ನಗರದ ನಿವಾಸದ ದೀಪಾವಳಿಯ ದೀಪಾಲಂಕಾರಕ್ಕೆ ನೇರವಾಗಿ ವಿದ್ಯುತ್ ಕಂಬದಿಂದ ಅಕ್ರಮ ವಿದ್ಯುತ್ ಸಂಪರ್ಕ ಪಡೆದಿದ್ದಾರೆ' ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ.  

ಈ ಸಂಬಂಧ ಎಕ್ಸ್ ಖಾತೆಯಲ್ಲಿ ವೀಡಿಯೊ ಹಂಚಿಕೊಂಡಿರುವ ಕಾಂಗ್ರೆಸ್ ''ಒಬ್ಬ ಮಾಜಿ ಸಿಎಂ ಆಗಿ ವಿದ್ಯುತ್ ಕಳ್ಳತನ ಮಾಡುವ ದಾರಿದ್ರ್ಯ ಬಂದಿದ್ದು ದುರಂತ'' ಎಂದು ಹೇಳಿದೆ. 

''ಕುಮಾರಸ್ವಾಮಿ ಅವರೇ ನಮ್ಮ ಸರ್ಕಾರ ಗೃಹಜ್ಯೋತಿಯಲ್ಲಿ 200 ಯೂನಿಟ್ ಉಚಿತ ಕೊಡುತ್ತಿದೆಯೇ ಹೊರತು 2000 ಯೂನಿಟ್ ಅಲ್ಲ! ತಮಗೆ ಅಷ್ಟೊಂದು ದಾರಿದ್ರ್ಯ ಬಂದಿದ್ದರೆ ಗೃಹಜ್ಯೋತಿ ಯೋಜನೆಗೆ ಒಂದು ಅರ್ಜಿ ಹಾಕಬಹುದಿತ್ತಲ್ಲ, ಒಹ್, ತಿಳಿದಿರಲಿಲ್ಲ ಗೃಹಜ್ಯೋತಿಯಲ್ಲಿ ಒಬ್ಬರಿಗೆ ಒಂದೇ ಮೀಟರ್ ಗೆ ಅವಕಾಶವಿದೆ, ತಮ್ಮ ಹೆಸರಲ್ಲಿ ಹಲವು ಮೀಟರ್ ಗಳಿವೆಯಲ್ಲವೇ!'' ಎಂದು ಕಟಕಿಯಾಡಿದೆ.

''ರಾಜ್ಯದ ವಿದ್ಯುತ್ ಕೊರತೆಯ ನಡುವೆಯೂ ರೈತರಿಗೆ 7 ಗಂಟೆ ವಿದ್ಯುತ್ ಕೊಡುವ ಕ್ರಮ ಕೈಗೊಂಡಿದ್ದರೂ ಪುಂಖಾನುಪುಂಕವಾಗಿ ಮಾತಾನಾಡುವ ತಾವು ಇಂತಹ ಚೀಪ್ ಕಳ್ಳತನಕ್ಕೆ ಇಳಿಯುವಷ್ಟು “ಬರ” ಎದುರಿಸುತ್ತಿದ್ದೀರಾ?'' ಅದೇನೋ ಪತ್ರಿಕಾಗೋಷ್ಠಿ ನಡೆಸಿ “ಕರ್ನಾಟಕ ಕತ್ತಲಲ್ಲಿದೆ“ ಎನ್ನುತ್ತಾ ಬಡಬಡಿಸಿದ್ದಿರಲ್ಲವೇ, ಈಗ ಕದ್ದ ವಿದ್ಯುತ್ತಿನಲ್ಲಿ ನಿಮ್ಮ ಮನೆಗೆ ಬೆಳಕು ಮಾಡಿಕೊಂಡಿದ್ದೀರಿ,ನಿಮ್ಮ ಮನೆ ಹೀಗೆ ಜಗಮಗ ಹೊಳೆಯುತ್ತಿರುವಾಗ ಅದ್ಯಾವ ಬಾಯಲ್ಲಿ ಕರ್ನಾಟಕ ಕತ್ತಲಲ್ಲಿದೆ ಎನ್ನುವಿರಿ ಸ್ವಾಮಿ?!'' ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ. 

''ನಿಮ್ಮದೇ ಶೈಲಿಯ ಪ್ರಶ್ನೆ ಕೇಳಬೇಕೆಂದರೆ, ರಾಜ್ಯ ಬರ ಎದುರಿಸುತ್ತಿರುವಾಗ ನಿಮ್ಮ ಮನೆ ಮಾತ್ರ ಜಗಮಗಿಸಬೇಕೆ? ರೈತರ ಪಾಲಿನ ವಿದ್ಯುತ್ ಕಳ್ಳತನ ಮಾಡಿ ಮೋಜು ಮಾಡಬೇಕೆ? ನಿಮ್ಮ ಮನೆಯ ದೀಪಾವಳಿಗೆ ರಾಜ್ಯದ ಜನರ “ದಿವಾಳಿ”ಯನ್ನು ಬಯಸುತ್ತಿದ್ದೀರಾ? ವಿದ್ಯುತ್ತನ್ನೇ ಬಿಡದೆ ಲೂಟಿ ಮಾಡುವ ತಾವು ರಾಜ್ಯವನ್ನು ಇನ್ನೆಷ್ಟು ಲೂಟಿ ಮಾಡಿರಬಹುದು?'' ಎಂದು ಕುಮಾರಸ್ವಾಮಿ ಅವರನ್ನು ಕಾಂಗ್ರೆಸ್ ತರಾಟೆಗೆ ತೆಗೆದುಕೊಂಡಿದೆ. 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News